Advertisement

ರೈತರಿಗೆ 7.11 ಲಕ್ಷ ವಿತರಿಸುವ ಗುರಿ

11:01 AM Jul 01, 2019 | Naveen |

ವಿಜಯಪುರ: ಅರಣ್ಯ ರಾಷ್ಟ್ರ ಸಂಪತ್ತು. ದೇಶದ ಅಭಿವೃದ್ಧಿಗೆ ಅರಣ್ಯ ಸಂಪತ್ತು ಅತಿ ಮುಖ್ಯ. ಯಾವುದೇ ದೇಶ ಅಭಿವೃದ್ಧಿಗೆ ಅಲ್ಲಿನ ಅರಣ್ಯ ಸಂಪತ್ತು ಕಾರಣವಾಗಿದೆ. ಹೀಗಾಗಿ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ರೈತರಿಗೆ 7.11 ಲಕ್ಷ ವಿತರಿಸುವ ಗುರಿ ಹೊಂದಲಾಗಿದೆ. ಅಲ್ಲದೇ 170 ಹೆಕ್ಟೇರ್‌ ಪ್ರದೇಶದಲ್ಲಿ ಸಸಿ ನೆಡುವ ಯೋಜನೆ ರೂಪಿಸಲಾಗಿದೆ ಎಂದು ತೋಟಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು.

Advertisement

ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ರವಿವಾರ ಜಿಲ್ಲಾಡಳಿತ, ಜಿಪಂ ಮತ್ತು ಅರಣ್ಯ ಇಲಾಖೆ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಬಿಜೆಎನ್‌ಎಲ್ ವತಿಯಿಂದ 26.482 ಲಕ್ಷ ಸಸಿ ಹಾಗೂ 2.19 ಲಕ್ಷ ನೆಡುತೋಪು ಬೆಳೆಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ವನಮಹೋತ್ಸವ ಒಂದು ಹಬ್ಬ. ದಸರಾ, ದೀಪಾವಳಿ, ರಮಜಾನ್‌ ಹಬ್ಬಗಳಂತೆ ವನಮಹೋತ್ಸವು ಕೂಡ ಒಂದು ರಾಷ್ಟ್ರೀಯ ಹಬ್ಬ. ಈ ಹಬ್ಬವನ್ನು ಎಲ್ಲರೂ ಸೇರಿ ಅರಣ್ಯ ಸಂರಕ್ಷಣೆ ಮಾಡಬೇಕು. ಪ್ರತಿಯೊಬ್ಬರು ತಮ್ಮ ಮನೆ, ಜಮೀನುಗಳಲ್ಲಿ ಗಿಡಗಳನ್ನು ಹಚ್ಚಿ ರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.

ಅರಣ್ಯ ಸಂಪತ್ತು ರೈತರು. ಬಡವರನ್ನು ಆರ್ಥಿವಾಗಿ ಸದೃಢವಾಗಿಸುತ್ತದೆ. ಅರಣ್ಯದಿಂದ ದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಬೆಳೆಯಲು ಸಹಕಾರಿಯಾಗಿದೆ. ಅರಣ್ಯ ರಕ್ಷಣೆಗಾಗಿರುವ ಸರ್ಕಾರ ಸೌಲಭ್ಯವನ್ನು ಚುನಾಯಿತ ಸದಸ್ಯರು, ಅಧಿಕಾರಿಗಳು ಜವಾಬ್ದಾರಿಯಿಂದ ಸಾರ್ವಜನಿಕರಿಗೆ ಮುಟ್ಟಿಸಬೇಕು ಎಂದು ಹೇಳಿದರು.

