Advertisement

ರೈಲ್ವೇ ಸುರಕ್ಷತೆ-ಭದ್ರತೆ-ಸ್ವಚ್ಛತೆಗೆ ಆದ್ಯತೆ

12:50 PM Oct 23, 2019 | Team Udayavani |

ವಿಜಯಪುರ: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ವಿಶೇಷ ತನಿಖೆ ನಡೆದಿದೆ. ಇದರ ಹೊರತಾಗಿಯೂ ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆಗೂ ಸಹ ವಿಶೇಷ ಒತ್ತು ನೀಡುತಿದೆ. ಇದಕ್ಕಾಗಿ ರೈಲು ನಿಲ್ದಾಣಗಳಲ್ಲಿ ಸಿ.ಸಿ. ಕ್ಯಾಮರಾ ಅವಳಡಿಸಲಾಗುತ್ತಿದೆ. ಇಲಾಖೆ ಭದ್ರತೆ ಹಾಗೂ ಸ್ವಚ್ಛತೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ಕೊಪ್ಪಳ, ಹೊಸಪೇಟೆ ಮಾರ್ಗವಾಗಿ ಸಂಚರಿಸುವ ವಿಜಯಪುರ-ಯಶವಂತಪುರ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟ ಘಟನೆ ಅತ್ಯಂತ ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ರೈಲ್ವೆ ಸೇವೆ ಜೊತೆಗೆ ಸುರಕ್ಷತೆಗೂ ಒತ್ತು ನೀಡಲಾಗುತ್ತಿದ್ದು ದೇಶದ ಎಲ್ಲ ರೈಲ್ವೇ ನಿಲ್ದಾಣಗಳಲ್ಲಿ ಸುರಕ್ಷಿತ ವ್ಯವಸ್ಥೆ ಕಲ್ಪಿಸಲು ಸಿ.ಸಿ. ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇನ್ನು ಈ ಹಿಂದೆ ರೈಲ್ವೆ ನಿಲ್ದಾಣಗಳು ಎಂದರೆ ಮೂಗು ಮುಚ್ಚಿ ಸಂಚರಿಸುವ ದುಸ್ಥಿತಿ ಇತ್ತು, ಆದರೆ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಪ್ರತ್ಯೆಕ ರೈಲ್ವೆ ಬಜೆಟ್‌ ಮಂಡನೆಯನ್ನು ರದ್ದು ಮಾಡಿ, ಸಾಮಾನ್ಯ ಬಜೆಟ್‌ನಲ್ಲೇ ಅವಳಡಿಸಿದರು.

ಜೊತೆಗೆ ರೈಲ್ವೇ ಇಲಾಖೆ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಮೂಲಕ ರಾಜಕೀಕರಣಕ್ಕೆ ವೇದಿಕೆಯಾಗುತ್ತಿದ್ದ ರೈಲ್ವೆ ಇಲಾಖೆ ಬಲವರ್ಧನೆಗೆ ಮುಂದಾದರು. ಜೊತೆಗೆ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಯುವ ಜನತೆ ತಮ್ಮ ಮೊಬೈಲ್‌ನಲ್ಲಿ ಸೆಲ್ಫೀ  ಕ್ಲಿಕ್ಕಿಸಿಕೊಳ್ಳುವ ಮಟ್ಟಕ್ಕೆ ಸ್ವತ್ಛತೆಗೆ ಆದ್ಯತೆ ನೀಡಿದ್ದೇವೆ ಎಂದರು.

