ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ್ ಗ್ರಾಮ ವ್ಯಾಪ್ತಿಯಲ್ಲಿ ಕಂದಾಯ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುವುದನ್ನು ಪತ್ತೆ ಹಚ್ಚಿ, ಎರಡು ಟಿಪ್ಪರ್ ಸಮೇತ ಮಣ್ಣನ್ನು ಸ್ವಾಧೀನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಗನಿಗಾರಿಕೆ ನಡೆಸಿ, ಅಕ್ರಮ ಸಂಗ್ರಹ ಹಾಗೂ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇಂಡಿ ತಹಶಿಲ್ದಾರ ನೇತೃತ್ವದಲ್ಲಿ ಕಂದಾಯ ಮತ್ತು ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳ ತಂಡ ಜಂಟಿಯಾಗಿ ದಾಳಿ ನಡೆಸಿದೆ. ಅನಧಿಕೃತವಾಗಿ ಪಟ್ಟ ಜಮೀನಿನಲ್ಲಿ ಮಣ್ಣು ಗಣಿಗಾರಿಕೆ ಮತ್ತು ಸಾಗಾಣಿಕೆ ಮಾಡಿರುವ ಸಂಬಂದ ವ್ಯಾಪ್ತಿಯ ಪೆÇಲೀಸ್ ಠಾಣೆಗಳಲ್ಲಿ ವಾಹನ ಮತ್ತು ಜಮೀನಿನ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾಗಿ ಇಂಡಿ ಉಪ ವಿಭಾಗಾಧಿಕಾರಿ ರಾಹುಲ್ ಸಿಂಧೆ ತಿಳಿಸಿದ್ದಾರೆ.
ಇದಲ್ಲದೇ ಈ ಬಗ್ಗೆ ಸಾರ್ವಜನಿಕರಿಗೆ ಮಣ್ಣು ಗಣಿಗಾರಿಕೆ ಮಾಡುವ ಬಗ್ಗೆ ಮಾಹಿತಿ ನೀಡಿರುವ ಉಪ ವಿಭಾಗಾಧಿಕಾರಿ ಸಿಂಧೆ, ಯಾವುದೇ ಸರ್ಕಾರಿ, ಖಾಸಗಿ ಜಮೀನಿನಲ್ಲಿ ದೊರೆಯುವ ಉಪ ಖನಿಜಗಳಾದ ಕಲ್ಲು, ಮಣ್ಣು, ಮರಳು ಇತ್ಯಾದಿ ತೆಗೆದು ಬಳಸುವ ಪೂರ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ಪಡೆಯಬೇಕು. ಉಪ ಖನಿಜದ ಗಣಿಗಾರಿಕೆ ಕುರಿತು ಉಪ ಖನಿಜ ರಾಜಾಧನ, ಶುಲ್ಕ ಪಾವತಿಸಿ ಗಣಿಗಾರಿಕೆ ನಡೆಸಬೇಕು. ಪ್ರತಿ ಟನ್ ಮಣ್ಣಿಗೆ 40 ರೂ. ರಾಜಧನ ಇತರೆ ಶುಲ್ಕ ಭರಿಸಬೇಕು. ಇಂತ ಸಕ್ರಮವಲ್ಲದ ರೀತಿಯಲ್ಲಿ ಉಪ ಖನಿಜ ಗಣಿಗಾರಿಕೆ ನಡೆಸುವುದು ಕಾನೂನು ಬಾಹೀರ ಚಟುವಟಿಕೆ ಎಂದು ಎಚ್ಚರಿಸಿದ್ದಾರೆ.
ಅಂತಹ ಜಮೀನಿನ ಮಾಲೀಕ, ಅವರ ಜಮೀನಿನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಉಪ ವಿಭಾಗಾಧಿಕಾರಿ ಸಿಂಧೆ ಎಚ್ಚರಿಸಿದ್ದಾರೆ.