ವಿಜಯಪುರ: ವಿಶ್ವದಲ್ಲಿ ಪ್ರಸಕ್ತ ಎಲ್ಲ ಸಮಸ್ಯೆಗಳಿಗೆ ಅದರಲ್ಲೂ ಮನುಕುಲವನ್ನು ಕಾಡುತ್ತಿರುವ ಹಸಿವು, ಬಡತನ, ವಸತಿ, ನಿರುದ್ಯೋಗ, ವಲಸೆ, ಗಂಭೀರ ರೋಗ, ಯುದ್ಧ, ಮೂಲಭೂತ ಸೌಕರ್ಯಗಳ ಕೊರತೆ ಹೀಗೆ ಎಲ್ಲ ಸಮಸ್ಯೆಗಳಿಗೆ ಜನಸಂಖ್ಯಾ ಸ್ಫೋಟವೇ ಮೂಲ ಕಾರಣ ಎಂದು ವಲಯ ಶಿಕ್ಷಣ ಸಂಯೋಜಕ ಎಸ್.ಕೆ. ಬಿರಾದಾರ ಆಭಿಪ್ರಾಯಪಟ್ಟರು.
ನಗರದಲ್ಲಿ ಅಫಜಲಪುರ-ಟಕ್ಕೆ ಅಂಗನವಾಡಿ ಕೇಂದ್ರದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೊಶಿಯೇಶನ್ ಇಂಡಿಯಾ, ವರ್ಕ್ ಇಸ್ ವರ್ಶಿಫ್ ಇಂಟರ್ ನ್ಯಾಷನಲ್ ಫೌಂಡೇಶನ್, ಅಂತಾರಾಷ್ಟ್ರೀಯ ಬಸವಸೇನೆ, ಫಂಕ್-ಟು-ಡಿಸೈರ್ ಚಾರಿಟೆಬಲ್ ಟ್ರಸ್ಟ್ ಹಾಗೂ ಪುರಂದರ ಕಲಾ ಸಾಹಿತ್ಯ, ಶಿಕ್ಷಣ ಸಮಾಜ ಸೇವಾ ಸಂಸ್ಕೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರು ಕಡ್ಡಾಯ ಜನಸಂಖ್ಯಾ ನಿಯಂತ್ರಣ ಅಳವಡಿಸಿಕೊಳ್ಳಬೇಕಿದೆ ಎಂದರು.
ಖ್ಯಾತ ಮನೋತಜ್ಞೆ ಡಾ| ಪಲ್ಲವಿ ಅಡಿಗ ಮಾತನಾಡಿ, ಪ್ರತಿಯೊಬ್ಬರು ಜನಸಂಖ್ಯಾ ನಿಯಂತ್ರಣದ ಮಹತ್ವವನ್ನು ಅರಿತು ಚಾಚು ತಪ್ಪದೇ ಪಾಲಿಸಬೇಕಾದ ಅವಶ್ಯಕತೆ ಇದೆ. ಅದರಲ್ಲಿ ಮಹಿಳೆಯರು, ಬರಿ ದುಡಿಮೆ ಹಾಗೂ ಸಂಸಾರಿಕ ಬಂಧನದಲ್ಲಿ ಸಮಯ ವ್ಯರ್ಥ ಮಾಡಬಾರದು. ಬದಲಾಗಿ ತಮಗಿರುವ ಸ್ಥಾನಮಾನ ಆರೋಗ್ಯದ ಸ್ಥಿತಿಗತಿ ಹೆಚ್ಚು ಮಕ್ಕಳನ್ನು ಹೆರುವುದರಿಂದ ಆಗುವ ದುಷ್ಪರಿಣಾಮ, ಬಾಣಂತನದ ಸಂದರ್ಭದಲ್ಲಿ ತಾಯಿ, ಮಗುವಿಗೆ ಬರುವ ಮಾರಣಾಂತಿಕ ಕಾಯಿಲೆಗಳ ಬಗ್ಗೆ ಜಾಗೃತಿ ವಹಿಸಬೇಕು. ತಾಯಿ, ಮಗು ಸದೃಢವಾಗಿದ್ದರೆ ಕುಟುಂಬ ಸದೃಢ. ಪ್ರತಿಯೊಂದು ಕುಟುಂಬ ಸದೃಢವಾಗಿದ್ದರೆ ಇಡಿ ದೇಶ ಸದೃಢವಾಗಿರಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೇಶನ್ ಇಂಡಿಯಾ ಶಾಖಾ ಪ್ರಬಂಧಕ ಪ್ರಸನ್ನ ಜೋಶಿ ಮಾತನಾಡಿ, ನಮ್ಮ ಸಂಸ್ಥೆ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಜನತೆಗೆ ನಾನಾ ರೀತಿ ಸೇವೆ ಹಾಗೂ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮ ನೀಡುತ್ತ ಬಂದಿದ್ದು ಸಾವಿರಾರು ಜನ ಇದರ ಸದುಪಯೋಗ ಪಡೆಯುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಅತ್ಯವಶ್ಯವಾಗಿದ್ದು, ದೈಹಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ ಹಿನ್ನೆಲೆ ಅರಿತುಕೊಂಡು ಜೀವನ ಸಾಗಿಸುತ್ತ ಊರಿಗೊಂದು ವನ, ಓಣಿಗೊಂದು ಶಾಲೆ, ಮನೆಗೊಂದು ಮಗು ಎಂಬ ತತ್ವ ಎಲ್ಲರೂ ಪಾಲಿಸಿದರೆ ಈ ದೇಶ ಸುಂದರ, ಸುಸಂಸ್ಕೃತ, ಸದೃಢವಾಗುತ್ತದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ವರ್ಕ್ ಇಸ್ ವರ್ಶಿಫ್ ಇಂಟರ್ ನ್ಯಾಷನಲ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ದಾನೇಶ ಅವಟಿ, 2011 ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ ದಿನೇ ದಿನೇ ಅತಿ ವೇಗವಾಗಿ ಮುನ್ನಡೆಯುತ್ತಿದ್ದೆ. ಜನಸಂಖ್ಯೆ ಭಾರತದಲ್ಲಿ ಒಳ್ಳೆಯ ಮಾನವ ಸಂಪನ್ಮೂಲವಾಗಿದ್ದರು ಕೂಡ ರಾಷ್ಟ್ರದ ಪ್ರಗತಿಗೆ ಪೂರಕವಾಗದೆ ಇರುವುದು ದುರದೃಷ್ಟಕರ ಎಂದು ವಿಷಾದಿಸಿದರು.
ಶಿಕ್ಷಣ ಸಂಯೋಜಕ ವಿ.ಬಿ. ಜಂಗಿನ, ಛಾಯಾ ಚಿಪ್ಪಲಕಟ್ಟಿ, ಅಂತಾರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಸೋಮನಗೌಡ ಕಲ್ಲೂರ, ಸಿದ್ದು ಭಾವಿಕಟ್ಟಿ, ಎ.ಡಿ. ಮಕಾನದಾರ, ಲಕ್ಷ್ಮೀ, ಎಸ್.ಬಿ. ಹೈದರಖಾನ್ ಮಾತನಾಡಿದರು. ರಾಘವೇಣಿ ಪ್ರಾರ್ಥಿಸಿದರು. ಎಂ.ಜೆ. ಗಾಯಕವಾಡ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.