ವಿಜಯಪುರ: ವಿಶ್ವ ದಾಖಲೆ ನಿರ್ಮಿಸಿ ಗಿನ್ನಿಸ್ ಪುಸ್ತಕದಲ್ಲಿ ಹೆಸರು ದಾಖಲಿಸಲು ವಿಜಯಪುರ ನಗರದಲ್ಲೂ ಭಾನುವಾರ (ಜ.15) ನಸುಕಿನಲ್ಲಿ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯದಲ್ಲಿ ನಡೆದಿರುವ ಯೋಗಾಥಾನಗಾಗಿ ಜಿಲ್ಲೆಯಲ್ಲೂ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ದೈವಿಕ ಕ್ಷಮತೆಗಾಗಿ ಬದುಕಿನ ಭಾಗವಾಗಿಸಿಕೊಂಡು ಬಂದಿರುವ ಯೋಗ ಇದೀಗ ವಿಶ್ವದ ಗಮನ ಸೆಳೆದಿದೆ. ನೂತನ ಶಿಕ್ಷಣ ನೀತಿಯಲ್ಲೂ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ಭವಿಷ್ಯದಲ್ಲಿ ಯೋಗ ಜಾಗತೀಕವಾಗಿ ಆವರಿಸಿಕೊಳ್ಳಲಿದೆ ಎಂದರು.
ಇದರ ಭಾಗವಾಗಿ ಭಾರತೀಯರಲ್ಲಿ ಯೋಗದ ಮಹತ್ವದ ಕುರಿತು ಮನವರಿಕೆ ಮಾಡುವುದಕ್ಕಾಗಿ ಕೇಂದ್ರ-ರಾಜ್ಯ ಸರ್ಕಾರಗಳು ವಿಶೇಷ ಆದ್ಯತೆ ನೀಡಿವೆ. ಇದರ ಭಾಗವಾಗಿ ಸಾಮೂಹಿಕ ಯೋಗದ ಮೂಲಕ ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ಬರೆಯಲು ಆರಂಭಿಸಿರುವ ಇಂದಿನ ಯೋಗಾಥಾನ ಕಾರ್ಯಕ್ರಮಕ್ಕೆ ಜನರು ನೀಡಿರುವ ಸ್ಪಂದನೆಗೆ ಹಾಗೂ ಉತ್ತಮವಾಗಿ ಕಾರ್ಯಕ್ರಮ ಸಂಘಟಿಸಿರುವ ಅಧಿಕಾರಿಗನ್ನು ಅಭಿನಂದಿಸುವುದಾಗಿ ಹೇಳಿದರು.
ಸೈನಿಕ ಶಾಲೆ ಪ್ರಾಚಾರ್ಯೆ ಪ್ರತಿಭಾ ಬಿಷ್ಟ್ ಅಧ್ಯಕ್ಷತೆಯಲ್ಲಿ ನಡೆದ ಯೋಗಾಥಾನ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಣಗಿ, ಜಿ.ಪಂ. ಸಿಇಒ ರಾಹುಲ್ ಶಿಂಧೆ, ಎಸ್ಪಿ ಆನಂದಕುಮಾರ, ಯುವ ಸಬಲೀಕರಣ-ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಬಲೀಜ, ಹಿರಿಯ ನಾಗರಿಕರು ವಿಕಲಚೇತನರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.