ವಿಜಯಪುರ: ಬಿಜೆಪಿ ನಾಯಕರು ಪದೇ ಪದೆ ಹೇಳುತ್ತಿರುವ ವಿಕಸಿತ ಭಾರತ ಎಂದರೇನು, ಯಾವ ಅಭಿವೃದ್ಧಿಯಲ್ಲಿ ವಿಕಸಿತವಾಗಿದೆ ಎಂದು ಸ್ಪಷ್ಟಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆಗ್ರಹಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಬೆಲೆ ಏರಿಕೆ, ದರ ಕುಸಿತದಿಂದ ರೈತರ ಹೋರಾಟ, ತಮಗೆ ಪುನರ್ವಸತಿ ಕಲ್ಪಿಸದ ನಡೆ ವಿರುದ್ಧ ಕಾಶ್ಮೀರ ಪಂಡಿತರು ಆಕ್ರೋಶಕ್ಕೆ ಗುರಿಯಾಗಿದ್ದಾರೆ ಎಂದು ಟೀಕಿಸಿದರು.
ಸಾಧನೆ ಮುಂದಿಟ್ಟು ಮತ ಕೇಳುವ ಬದಲು ಬಿಜೆಪಿ ಪಕ್ಷ, ಸಂಘ ಪರಿವಾರವನ್ನೆಲ್ಲ ಬದಿಗೊತ್ತಿ ಏಕಚಕ್ರಾಧಿಪತಿ ನರೇಂದ್ರ ಮೋದಿಗೆ ಮತ ಕೊಡಿ ಎನ್ನುವುದು ಸೇರಿದಂತೆ ಇನ್ನಾವುದೇ ಅಭಿವೃದ್ಧಿ ಮಾತನಾಡುತ್ತಿಲ್ಲ. ಒಂದಲ್ಲ ಒಂದು ಅಭಿವೃದ್ಧಿ ಮಾಡಿದ್ದನ್ನು ಹೇಳಿ ಮತ ಕೇಳದ ಬಿಜೆಪಿ ನಾಯಕರು ಕಾಂಗ್ರೆಸ್ ಪರ ಅಲೆಯಿಂದ ಹತಾಶರಾಗಿದ್ದಾರೆ ಎಂದರು.
ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಚುನಾವಣಾ ಬಾಂಡ್ ಕುರಿತು ಮಾತನಾಡುತ್ತಿರುವ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಚುನಾವಣಾ ಆಯೋಗ ಹಲ್ಲು ಇಲ್ಲದ ಹಾವು ಎಂಬಂತಾಗಿದೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಮೋದಿ ಎಂಬ ಗಂಡಿದೆ ಎನ್ನುವ ಸಿ.ಟಿ. ರವಿ ಸ್ವಯಂ ಪತ್ನಿಗೆ ಗಂಡನಾಗದ ನರೇಂದ್ರ ಮೋದಿ ಅವರನ್ನು ದೇಶದ ನಾಯಕನೆಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದ ಗಣಿಹಾರ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಕಾಂಗ್ರೆಸ್ ಗ್ಯಾರಂಟಿ ಎನ್ನುವ ರವಿ, ಬಿಜೆಪಿ ದೇಶದ ಸಾರ್ವಜನಿಕ ಆಸ್ತಿಗಳನ್ನು ಕಿತ್ತು ಅಂಬಾನಿ, ಅದಾನಿಯಂಥ ಬಂಡವಾಳಿಗರಿಗೆ ಮಾರಾಟ ಮಾಡಿದ್ದೇ ಮೋದಿ ಗ್ಯಾರಂಟಿ ಎಂದು ತಿರುಗೇಟು ನೀಡಿದರು.
ನಾಲ್ಕು ದಶಕಗಳ ಹಿಂದಿನ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುವ ಬಿಜೆಪಿ ಸರ್ವಾಧಿಕಾರ ಧೋರಣೆಯ ಆಡಳಿತ ನಡೆಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರೆ ನಾಯಕರನ್ನು ಜೈಲಿನಲ್ಲಿ ಇರಿಸಿ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದೀರಿ ಎಂದು ಟೀಕಿಸಿದರು.
400 ಸ್ಥಾನ ಗೆಲ್ಲುವ ಸಾಮರ್ಥ್ಯ ಇರುವುದಾಗಿ ಹೇಳುವ ಬಿಜೆಪಿ ಕೇವಲ ಒಂದು-ಎರಡು ಸ್ಥಾನವೂ ಗೆಲ್ಲದ ಪಕ್ಷಗಳ ಜೊತೆ ಮಂಡಿಯೂರಿ ಮೈತ್ರಿಗೆ ಮುಂದಾಗಿರುವುದು ಬಿಜೆಪಿ ಸೋಲಿನ ಪ್ರತೀಕ ಎಂದು ಟೀಕಿಸಿದರು.
ಮಹಾದೇವಿ ಗೋಕಾಕ, ಸುಭಾಶ ಕಾಲೇಬಾಗ, ವಸಂತ ಹೊನಮೋಡೆ, ಬೀರಪ್ಪ ಜುಮನಾಳ ಇತರರು ಉಪಸ್ಥಿತರಿದ್ದರು.