ವಿಜಯಪುರ: ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸ್ವಚ್ಛ ನಗರ ಫೌಂಡೇಶನ್ ಮತ್ತು ರಾಮನವಮಿ ಉತ್ಸವ ಸಮಿತಿ ಸಹಯೋಗದಲ್ಲಿ ಜೂನ್ 21 ರಂದು ಯೋಗ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಯೋಗ ಶಿಬಿರದ ಮಾಹಿತಿ ನೀಡಿದ ಭುರಣಾಪೂರ ಆರೂಢ ಆಶ್ರಮದ ಯೋಗೇಶ್ವರಿ ಮಾತಾಜಿ ಹಾಗೂ ರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಅವರು ಬಾಲಗಾಂವದ ಅಮೃತಾನಂದ ಶ್ರೀಗಳ ಸಾರಥ್ಯದಲ್ಲಿ ಅಂದು ಬೆಳಿಗ್ಗೆ 5-30 ಕ್ಕೆ ನಡೆಯುವ ಶಿಬಿರದಲ್ಲಿ 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಯೋಗ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ರೋಗ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಯೋಗ ಜೀವನ ಅಗತ್ಯವಾಗಿದೆ. ಹೀಗಾಗಿ ನಗರದ ಪ್ರತಿ ಬಡಾವಣೆಯಲ್ಲಿ ಯೋಗ ಕೇಂದ್ರ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು.
ಊರಿಗೊಂದು ಆಸ್ಪತ್ರೆ ಎಂಬುದನ್ನು ತಪ್ಪಿಸಿ ಪ್ರತಿ ಗಲ್ಲಿಗೊಂದು ಯೋಗ ಕೇಂದ್ರ ತೆರೆಯುವ ಸಂಕಲ್ಪದಿಂದ ಭವಿಷ್ಯದಲ್ಲಿ ಈ ಅಭಿಯಾನ ಮುಂದುವರೆಸಲು ಯೋಜಿಸಲಾಗಿದೆ ಎಂದರು.
ಶರಣು ಸಬರದ, ಶಿವಾನಂದ ಬುಯ್ಯಾರ ಇತರರು ಉಪಸ್ಥಿತರಿದ್ದರು.