Advertisement

ಡಿಜಿಟಲ್‌ ಕ್ರಾಂತಿಯಿಂದ ಮನೆ ಬಾಗಿಲಿಗೆ ಸೌಲಭ್ಯ

01:19 PM Nov 22, 2019 | Naveen |
ವಿಜಯಪುರ: ಇಂದಿನ ಡಿಜಿಟಲ್‌ ಕ್ರಾಂತಿಯಿಂದಾಗಿ ಪ್ರತಿ ಸೌಲಭ್ಯವು ಮನೆಯ ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದು ಡಿಜಿಟಲೈಜೇಶನ್‌ ಪ್ರಭಾವ ತೋರಿಸುತ್ತದೆ ಎಂದು ಕರ್ನಾಟಕ ಮೌಲ್ಯಮಾಪನಾ ಪ್ರಾಧಿಕಾರದ ಹೆಚ್ಚುವರಿ ಮುಖ್ಯ ಮೌಲ್ಯಮಾಪನಾಧಿಕಾರಿ ಪ್ರೊ| ಛಾಯಾ.ಕೆ. ದೇಗಾಂವ್ಕರ್‌ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ಸಭಾಂಗಣದಲ್ಲಿ ಆರ್ಥಿಕ ಅಧ್ಯಯನ ವಿಭಾಗದ ವತಿಯಿಂದ “ಭಾರತದಲ್ಲಿ ಡಿಜಿಟಲ್‌ ಆರ್ಥಿಕತೆ ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ಸೇರಿದಂತೆ ಶೈಕ್ಷಣಿಕ, ಆರೋಗ್ಯ, ಕೃಷಿಸೇರಿದಂತೆ ಹಲವಾರು ಕ್ಷೇತ್ರಗಳು ಡಿಜಿಟಲೀಕರಣ ಹೊಂದಿವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಡಿಜಿಟಲೀಕರಣ ವ್ಯವಸ್ಥೆಯಿಂದಾಗಿ ಸಮಯ ವ್ಯರ್ಥವಾಗದೆ ನಮ್ಮ ಕೆಲಸ ಕಾರ್ಯಗಳನ್ನು ನಾವು ಇದ್ದ ಸ್ಥಳದಿಂದಲೇ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಡಿಜಿಟಲೈಜೇಶನ್‌ ನಮ್ಮ ಬದುಕಿನಲ್ಲಿ ಪ್ರಮುಖ ಸ್ಥಾನ ಗಿಟ್ಟಿಸಿಕೊಂಡಿದೆ. ಆದರೆ ಸಂಪೂರ್ಣ ಡಿಜಿಟಲೀಕರಣವಾಗಲು ಇನ್ನೂ ಕೆಲವು ತಾಂತ್ರಿಕ ಸಮಸ್ಯೆಗಳಿದ್ದರೂ ಸಹ ಮುಂಬರುವ ದಿನಗಳಲ್ಲಿ ಭಾರತ ಖಂಡಿತವಾಗಿಯೂ ಯಶಸ್ವಿ ಡಿಜಿಟಲೈಜ್ಡ್ ದೇಶವಾಗಿ ಹೊರಹೊಮ್ಮುತ್ತದೆ ಎಂಬ ಭರವಸೆ ಇದೆ ಎಂದರು.
ಕೊಲ್ಲಾಪುರದ ಶಿವಾಜಿ ವಿವಿಯ ಪ್ರಾಧ್ಯಾಪಕ ಪ್ರೊ | ಪ್ರಕಾಶ ಕಾಂಬಳೆ ಮಾತನಾಡಿ, ಪ್ರಸ್ತುತ ಸರ್ಕಾರದಲ್ಲಿ ಡಿಜಿಡಲೀಕರಣ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಈಗಾಗಲೇ ಇ-ಆಡಳಿತ ಸುವ್ಯವಸ್ಥೆಯಿಂದ ಸಾಗುತ್ತಿದ್ದು, ಜನರು ಸದುಪಯೋಗ ಪಡೆಸಿಕೊಳ್ಳುತ್ತಿರುವುದು ನಮಗೆ ತಿಳಿದ ವಿಷಯ. ಇ-ಗವರ್ನಮೆಂಟ್‌ನಿಂದ ಸಾರ್ವಜನಿಕರು ಕೃಷಿ ಸೇರಿದಂತೆ ವಿವಿಧ ರಂಗಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. ವಿವಿಯ ಕುಲಪತಿ ಪ್ರೊ | ಸಬಿಹಾ ಭೂಮಿಗೌಡ
ಮಾತನಾಡಿ, ಡಿಜಿಟಲಿ ಆರ್ಥಿಕತೆ ಎನ್ನುವುದು ನೋಡು ನೋಡುವಷ್ಟರಲ್ಲಿ ನಮ್ಮನ್ನು ಆವರಿಸಿಕೊಂಡಿದೆ.
ನಮ್ಮ ಕೈಯಲ್ಲಿ ಒಂದು ಸ್ಮಾರ್ಟ್‌ಫೋನ್‌ ಇದ್ದರೆ ಸಾಕು ಅರ್ಧ ಕೆಲಸ ಅದರಲ್ಲೇ ಮುಗಿಯುತ್ತದೆ. ಇ-ಬ್ಯಾಂಕಿಂಗ್‌ನಿಂದ ನಾವು ಬ್ಯಾಂಕಿಂಗೆ ಹೋಗಿ ಸಾಲಿನಲ್ಲಿ ನಿಲ್ಲುವ ತಾಪತ್ರೆಯ ತಪ್ಪಿದೆ. ಆನ್‌ ಲೈನ್‌ ಟ್ರಾಂಜಾಕ್ಷನ್‌ಗಳಿಂದ ನಮ್ಮ ಕೆಲಸಗಳು ಸುಲಭವಾಗಿವೆ. ಆದರೆ ಈ ಡಿಜಟಲೀಕರಣ ಬರೀ ನಗರ ಪ್ರದೇಶಗಳಲ್ಲಿ ಮಾತ್ರ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಇದರ ಅಭಿವೃದ್ಧಿಯಾಗಬೇಕಿದೆ. ಸಮಾಜದ ಕಟ್ಟಕಡೆಯ ಮನುಷ್ಯನಿಗೆ, ಮಹಿಳೆಯರಿಗೆ, ಅಶಿಕ್ಷಿತರಿಗೆ ಇದು ಈಗಲೂ ಸಹ ಸವಾಲಾಗಿ ಉಳಿದಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಸವಾಲು ಸಮಸ್ಯೆಗಳು ನಿರ್ನಾಮವಾಗುತ್ತವೆ ಎಂಬ ನಂಬಿಕೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಡಾ| ಆರ್‌.ವಿ. ಗಂಗಶೆಟ್ಟಿ ಸ್ವಾಗತಿಸಿದರು. ಪ್ರೊ| ಎಂ. ಮದರಿ ವಂದಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next