Advertisement

ಮತದಾನ ಮಹತ್ವ ಅರಿತುಕೊಳ್ಳಿ

12:00 PM Jan 26, 2020 | Naveen |

ವಿಜಯಪುರ: ಏಕತೆಯಲ್ಲಿ ಐಕ್ಯತೆ ಹೊಂದಿರುವ ಭಾರತ ವಿಶ್ವದಲ್ಲೇ ಅತ್ಯುತ್ತಮ ಸಂವಿಧಾನ ಹಾಗೂ ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹಿರಿಮೆ ಹೊಂದಿದ್ದು ಚುನಾವಣೆಗಳಲ್ಲಿ ಪ್ರಜೆಗಳು ತಮ್ಮ ಅಮೂಲ್ಯ ಮತ ಚಲಾಯಿಸಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾ ಧೀಶರಾದ ಸದಾನಂದ ನಾಯಿಕ ಹೇಳಿದರು.

Advertisement

ಶನಿವಾರ ನಗರದ ಕಂದಗಲ್ಲ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ಯೋಗ್ಯರನ್ನೇ ಆಯ್ಕೆ ಮಾಡಿ ದೇಶದ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಿ ಎಂದರು.

ದೇಶದ ಪ್ರತಿಯೊಬ್ಬ ಪ್ರಜೆ ಮತದಾನ ಮಹತ್ವ ಅರಿತು ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಭಾರತದ ಪ್ರಜಾಪ್ರಭುತ್ವ ರಕ್ಷಣೆ, ಸುಭದ್ರ ಹಾಗೂ ಅಭಿವೃದ್ಧಿ ಪರ ಸರ್ಕಾರ ರಚನೆಗೆ ಮುಂದಾಬೇಕು. ಇಂಥ ಕನಸು ನನಸಾಗಲು ಪ್ರತಿ ಮತದಾರ ಯೋಗ್ಯ ಅಭ್ಯರ್ಥಿ ಆಯ್ಕೆಗೆ ಆದ್ಯತೆ ನೀಡಿದಲ್ಲಿ ಮಾತ್ರ ಇದು ಸಾಧ್ಯವಿದೆ ಎಂದರು.

ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಭಾರತದ ಸಂವಿಧಾನ ಶ್ರೇಷ್ಠ ಪೀಠಿಕೆ, ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶನ ತತ್ವಗಳನ್ನು ಆಯಾ ರಾಜ್ಯಗಳಿಗೆ ನೀಡಿದೆ. ಉತ್ತಮ ರಾಷ್ಟ್ರದ ಭವಿಷ್ಯಕ್ಕಾಗಿ ಮತದಾನದ ಮಹತ್ವ ಅರಿಯುವ ಜೊತೆಗೆ ಇತರರಲ್ಲಿಯೂ ಕೂಡ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಎನ್‌.ಡಿ. ರಜಪೂತ ಉಪನ್ಯಾಸ ನೀಡಿ, 19ನೇ ಶತಮಾನದವರೆಗೆ ಅಮೆರಿಕ ದೇಶದಲ್ಲಿ ಮಹಿಳೆಯರಿಗೆ ಮತದಾನ ಹಕ್ಕು ಇರಲಿಲ್ಲ. ಆದರೆ ಭಾರತ ದೇಶದಲ್ಲಿ ಸಂವಿಧಾನದ ಮೂಲಕ ಹೆಣ್ಣು-ಗಂಡು, ಬಡವ-ಶ್ರೀಮಂತ ಎಂಬ ಯಾವ ತಾರತಮ್ಯ ಮಾಡದೇ ಎಲ್ಲರಿಗೂ ಮತದಾನ ಹಕ್ಕನ್ನು ನೀಡಲಾಗಿದೆ. ದೇಶಕ್ಕೆ ಬೇಕಾದ ಉತ್ತಮ ಸರಕಾರ ರಚಿಸುವ ಜವಾಬ್ದಾರಿ ಮತದಾನ ಹಕ್ಕು ಹೊಂದಿರುವ ಪ್ರತಿ ನಾಗರಿಕರ ಜವಾಬ್ದಾರಿ ಎಂದರು.