Advertisement

ಅರಣ್ಯ ನಾಶದಿಂದ ಪರಿಣಾಮ ಈಗ ಬರಗಾಲ ಎದುರಿಸುವಂತಾಗಿದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತ ಸಾಗಿದೆ. ಇದ್ದರಿಂದ ರೈತರು ಬರ ಎದುರಿಸುವಂತಾಗಿದೆ. ಅರಣ್ಯ ಸಂರಕ್ಷಣೆಯಲ್ಲಿ ಇಲಾಖೆ ಅಧಿಕಾರಿಗಳ ಜತೆ ಸಾರ್ವಜನಿಕರು ಸಹಕಾರವೂ ಅತ್ಯಂತ ಅಗತ್ಯ ಎಂದು ಹೇಳದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ, ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 10,53,471 ಹೆಕ್ಟೇರ್‌ ಪ್ರದೇಶ ಇದ್ದರೂ ಅರಣ್ಯ ಪ್ರದೇಶ 1805.99 ಹೆಕ್ಟೇರ್‌ ಮಾತ್ರ. ಒಟ್ಟು ಭೌಗೋಳಿಕ ಕ್ಷೇತ್ರದ ಶೇ. 0.17ರಷ್ಟಿದೆ. ಆದ್ದರಿಂದ ಅರಣ್ಯ ಇಲಾಖೆ ಪ್ರಸುತ್ತ ಜಿಲ್ಲೆಯನ್ನು ಹಸಿನಾಗಿಸುವ ಪಣತೊಟ್ಟು ಶ್ರಮಿಸುತ್ತಿದೆ. ಅರಣ್ಯ ರಕ್ಷಣೆ ಹಲವಾರು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ. ಎಲ್ಲರೂ ಕೈ ಜೋಡಿಸಿದರೆ ಮಾತ್ರ ಅರಣ್ಯ ರಕ್ಷಣೆ ಸಾಧ್ಯ. ಕೇವಲ ಅಧಿಕಾರಿಗಳು ಬಂದು ಮಾಡುತ್ತಾರೆ ಎಂದು ಸುಮ್ಮನೆ ಕುಳಿತ್ತುಕೊಳ್ಳದೆ ರಕ್ಷಣಗೆ ಮುಂದಾಗಬೇಕು ಎಂದು ಹೇಳಿದರು.

ಉರುವಲಿಗೆ ಗಿಡಿ-ಮರಗಳನ್ನು ನಾಶ ಮಾಡುವುದನ್ನು ತೆಡೆಗಟ್ಟಲು ಮತ್ತು ಅರಣ್ಯ ಸಂರಕ್ಷಣೆ ಮಾಡುವ ದಿಸೆಯಲ್ಲಿ ಗಿರಿಜನ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಇಲಾಖೆಯಿಂದ ಉಚಿತ ಎಲ್ಪಿಜಿ ಗ್ಯಾಸ್‌, ಸೋಲಾರ್‌ ಲ್ಯಾಂಪ್‌ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗುತ್ತಿದೆ. 5 ವರ್ಷದಲ್ಲಿ 4108 ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಹಾಗೂ 500 ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿವಿಧ ಸಾಮಗ್ರಿ ವಿತರಿಸಲಾಗಿದೆ ಎಂದು ಹೇಳಿದರು.

ಪ್ರಗತಿಪರ ರೈತರಾದ ತಾಜಪುರದ ಮಲ್ಲಪ ಬಿದರಿ, ಸವನಳ್ಳಿ ರಾಜುಗೌಡ ಬಿರಾದಾರ, ಇಂಡಿಯ ಬಸವರಾಜ ಕರಾಳೆ, ದಾನಪ್ಪಗೌಡ ಬಿರಾದಾರ, ಸಿಂದಗಿಯ ನಾಗಣ್ಣಗೌಡ ಪಾಟೀಲ, ಬಸವರಾಜ ಬೋಮ್ಮನಳ್ಳಿ, ಬ.ಬಾಗೇವಾಡಿ ಸಿದ್ರಾಮ ಮಾಲಕರಡ್ಡಿ, ಎಂ.ವೈ. ಮಾಲಕರಡ್ಡಿ, ಮುದ್ದೇಬಿಹಾಳ ಬಸಪ್ಪ ವಾಲಿಕಾರ, ಸಂಗಪ್ಪ ಸಂಗಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೃಷಿ ಮಹಾವಿದ್ಯಾಲಯದ ಡೀನ್‌ ಬಿ.ಕೆ.ನಾಯಕ, ಎಡಿಆರ್‌ ಡಾ| ಎ.ಎಸ್‌. ಕಟಗೇರಿ, ಎಸ್‌.ಬಿ. ಕಲಘಟಗಿ, ರಾಜಕುಮಾರ ಜೊಲ್ಲೆ, ಬಾಬು ಸಜ್ಜನ, ಬಿ.ಪಿ. ಚವ್ಹಾಣ, ಎಂ.ಜಿ. ಕ್ಯಾತನವರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next