Advertisement

ಪ್ರತಿ ಕುಟುಂಬ ತಪ್ಪದೇ ಶೌಚಾಲಯ ಕಟ್ಟಿಸಿಕೊಳ್ಳಿ : ಸಿಇಒ ಗೋವಿಂದರಡ್ಡಿ

01:30 PM Mar 08, 2020 | Naveen |

ವಿಜಯಪುರ: ಪ್ರತಿ ಕುಟುಂಬ ಶೌಚಾಲಯ ಕಟ್ಟಿಸಿಕೊಂಡು ನಿರಂತರ ಬಳಕೆ ಹಾಗೂ ನಿರ್ವಹಣೆ ಮೂಲಕ ಗಾಂಧೀಜಿ ಕನಸಿನ ಆರೋಗ್ಯ, ನೈರ್ಮಲ್ಯ ಹಾಗೂ ಮಹಿಳಾ ಸುರಕ್ಷತೆಯ ಸಮಾಜ ನಿರ್ಮಿಸಿ ಎಂದು ಜಿಪಂ ಸಿಇಒ ಗೋವಿಂದರಡ್ಡಿ ಮನವಿ ಮಾಡಿದರು.

Advertisement

ನಗರದ ಆಕಾಶವಾಣಿ ಕೇಂದ್ರದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ ಮಿಷನ್‌ ಯೋಜನೆ ಅಡಿಯಲ್ಲಿ (ಗ್ರಾಮೀಣ) ಯಾವುದೇ ಫಲಾನುಭವಿಗಳು ಶೌಚಾಲಯ ನಿರ್ಮಾಣದಿಂದ ಹೊರಗೆ ಉಳಿಯಬಾರದು ಎಂಬ ವಿಷಯ ಕುರಿತು ವಿಜಯಪುರ ಆಕಾಶವಾಣಿಯಲ್ಲಿ ಜರುಗಿದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ಶ್ರೋತೃಗಳೊಂದಿಗೆ ಅವರು ಮಾತನಾಡಿದರು.

ಜಿಲ್ಲೆಯ 2018-19ರಲ್ಲಿ ಎಲ್‌ಒಬಿ ಯೋಜನೆ ಅಡಿಯಲ್ಲಿ 13,414 ಶೌಚಾಲಯ ನಿರ್ಮಿಸಲಾಗಿದೆ. 2019-20ರಲ್ಲಿ 25,813 ಗುರಿಯಲ್ಲಿ ಫೆಬ್ರವರಿ 29ರವೆರೆಗೆ 1023 ಶೌಚಾಲಯ ನಿರ್ಮಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿನ 2012ರ ಬೇಸ್‌ಲೈನ್‌ ಸರ್ವೇ ಪ್ರಕಾರ 2.59 ಲಕ್ಷ ಕುಟುಂಬಗಳ ಮನೆಗಳಿಗೆ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಶೌಚಾಲಯ ಈಗಾಗಲೇ ನಿರ್ಮಿಸುವ ಗುರಿ ಹೊಂದಲಾಗಿತ್ತು. ಅದು ಸಂಪೂರ್ಣ ಯಶಸ್ವಿಯಾಗಿದೆ ಎಂದು ವಿವರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಶೇ. 85 ಜನರು ಶೌಚಾಲಯ ನಿರ್ಮಿಸಿಕೊಂಡಿದ್ದರೂ ಬಳಕೆ ಮಾತ್ರ ಶೇ. 60 ಮೀರಿಲ್ಲ. ಬಯಲು ಬಹಿರ್ದೆಸೆ ರೂಢಿಯಿಂದ ಜನರನ್ನು ಸ್ವಯಂ ಪ್ರೇರಣೆಯಿಂದ ಶೌಚಾಲಯ ಬಳಕೆಯ ಮಹತ್ವದ ಕುರಿತು ಮನವರಿಕೆ ಮಾಡಿಕೊಡಬೇಕಿದೆ. ಇದಕ್ಕಾಗಿ ಸ್ವಚ್ಛ  ಭಾರತ ಯೋಜನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವ ಕುರಿರು ಕುರಿತು ಜಿಲ್ಲೆಯ ಜನರಲ್ಲಿ ಫೋನ್‌ ಇನ್‌ ಕಾರ್ಯಕ್ರಮದ ಮೂಲಕ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.