Advertisement

ಪ್ರಾಸ್ತಾವಿಕ ಮಾತನಾಡಿದ ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎಸ್‌. ಪೂಜೇರಿ, ಪ್ರತಿ ವರ್ಷ ವಿಶೇಷ ಘೋಷಣೆಯೊಂದಿಗೆ ಮತದಾರರ ದಿನ ಆಚರಿಸಲಾಗುತ್ತಿದೆ. ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ ಮತದಾರರ ಸಾಕ್ಷರತೆ ಅಂಗವಾಗಿ ದೇಶದ 6.50 ಲಕ್ಷ ಸ್ಥಳಗಳಲ್ಲಿ ಹಾಗೂ 10 ಲಕ್ಷ ಮತಗಟ್ಟೆಗಳಲ್ಲಿ ಈ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ 18 ರಿಂದ 24 ವರ್ಷದ ವಯೋಮಾನದ 25 ಕೋಟಿ ಯುವ ಮತದಾರರಿದ್ದು, ಯುವ ಮತದಾರ ಸೇರಿದಂತೆ ಎಲ್ಲರೂ ಕಡ್ಡಾಯ ಮತದಾನ ಮಾಡುವ ಮೂಲಕ ಭವ್ಯ ಭಾರತ ನಿರ್ಮಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್‌ ಮೋಹನಕುಮಾರಿ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಮತದಾರರ ದಿನಾಚರಣೆ ನಿಮಿತ್ತ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಹಮ್ಮಿಕೊಂಡಿದ್ದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆ, ಕಿರು ನಾಟಕ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅತ್ಯುತ್ತಮ ನೋಡಲ್‌ ಅಧಿಕಾರಿಗಳಾದ ಎಂ.ಬಿ. ರಜಪೂತ, ಎಂ.ಎಸ್‌. ಮುನವಳ್ಳಿ, ಚಿದಾನಂದ ಆನೂರ ಹಾಗೂ ಅತ್ಯುತ್ತಮ ಬಿಎಲ್‌ಒ ಎನ್‌.ಎಲ್‌. ಅರವತ್ತು ಅವರನ್ನು ಸನ್ಮಾನಿಸಲಾಯಿತು.

ವಯೋವೃದ್ಧ ಮತದಾರರಾದ ಕಸ್ತೂರಿ ಶಟಗಾರ, ರುದ್ರಪ್ಪ ಕಲಶಟ್ಟಿ, ಶಾರದಾಬಾಯಿ ಮಸಳಿ, ಸಾಹೇಬಗೌಡ ಗೌಡರ ಮತ್ತು ಕೌಶಲ್ಯ ಗೌಡರ ಅವರನ್ನು ಸನ್ಮಾನಿಸಲಾಯಿತು. ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ನವ ಮತದಾರರು, ವಿಕಲಚೇತನ ಮತದಾರರಿಗೆ ಮತದಾರರ ಗರುತು ಪತ್ರ ವಿತರಿಸಲಾಯಿತು.

ಜಿಪಂ ಸಿಇಒ ಗೋವಿಂದರೆಡ್ಡಿ, ಎಎಸ್ಪಿ ರಾಮ ಅರಿಸಿದ್ದಿ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆನ್ನೂರ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ವೇದಿಕೆಯಲ್ಲಿದ್ದರು. ವೀರೇಶ ವಾಲಿ ಪ್ರಾರ್ಥಿಸಿದರು. ಎಚ್‌.ಎ. ಮಮದಾಪುರ ನಿರೂಪಿಸಿದರು. ವರ್ಧಾ ನೀಲಗಾರ ಅವರು ಜೀವನ ಸಾಧನೆ ಕುರಿತು ಕಿರು ಭಾಷಣ ಮಾಡಿದರು. ಇದಕ್ಕೂ ಮುನ್ನ ನಗರದ ಗಾಂಧೀಜಿ  ವೃತ್ತದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಮತದಾರರ ಮಹತ್ವದ ಕುರಿತು ಜಾಗೃತಿ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಔದ್ರಾಮ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next