Advertisement

ಯೋಜನೆ ಮಾಹಿತಿಗೆ ಯುವ ಸ್ಪಂದನ ಕೇಂದ್ರ

05:12 PM Jul 06, 2019 | Naveen |

ವಿಜಯಪುರ: ಯುವ ಸ್ಪಂದನ ಕಾರ್ಯಕ್ರಮ ಮೂಲಕ ಮುಖ್ಯವಾಗಿ ದಿವ್ಯಾಂಗರಿಗೆ ಮಾರ್ಗದರ್ಶನ, ಆತ್ಮವಿಶ್ವಾಸದ ಅಗತ್ಯವಿರುತ್ತದೆ. ಆದ್ದರಿಂದ ದಿವ್ಯಾಂಗರನ್ನು ಕೇಂದ್ರವಾಗಿಟ್ಟುಕೊಂಡು ಅಂತಹವರಿಗೆ ಪ್ರೋತ್ಸಾಹ ನೀಡಿ ಸರ್ಕಾರದ ಯೋಜನೆಗಳ ಮಾಹಿತಿ ಒದಗಿಸಿ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರದ ಜನ ಆರೋಗ್ಯ ಕೇಂದ್ರ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಬೆಂಗಳೂರು ಇವರ ಸಹಯೋಗದಲ್ಲಿ ನಡೆಯುತ್ತಿರುವ ಯುವ ಸ್ಪಂದನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, 2019-ಜೂನ್‌ ತಿಂಗಳಲ್ಲಿ ಜಿಲ್ಲಾ ಯುವ ಸ್ಪಂದನ ತಂಡದ ಕಾರ್ಯಕ್ರಮಗಳು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವುದನ್ನು ಶ್ಲಾಘಿಸಿದರು.

ಯುವ ಸ್ಪಂದನ ಕಾರ್ಯಕ್ರಮವು ವಿದ್ಯಾವಂತ ಯುವಕ-ಯುವತಿಯರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತ ಬಂದಿದೆ. ಯುವಜನ ಸಂಬಂಧಿಸಿದ ಯಾವುದೇ ವಿಷಯಗಳಿಗೆ ಸಹಾಯ ಅಥವಾ ಮಾರ್ಗದರ್ಶನ ಅಗತ್ಯವಿದ್ದಲ್ಲಿ ಜಿಲ್ಲೆಯ ಯುವ ಸ್ಪಂದನ ಕೇಂದ್ರವನ್ನು ಸಂಪರ್ಕಿಸಬಹುದು. ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನದ ಅಗತ್ಯವಿದ್ದಲ್ಲಿ ಯುವ ಸ್ಪಂದನ ಕೇಂದ್ರದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಯುವ ಸ್ಪಂದನ ಕಾರ್ಯಕ್ರಮ ಗ್ರಾಪಂ ಮಟ್ಟದಲ್ಲಿಯೂ ಶಾಲಾ, ಕಾಲೇಜಗಳಲ್ಲಿಯೂ ನಡೆಯುತ್ತದೆ. ಯುವಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಾನಸಿಕ ಸಮಸ್ಯೆ ದುಶ್ಚಟಗಳ ನಿವಾರಣೆ, ಸಂಬಂಧಗಳ ನಿರ್ವಹಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಯುವ ಸ್ಪಂದನ ಕೇಂದ್ರ ಸಲಹೆ ನೀಡುತ್ತದೆ ಎಂದರು.

ಸಭೆಯಲ್ಲಿ ಹಾಜರಿದ್ದ ಜಿಪಂ ಸಿಇಒ ವಿಕಾಸ ಸುರಳಕರ ಮಾತನಾಡಿ, ಯುವ ಸ್ಪಂದನ ಕಾರ್ಯಕ್ರಮದ ಪ್ರಕ್ರಿಯೆ ಸವಾಲುಗಳ ಕುರಿತು ಮಾಹಿತಿ ಪಡೆದುಕೊಂಡರು. ಯುವ ಸ್ಪಂದನ ಕಾರ್ಯಕ್ರಮದ ಕೋ-ಆರ್ಡಿನೇಟರ್‌ ಅಮರೇಶ ಕಾರ್ಯಕ್ರಮ ಪ್ರಕ್ರಿಯೆ-ಉದ್ದೇಶ ಕುರಿತು ವಿವರಿಸಿದರು.

Advertisement

ಸಭೆಯಲ್ಲಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಜಿ. ಲೋಣಿ, ನೆಹರು ಯುವ ಕೇಂದ್ರದ ಡಿ.ದಯಾನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಹೇಂದ್ರ ಕಾಪ್ಸೆ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next