ವಿಜಯಪುರ: ಶಾಲೆಗೆ ಹೋಗಿ ಎದೆಯಲ್ಲಿ ಅಕ್ಷರ ಬಿತ್ತಿಕೊಳ್ಳಬೇಕಿದ್ದ ಈ ಮಕ್ಕಳು ಪುಡಿಗಾಸಿನ ಆಸೆಗೆ ಸರ್ಕಾರಿ ಇಲಾಖೆಯೊಂದರ ಆವರಣದಲ್ಲೇ ಬಾಲ್ಯದಲ್ಲೇ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇಂಥವರ ರಕ್ಷಣೆಗೆಂದೇ ಇರುವ ಹಲವು ಇಲಾಖೆಗಳು, ಸರ್ಕಾರಿ ಅನುದಾನ ಪಡೆಯುತ್ತಿರುವ ಸರ್ಕಾರೇತರ ಸಂಸ್ಥೆಗಳು ಇತ್ತ ಚಿತ್ತ ನೆಟ್ಟಿಲ್ಲ. ಪರಿಣಾಮ ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಇದು ವಿಜಯಪುರ ಸರ್ಕಾರಿ ಸ್ವಾಮ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಕಂಡು ಬರುವ ದೃಶ್ಯ. ಈ ಮಾರುಕಟ್ಟೆಗೆ ನಿತ್ಯವೂ ಹಣ್ಣು ಮತ್ತು ತರಕಾರಿ ಹೊತ್ತು ಬರುವ ನೂರಾರು ಲಾರಿಗಳಿಂದ ಇಳಿಸುವ ಹಾಗೂ ತುಂಬುವ ಕೆಲಸ ಈ ಮಕ್ಕಳದ್ದೇ. ಇದಕ್ಕಾಗಿ ಇಲ್ಲಿನ ವ್ಯಾಪಾರಿಗಳು ಹಾಗೂ ರೈತರು ಕೊಡುವ ಪುಡಿಗಾಸು ಇವರಿಗೆ ಆಸರೆಯಾಗಿದೆ.
ಹೆಚ್ಚಿನ ಬೇಡಿಕೆ: ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಹೊಂದಿರುವ ಕೊಂಡಿರುವ ಹಲವು ಕೊಳಚೆ ಪ್ರದೇಶಗಳಿದ್ದು, ಇಲ್ಲಿಂದ ಬರುವ ಬಡ ಕುಟುಂಬಗಳ ಮಕ್ಕಳೇ ಇಲ್ಲಿನ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಲೋಡ್ ಮಾಡಿಕೊಂಡ ವಾಹನಗಳು ಬರುತ್ತಲೇ ಮುತ್ತಿಕೊಳ್ಳುವ ಈ ಮಕ್ಕಳು ವಾಹನಗಳಿಂದ ಹಣ್ಣು-ತರಕಾರಿ ಇಳಿಸುವ ಕೆಲಸ ಮಾಡುತ್ತಾರೆ. ಬಳಿಕ ಹರಾಜು ಪ್ರಕ್ರಿಯೆ ಮುಗಿದ ಮೇಲೆ ಮತ್ತೆ ವಾಹನಗಳಿಗೆ ಲೋಡ್ ಮಾಡುವ ಕೆಲಸವೂ ಇವರದ್ದೇ. ಹೀಗೆ ಮಾಡುವ ಕೆಲಸಕ್ಕೆ ಇವರಿಗೆ ಕೊಳೆತ ಹಣ್ಣು ಹಾಗೂ ಪುಡಿಗಾಸು ಸಿಗುತ್ತದೆ. ಹೀಗಾಗಿ ವಯಸ್ಕ ಕಾರ್ಮಿಕರಿಗಿಂತ ಈ ಮಾರುಕಟ್ಟೆಯಲ್ಲಿ ಬಾಲಕಾರ್ಮಿಕರ ಸೇವೆಗೆ ಹೆಚ್ಚಿನ ಬೇಡಿಕೆ ಇದೆ.
ಹಣ್ಣು-ಪುಡಿಗಾಸಿನ ಆಸೆ: ನಿತ್ಯವೂ 20-30ರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಈ ಬಾಲ ಕಾರ್ಮಿಕರು ಹಲವು ಸಂದರ್ಭಗಳಲ್ಲಿ ನೂರರ ಗಡಿಯಲ್ಲೂ ಕಾಣ ಸಿಗುತ್ತಾರೆ. ಬಾಲ ಕಾರ್ಮಿಕರ ಸೇವೆ ನಿಷಿದ್ಧ ಎಂಬ ಕಾನೂನಿನ ಮಾಹಿತಿ ಇಲ್ಲಿನ ಅಧಿಕಾರಿಗಳು ಹಾಗೂ ವ್ಯಾಪಾರಿಗಳಿಗೆ ಇದೆ. ಹೀಗಾಗಿ ಹಲವು ವ್ಯಾಪಾರಿಗಳು ಇದನ್ನು ವಿರೋಧಿಸಿದರೂ ಹಣ್ಣು ಹಾಗೂ ಬಿಡಿಗಾಸಿನ ಆಸೆಗೆ ಈ ಮಕ್ಕಳು ಬಲವಂತಕ್ಕೆ ಕೆಲಸ ಮಾಡುತ್ತಾರೆ ಎಂದು ಸಗಟು ವ್ಯಾಪಾರಿಗಳು, ಏಜೆಂಟರು ಹೇಳುತ್ತಾರೆ.
