Advertisement

ವಾಲ್ಮೀಕಿ ಚಿಂತನೆ‌ ಮೈಗೂಡಿಸಿಕೊಳ್ಳಿ

11:47 AM Oct 14, 2019 | Naveen |

ವಿಜಯಪುರ: ನಾಗರಿಕತೆಯೇ ಕಲ್ಪನಾತೀತ ಎನ್ನುವ ಕಾಲಘಟ್ಟದಲ್ಲಿ ನಾಗರಿಕತೆಯ ಕಲ್ಪನೆ ನೀಡಿ ಪವಿತ್ರ ರಾಮಾಯಣ ಮಹಾಕಾವ್ಯ ರಚಿಸಿದ ಮಹಾನ್‌ ಜ್ಞಾನಿ ಮಹರ್ಷಿ ವಾಲ್ಮೀಕಿ. ದೇಶದಲ್ಲಿ ನಿತ್ಯವೂ ರಾಮಾಯಣ ಹಾಗೂ ರಾಮನ ಕುರಿತು ಮಾತನಾಡುತ್ತಿದ್ದರೂ ರಾಮಾಯಣದಂಥ ಮಹಾಕಾವ್ಯವನ್ನು ಕೊಡುಗೆ ನೀಡಿದ ವಾಲ್ಮೀಕಿ ಅವರ ಹೆಸರಿನಲ್ಲಿ ಒಂದೇ ಒಂದು ವಿಶ್ವವಿದ್ಯಾಲಯವಿಲ್ಲ ಎಂಬುದು ನಿಜಕ್ಕೂ ನೋವಿನ ಸಂಗತಿ.ಹೀಗಾಗಿ ದೇಶದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರು ನಾಮಕರಣವಾಗಲಿ ಎಂದು ನ್ಯಾಯವಾದಿ ಶಿವಕುಮಾರ ಪೂಜಾರಿ ಅಭಿಪ್ರಾಯಪಟ್ಟರು.

Advertisement

ರವಿವಾರ ನಗರದ ಕಂದಗಲ್‌ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ರಾಮಾಯಣ ಎಂಬ ಉದಾತ್ತ ಗ್ರಂಥದಲ್ಲಿರುವ ತತ್ವ, ಬೋಧನೆ ಪರಿಣಾಮವಾಗಿ ಭಾರತೀಯ ಸಂಸ್ಕೃತಿ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಆದರೆ ಅಂತಹ ಮಹಾನ್‌ ಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ಒಂದೇ ವಿಶ್ವವಿದ್ಯಾಲಯ ಇಲ್ಲದಿರುವುದು ನೋವಿನ ಸಂಗತಿ. ಈ ನಿಟ್ಟಿನಲ್ಲಿ ಸರ್ಕಾರ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರು ಇರಿಸಬೇಕು ಎಂದರು.

ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಮಹಾನ್‌ ಕಾವ್ಯ ರಾಮಾಯಣದಲ್ಲಿ ಗುರುಭಕ್ತಿ, ಪಿತೃವಾಕ್ಯ ಪರಿಪಾಲನೆ, ಸಹೋದರ ಭಕ್ತಿ, ಉತ್ತಮ ಆಡಳಿತ ನಡೆಸುವ ಬಗೆ, ಪ್ರಜಾ ಕಲ್ಯಾಣ, ಸಹಕಾರ ಗುಣ ಹೀಗೆ ನಾನಾ ತತ್ವಗಳ ಮಹತ್ವವನ್ನು ತಿಳಿಸುವ ಅಪರೂಪದ ಮಹಾನ್‌ ಗ್ರಂಥವಾಗಿದೆ. ಇಂಥ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳನ್ನು ನಾವು ಸದಾ ಮೈಗೂಡಿಸಿಕೊಂಡು ಬದುಕಬೇಕಿದೆ ಎಂದರು.

ಮಹರ್ಷಿ ವಾಲ್ಮೀಕಿ ಸಮಾಜಕ್ಕೆ ಬಹುದೊಡ್ಡ ಪರಂಪರೆಯೇ ಇದೆ. ತ್ಯಾಗ, ಗುರುಭಕ್ತಿಯ ಪ್ರತೀಕವಾಗಿ ಮಹರ್ಷಿ ವಾಲ್ಮೀಕಿ ಸಮಾಜ ಗುರುತಿಸಿಕೊಂಡಿದೆ. ಸಮಾಜದ ಪ್ರತಿಯೊಬ್ಬನ ನಯನಗಳಲ್ಲಿಯೂ ಕ್ಷಾತ್ರ ತೇಜಸ್ಸನ್ನು ಕಾಣಬಹುದಾಗಿದೆ. ಏಕಲವ್ಯನ ಗುರುಭಕ್ತಿ ಮೆಚ್ಚುವಂತಹದ್ದು, ಗುರುವಾಗಿ ಹೆಬ್ಬರಳನ್ನೇ ಗುರುದಕ್ಷಿಣೆ ರೂಪದಲ್ಲಿ ನೀಡುವ ಮೂಲಕ ಏಕಲವ್ಯ ತ್ಯಾಗ ಹಾಗೂ ಗುರುಭಕ್ತಿಯ ಪ್ರತೀಕ. ಮತ್ತೂಂದೆಡೆ ಶಿವನ ಮೇಲಿನ ಭಕ್ತಿಗಾಗಿ ಕಣ್ಣುಗಳನ್ನೇ ದಾನ ಮಾಡಿ ಪ್ರಥಮ ನೇತ್ರದಾನಿ ಎನಿಸಿಕೊಂಡ ಬೇಡರ ಕಣ್ಣಪ್ಪ ನಾಯಕ ಸಮುದಾಯ ಹೆಮ್ಮೆ ಎಂದರು.

Advertisement

ಇದಲ್ಲದೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ ಸಿಂಧೂರ ಲಕ್ಷ್ಮಣ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುಮುಖ್ಯ ಪಾತ್ರ ವಹಿಸಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿರುವ ಹಲಗಲಿ ಬೇಡರ ಧಂಗೆ ಹೀಗೆ ವಾಲ್ಮೀಕಿ ಸಮುದಾಯ ಇತಿಹಾಸದ ಅನೇಕ ಪುಟಗಳಲ್ಲಿ ತನ್ನ ಕೊಡುಗೆ ನೀಡುತ್ತ ಬಂದಿದೆ. ಆಧುನಿಕ ಯುಗದಲ್ಲಿಯೂ ವಾಲ್ಮೀಕಿ ಸಮಾಜದ ನಾಯಕರು ರಾಜಕೀಯವಾಗಿ ಪ್ರಬಲ ಸ್ಥಾನದಲ್ಲಿದ್ದು, ಸರ್ಕಾರ ರಚನೆಯಲ್ಲೂ ಬಹುಮುಖ್ಯ ಪಾತ್ರ ವಹಿಸುತ್ತಿರುವುದು ಗೊತ್ತಿರುವ ಸಂಗತಿ ಎಂದರು.

ಕಂದಾಯ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿಎಸ್‌ಪಿ ಲಕ್ಷ್ಮೀನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ ಪಾಲ್ಗೊಂಡಿದ್ದರು. ರಾಜಶೇಖರ ದೈವಾಡಿ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next