ಹಿಂದಿನ ನಮ್ಮ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ದೇಶದಲ್ಲಿ ಚತುಷ್ಪಥ ಮೂಲಕ ಭಾರತವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಇದೀಗ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಸೇವೆಗಳ ಮೂಲಕ ದೇಶದಲ್ಲಿ ಸಂಚಾರ ಕ್ರಾಂತಿ ಮಾಡುತ್ತಿದ್ದಾರೆ. ಇದರ ಭಾಗವಾಗಿ ದೇಶದ ಮೂಲೆ ಮೂಲೆಗೆ ಏಕ ಕಾಲಕ್ಕೆ 40 ರೈಲುಗಳನ್ನು ಓಡಿಸಲಾಗುತ್ತದೆ. ಇಂಥ 150 ರೈಲುಗಳನ್ನು ಓಡಿಸುವ ಮೂಲಕ ದೇಶದಲ್ಲಿ ಜನರಿಗೆ ಕಡಿಮೆ ದರದಲ್ಲಿ ಹೆಚ್ಚಿನ ಸೇವೆ ಒದಗಿಸಲಾಗುತ್ತದೆ. ಇದರಿಂದ ನಿರುದ್ಯೋಗ ನಿವಾರಣೆ ಜೊತೆಗೆ ಸಾರಿಗೆ ಬಲವರ್ಧನೆಗೆ ಸಹಕಾರ ಆಗಲಿದೆ ಎಂದರು.

Advertisement

ದಶಕದ ಹಿಂದೆ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ಆರಂಭಿಸಿದ್ದ ಪ್ರವಾಸೋಧ್ಯಮ ಇಲಾಖೆ ಸಹಯೋಗದ ಗೋಲ್ಡ್‌ನ್‌ ಚ್ಯಾರಿಯೇಟರ್‌ ರೈಲು ಸೇವೆ ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದ ಸ್ಥಗಿಗತೊಂಡಿವೆ. ಇದೀಗ ಸ್ವರ್ಣ ರಥ ಸಂಚಾರ ಪುನರಾರಂಭಕ್ಕೆ ಶೀಘ್ರ ಚಾಲನೆ ನೀಡಲಾಗುತ್ತದೆ. ಇದರಿಂದ ರಾಜ್ಯದ ಪ್ರವಾಸೋದ್ಯಮ ಅಭ್ಯುದಯಕ್ಕೆ ಸಹಕಾರಿ ಆಗಲಿದೆ ಎಂದರು.

ಭಾರತೀಯ ರೈಲ್ವೇ ಇಲಾಖೆ ಗರಿಷ್ಠ ಗುಣಮಟ್ಟದ ಸೇವೆಗಳನ್ನು ನೀಡುವ ಜೊತೆಗೆ ಸಾರ್ವಜನಿಕರ ದೂರುಗಳನ್ನು ಆಲಿಸಿ, ಸಕಾರಾತ್ಮಕ ಸ್ಪಂದನೆಗೆ ಮುಂದಾಗಲಿದೆ. ಹಿಂದೆಲ್ಲ 1 ರೂ. ಬೆಲೆ ಏರಿಸಿದರೂ ರಾಜಕೀಯ ಪ್ರತಿಭಟನೆಗೆ ವೇದಿಕೆಯಾಗುತ್ತಿದ್ದ ರೈಲ್ವೇ ಇಲಾಖೆ ಇದೀಗ ಸೇವಾ ವಿಶೇಷತೆಯಿಂದ ಜನ ಮನ್ನಣೆ ಪಡೆಯುತ್ತಿದೆ ಎಂದು ಬಣ್ಣಿಸಿದರು. ಸಂಸದರಾದ ರಮೇಶ ಜಿಗಜಿಣಗಿ,
ಪಿ.ಸಿ. ಗದ್ದಿಗೌಡರ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವೀರಣ್ಣ ಚರಂತಿಮಠ ಮಾತನಾಡಿದರು. ಶಾಸಕರಾದ ಶಿವಾನಂದ ಪಾಟೀಲ, ಸುನಿಲಗೌಡ ಪಾಟೀಲ, ಹನುಮಂತ ನಿರಾಣಿ, ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ದಕ್ಷಿಣ ಮಧ್ಯ ರೈಲ್ವೆ ಮಹಾಪ್ರಬಂಧಕ ಅಜಯಕುಮಾರ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next