ವೈಯಕ್ತಿಯ ಶೌಚಾಲಯ ನಿರ್ಮಿಸಿಕೊಳ್ಳುವ ಪರಿಶಿಷ್ಟ ಜಾತಿ-ಪಂಗಡದವರಿಗೆ 15 ಸಾವಿರ ರೂ. ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದವರಿಗೆ 12 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಜಿಲ್ಲೆಯ ಫಲಾನುಭವಿಗಳು ಸದುಪಯೋಗ ಪಡೆಯಬೇಕು. ಅದರೊಂದಿಗೆ ಪರಿಸರ ಸ್ವತ್ಛತೆ, ನೈರ್ಮಲ್ಯ, ಆರೋಗ್ಯ, ಮಹಿಳಾ ಸುರಕ್ಷತೆ ಮತ್ತು ರೋಗ ರುಜಿನಗಳ ನಿಯಂತ್ರಣಕ್ಕಾಗಿ ಅರ್ಹ ಫಲಾನುಭವಿಗಳು ತಪ್ಪದೆ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು.

Advertisement

ಶೀಘ್ರದಲ್ಲಿಯೇ ಜನಗಣತಿ ಆರಂಭವಾಗಲಿದ್ದು ಅದರಡಿ ಶೌಚಾಲಯ ಹೊಂದಿರುವ ಬಗ್ಗೆಯೂ ಮಾಹಿತಿ ಕಲೆಹಾಕುವ ಉದ್ದೇಶ ಹೊಂದಲಾಗಿದೆ. ಕಾರಣ ಯೋಜನೆ ಅಡಿ ಪ್ರೋತ್ಸಾಹಧನ ಸೌಲಭ್ಯ ಪಡೆದಿರುವ ಅರ್ಹ ಫಲಾನುಭವಿಗಳು ಇದೇ ಮಾರ್ಚ್‌ ಒಳಗೆ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಸಿಂದಗಿ ತಾಲೂಕಿನ ಭತ್ತಯ್ಯ ಹಿರೇಮಠ, ವಿಜಯಪುರದ ಗುರುರಾಜ್‌ ಪತ್ತಾರ, ನಿಡೋಣಿಯ ರೇವಣಸಿದ್ಧ ಕುಮಠೆ, ಇಂಡಿ ತಾಲೂಕಿನ ಸುನೀಲ, ರಮೇಶ, ಚೆನ್ನಬಸಯ್ಯ, ಖತಿಜಾಪುರದ ವಿಶಾಲ ಪಾಟೀಲ, ತಾಳಿಕೋಟಿಯ ರಾಜು ಹಿರೇಮಠ, ಬಸವರಾಜ ಹಳ್ಳಿ, ಸಾಗರ ಕುಮಠೆ, ಈರಪ್ಪ ಲಂಗೋಟಿ, ರಮೇಶ ಶರಣರ ಇತರರ ಕರೆಗೆ ಸ್ಪಂದಿಸಿದ ಸಿಇಒ ಗೋವಿಂದರಡ್ಡಿ, ಗ್ರಾಮೀಣ ಸ್ವಚ್ಛ ಭಾರತ ಮಿಶನ್‌ ಯೋಜನೆ ಅಡಿಯಲ್ಲಿ ಸಮಸ್ಯೆಗಳಿಗೆ ಆಯಾ ಗ್ರಾಪಂ ಪಿಡಿಒ ಮೂಲಕ ಪರಿಹಾರ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಮುಖ್ಯಸ್ಥ ಬಿ.ಡಿ. ಕಾಂಬಳೆ, ಜಿಪಂ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಎಂಜಿನಿಯರಿಂಗ್‌ ವಿಭಾಗದ ಕಬೀರ್‌ ಲಮಾಣಿ, ಬಸವರಾಜ ಒಂಟಗೋಡಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು. ಆಕಾಶವಾಣಿ ವರದಿಗಾರ ನೀಲೇಶ ಬೇನಾಳ ನೇರ ಫೋನ್‌ ಇನ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next