Advertisement

ಹಳ್ಳಿ ಸಂಸ್ಕೃತಿ ಉಳಿಸಿ-ಬೆಳೆಸಿ

11:49 AM Feb 09, 2020 | Naveen |

ವಿಜಯಪುರ: ದೇಶದ ಇಂದಿನ ಯುವ ಸಮೂಹ ಪೂರ್ವಜರ ಪಾರಂಪರಿಕ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಭವಿಷ್ಯದ ತಲೆಮಾರಿಗೆ ದೇಶಿ ಸಂಸ್ಕೃತಿ ರಾಯಭಾರಿಗಳಾಗುವ ಹೊಣೆಗಾರಿಕೆ ನಿಭಾಯಿಸಿ ಎಂದು ಜಿಲ್ಲಾಧಿಕಾರಿ ವೈ. ಎಸ್‌. ಪಾಟೀಲ ಸಲಹೆ ನೀಡಿದರು.

Advertisement

ಶನಿವಾರ ನಗರದ ಐತಿಹಾಸಿಕ ಆನಂದ ಮಹಲ್‌ ಸ್ಮಾರಕ ಸಾಂಸ್ಕೃತಿಕ ವೇದಿಯಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಹಾಗೂ ಯುವ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಯುವಜನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಯುವಕರು ನಗರೀಕರಣ ಹಾಗೂ ವಿದೇಶಿ ವ್ಯಾಮೋಹಕ್ಕೆ ಮಾರು ಹೋಗಿ ಹಳ್ಳಿ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಹಳ್ಳಿಗಳು ಬರಿದಾಗಿ ನಗರಗಳು ಕೊಳಚೆ ಪ್ರದೇಶ ಸೃಷ್ಟಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವ ಸಮೂಹ ಮತ್ತೂಂದೆಡೆ ಹಳ್ಳಿ ತೊರೆದು ಪಟ್ಟಣಗಳ ಕಡೆ ವಾಲುತ್ತಿದ್ದಾರೆ. ಹಳ್ಳಿ ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ಮರೆಯದೆ ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಭವಿಷ್ಯದ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು. ಹಳ್ಳಿಗಳಲ್ಲಿ ಅಡಗಿರುವ ಭಾರತೀಯ ಸಂಸ್ಕೃತಿ ಮಹತ್ವ ಅರಿಯುವ ಮೂಲಕ ಇಂದಿನ ಯುವಕರು ನಶಿಸಿ ಹೊಗುತ್ತಿರುವ ಜಾನಪದ, ಲಾವಣಿ ಪದಗಳು, ಗಿಗೀ ಪದಗಳಂತ ನಮ್ಮ ನೆಲದ ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಬೇಕು. ಯುವಜನ ಮೇಳ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಯುವ ಜನೋತ್ಸವದಂಥ ವೇದಿಕೆಗಳನ್ನು ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಾವಿದ್‌ ಜಮಾದಾರ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಕೇವಲ ಸರ್ಕಾರದಲ್ಲ, ಬದಲಿಗೆ ಸಾರ್ವಜನಿಕರು ತಮ್ಮ ಮಕ್ಕಳಿಗೆ ಪಾಶ್ಚಿಮಾತ್ಯ ಹಾಡು, ಸಂಗೀತಗಳ ಬದಲಿಗೆ ಭಾರತಿಯ ಜಾನಪದದಂತಹ ಹಾಡುಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

Advertisement

ಅರವಿಂದ ಕೊಪ್ಪ ಮಾತನಾಡಿ, ಯಾವ ವಿಶ್ವವಿದ್ಯಾಲಯಗಳು ಕಲಿಸದ ಅನೇಕ ವಿಷಯಗಳನ್ನು ನಮ್ಮ ಜಾನಪದ ಸಾಹಿತ್ಯ ನೀಡಿದೆ. ಜಾನಪದ ಕೇವಲ ಸಾಹಿತ್ಯ ವರ್ಗಾವಣೆಯಲ್ಲ ಬದಲಿಗೆ ಅದು ಜ್ಞಾನದ ವರ್ಗಾವಣೆ, ಹೃದಯದ ವರ್ಗಾವಣೆಯಾಗಿದೆ ಎಂದರು. ಎರಡು ದಿನದ ಯುವಜನ ಮೇಳದಲ್ಲಿ ಸುಮಾರು 500ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದು ಆನಂದ ಮಹಲ್‌ನ ಸಾಂಸ್ಕೃತಿಕ ವೇದಿಕೆ, ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣ ಸಭಾಭವನ, ನೆಹರು ಯುವಕೇಂದ್ರ ಸಭಾಭವನಗಳಲ್ಲಿ ಎರಡು ದಿನ ವಿವಿಧ ಸ್ಪರ್ಧೆಗಳು ನಡೆಯಲಿವೆ. ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಎಸ್‌.ಜಿ. ಲೋಣಿ, ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಎಸ್‌.ಬಾಲಾಜಿ, ಸಂಜೀವ ಖೋತ, ಸಂತೋಷಕುಮಾರ ನಿಗಡಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next