Advertisement

ಬಾಲಕಾರ್ಮಿಕ ಪದ್ಧತಿ ತೊಲಗಿಸಿ

10:55 AM Jun 13, 2019 | Naveen |

ವಿಜಯಪುರ: ಬಾಲ ಕಾರ್ಮಿಕ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಜೊತೆಗೂಡಿ ಕೆಲಸ ಮಾಡಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಕಾರಬಾರಿ ಹೇಳಿದರು.

Advertisement

ಬುಧವಾರ ನಗರದ ಸಿದ್ದೇಶ್ವರ ಕಲಾಭವನದಲ್ಲಿ ಬುಧವಾರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಎಲ್ಲ ಇಲಾಖೆಗಳು ಒಟ್ಟುಗೂಡಿ, ಶಿಕ್ಷಣದಿಂದ ವಂಚಿತ 14 ವರ್ಷದೊಳಗಿನ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸಲು ಎಲ್ಲರೂ ಕೈಜೋಡಿಸಬೇಕಿದೆ. ನನ್ನ ನಡೆ ಶಾಲೆ ಕಡೆ ಎಂಬ ಘೋಷವಾಕ್ಯದಡಿ ಬಾಲಕಾರ್ಮಿಕ ಪದ್ಧತಿಗೆ ಒಳಪಟ್ಟಂತಹ ಮಕ್ಕಳ ಪೋಷಕರಿಗೆ ಮನವೊಲಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿಯಂತೆ ದೇಶ ಅಭಿವೃದ್ಧಿಯಾಗಬೇಕಾದರೆ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತವಾಗದೇ ಎಲ್ಲ ವರ್ಗದ ಮಕ್ಕಳು ಶಿಕ್ಷಣವಂತರಾಗಬೇಕು. ಬಡತನ ಸೇರಿದಂತೆ ಹಲವು ಕಾರಣಗಳಿಂದ ಬಾಲಕಾರ್ಮಿಕ ಎಂಬ ಪೀಡುಗಿಗೆ ಒಳಗಾದ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಜಾಗೃತರಾಗಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಪ ವಿಭಾಗಾಧಿಕಾರಿ ರುದ್ರೇಶ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನೂರಾರು ವರ್ಷಗಳಿಂದ ರೂಢಿಯಲ್ಲಿರುವ ಸಾಮಾಜಿಕ ಪಿಡುಗಾಗಿದೆ. ಇದು ವಾಸಿ ಮಾಡದ ಗಾಯದಂತೆ ಬೆಳೆಯುತ್ತಿದೆ. ಈ ಗಾಯಕ್ಕೆ ಶಿಕ್ಷಣದಿಂದ ಮಾತ್ರ ಪರಿಹಾರ. ಹೀಗಾಗಿ ಯಾವುದೇ ಮತ, ಪಥ, ವರ್ಗ, ಕನಿಷ್ಠ, ಗರಿಷ್ಠ ಎನ್ನದೇ ಈ ಪಿಡುಗಿಗೆ ಬಲಿಯಾದವರನ್ನು ರಕ್ಷಿಸಿ ಉತ್ತಮ ಶಿಕ್ಷಣವಂತರನ್ನಾಗಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

Advertisement

ಪುಸ್ತಕದ ಸಾಲುಗಳಲ್ಲಿ ಅಮರರಾಗಿರುವ ಗಣ್ಯಾತಿಗಣ್ಯರು ಮೂಲತಃ ಬಡತನದ ಹಿನ್ನೆಲೆಯಿಂದಲೇ ಬಂದವರಾಗಿದ್ದಾರೆ. ತಮಗಿದ್ದ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿ, ಇತಿಹಾಸದ ಪುಟ ಸೇರಿದ್ದಾರೆ. ಅದರಂತೆ ಇಂದಿನ ಮಕ್ಕಳು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳದೇ ಸಾಧಕರ ದಾರಿಯಲ್ಲಿ ಸಾಗಿ ಉತ್ತಮ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳುವಂತೆ ಕರೆ ನೀಡಿದರು.

ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ ಮಾತನಾಡಿ, ಕೆಳಸ್ಥರದಲ್ಲಿ ಇರುವಂತಹ ಹಾಗೂ ಶಿಕ್ಷಣದಿಂದ ವಂಚಿತ ಮಕ್ಕಳ ರಕ್ಷಣೆ, ಕೇವಲ ದಿನಾಚರಣೆಗಳಿಗೆ ಮಾತ್ರ ಸೀಮಿತಗೊಳಿಸದೇ ಜಿಲ್ಲಾಡಳಿತ ಹಾಗೂ ಎಲ್ಲ ಇಲಾಖೆಗಳು ಸೇರಿ ವರ್ಷದ 365 ದಿನಗಳೂ ಕೂಡ ಕಾರ್ಯಪ್ರವೃತ್ತರಾಗಿ ಇಂತಹ ಕೆಟ್ಟ ಪದ್ಧತಿಗೆ ಒಳಗಾದ ಮಕ್ಕಳನ್ನು ರಕ್ಷಿಸಬೇಕು ಎಂದು ಹೇಳಿದರು.

ಕಾರ್ಮಿಕ ಅಧಿಕಾರಿ ಅಶೋಕ ಬಾಳಿಕಟ್ಟಿ ಪ್ರಾಸ್ತಾವಿಕ ಮಾತನಾಡಿ, ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮಾಲೀಕರಿಗೆ, ಸಹಕರಿಸಿದ ಪಾಲಕರಿಗೆ ದಂಡ ಹಾಗೂ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಸೋಮಲಿಂಗ ಗೆಣ್ಣೂರು ಬಾಲಕಾರ್ಮಿಕ ಪದ್ಧತಿ ವಿರೋಧ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ಅಶೋಕ ಹಂಚಲಿ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿ.ಬಿ. ಕುಂಬಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಿರ್ಮಲಾ ಸುರಪುರ, ಶ್ರೀಧರ ಕುಲಕರ್ಣಿ, ಬಾಲ ಕಾರ್ಮಿಕ ಯೋಜನಾ ಸಂಘದ ಶ್ರೀನಿವಾಸ ವಾಲೀಕಾರ, ಎಂ.ಎಚ್. ಖಾಸನೀಸ್‌ ಸೇರಿದಂತೆ ಇತರರು ಇದ್ದರು.

ಇದಕ್ಕೂ ಮೊದಲು ನಗರದ ಸರಕಾರಿ ಪಪೂ ಕಾಲೇಜಿನಿಂದ ಆರಂಭಗೊಂಡ ಜಾಥಾಕ್ಕೆ ನ್ಯಾಯಾಧೀಶ ಎಸ್‌.ಎನ್‌. ನಾಯಕ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next