ಮತ್ತೊಂದೆಡೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾರ್ಮಿಕರ ಇಲಾಖೆ, ಕಂದಾಯ, ಪೊಲೀಸ್ ಸೇರಿದಂತೆ ಹಲವು ಇಲಾಖೆಗಳಲ್ಲಿ ಇಂಥ ಮಕ್ಕಳ ಸಮೀಕ್ಷೆ, ರಕ್ಷಣೆ-ಸಂರಕ್ಷಣೆಗಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ, ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಕಲ್ಯಾಣ ಸಮಿತಿ ಮಾತ್ರವಲ್ಲ, ಬಾಲ ನ್ಯಾಯ ಮಂಡಳಿಯೂ ಇದೆ. ಸರ್ಕಾರೇತರ ಹಲವು ಸಂಸ್ಥೆಗಳು ಮಕ್ಕಳ ಹೆಸರಿನಲ್ಲೇ ಕೆಲಸ ಮಾಡುತ್ತಿವೆ.
ಸಮನ್ವಯ-ಇಚ್ಛಾಶಕ್ತಿ ಕೊರತೆ: ಹೀಗೇಕೆ ಎಂದು ಯಾವುದೇ ಇಲಾಖೆ ಅಧಿಕಾರಿ-ಸಿಬ್ಬಂದಿ ಮಾತನಾಡಿಸಿದರೆ ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿ, ಇತಿ-ಮಿತಿ ಅಂತಲೇ ಹೇಳುತ್ತ ಪರಸ್ಪರ ಒಬ್ಬರ ಮೇಲೊಬ್ಬರು ಹೊಣೆಗಾರಿಕೆ ಜಾರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವ ಹೆಸರಿನಲ್ಲಿ ಕೆಲಸ ಮಾಡುವ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ಹಾಗೂ ಸರ್ಕಾರೇತರ ಸಂಸ್ಥೆಗಳ ಮಧ್ಯೆ ಪರಸ್ಪರ ಸಮನ್ವಯವೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಾರಿಗೂ ಇಚ್ಛಾಶಕ್ತಿ ಇಲ್ಲದಿರುವುದು ಸ್ಪಷ್ಟವಾಗುತ್ತಿದೆ.
ಇಂಥ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಕೆಲಸಕ್ಕಾಗಿಯೇ ಸರ್ಕಾರ ಹಲವು ಅಧಿಕಾರಿ-ಸಿಬ್ಬಂದಿ ನೇಮಿಸಿ ಕೋಟಿ ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ ಇಂಥ ಯಾವ ಇಲಾಖೆ-ಅಧಿಕಾರಿ-ಸರ್ಕಾರೇತರ ಸಂಸ್ಥೆ ಹೀಗೆ ಯಾರೊಬ್ಬರೂ ನಗರದ ಹೃದಯ ಭಾಗದಲ್ಲಿರುವ ಈ ಬಾಲ ಕಾರ್ಮಿಕರು ಕಣ್ಣು ಹಾಯಿಸಿಲ್ಲ ಎಂಬುದು ಅಚ್ಚರಿ ಮೂಡಿಸುತ್ತಿದೆ. ಇನ್ನೂ ಅಚ್ಚರಿ ಹಾಗೂ ಗಮನೀಯ ಅಂಶ ಎಂದರೆ ಈ ಮಕ್ಕಳು ಕೆಲಸ ಮಾಡುವ ಆವರಣದಲ್ಲೇ ಪೊಲೀಸ್ ಠಾಣೆಯೂ ಇರುವುದು.
ಇನ್ನಾದರೂ ಈ ಮಕ್ಕಳ ಸಂರಕ್ಷಣೆ ಮಾಡುವ ಜೊತೆಗೆ ಅವರ ಶಿಕ್ಷಣ ಹಾಗೂ ಸಮಾಜದ ಮುಕ್ತ ವಾಹಿನಿಯಲ್ಲಿ ಗೌರವಯುತವಾಗಿ ಬದುಕುವುದಕ್ಕೆ ದಾರಿ ಮಾಡಿಕೊಡಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಮಕ್ಕಳ ಹಕ್ಕುಗಳ ವಿಷಯದಲ್ಲಿ ಕೆಲಸ ಮಾಡಲು ಸಮನ್ವಯ ಸಾಧಿಸುವ ಮೂಲಕ ಸರ್ಕಾರಿ ಲೆಕ್ಕದಲ್ಲಿ ಮಕ್ಕಳ ಸಂರಕ್ಷಣೆ ಸಾಧನೆ ಮಾಡಿರುವ ಕೆಲಸಕ್ಕೆ ಕಡಿವಾಣ ಹಾಕಬೇಕಿದೆ.
ಜಿ.ಎಸ್. ಕಮತರ