Advertisement

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

11:51 AM Dec 11, 2019 | Team Udayavani |

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ಕರೆ ಮೇರೆಗೆ ಮಂಗಳವಾರ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಶಾಲೆ ಬಂದ್‌ ಮಾಡಿ, ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಅನುದಾನ ರಹಿತ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ ಏರಿಸುವುದು, ಹಿಂದನಂತೆ ಆರ್‌ಟಿಇ ಮುಂದುವರಿಸಬೇಕು. ಖಾಸಗಿ ಹಾಗೂ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವಲ್ಲಿ ತಾರತಮ್ಯ ಕೈ ಬಿಡುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲೆಯ 1010 ಅನುದಾನರಹಿತ ಶಾಲೆಗಳ ಪದಾಧಿಕಾರಿಗಳು ಶಾಲೆ ಬಂದ್‌ ಮಾಡಿ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಗರದ ಸಿದ್ದೇಶ್ವರ ದೇವಾಲಯದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಖಾಸಗಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿ-ಶಿಕ್ಷಕರು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಪ್ರಸನ್ನ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ವಿಜಯಪುರ ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಶಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ದಶಕಗಳಿಂದ ಸಾವಿರಾರು ಜನ ಶಿಕ್ಷಕರು ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಬೇಡಿಕೆ ಈಡೇರಿಸುವ ಭರವಸೆ ಈಡೇರಿಸುವಲ್ಲಿ ಕಾಲಹರಣ ಮಾಡುತ್ತಿವೆ.

ಸರ್ಕಾರಗಳ ನಿರ್ಲಕ್ಷ್ಯದ ಪರಿಣಾಮ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಬದುಕು ಕಟ್ಟಿಕೊಳ್ಳಲಾಗದೆ ಅನೇಕ ಸಮಸ್ಯೆ ಎದುರಿಸುವಂತಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಿರುವ ಆರ್‌ಟಿಇ ಕಾಯ್ದೆಯಲ್ಲಿ ಯಾವುದೇ ಮಾರ್ಪಾಡು ಮಾಡಬಾರದು. ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಸರ್ಕಾರ ಯಾವುದೇ ಕಾರಣಕ್ಕೂ ಈ ಯೋಜನೆ ಅಡಿಯಲ್ಲಿ ನಿರ್ಬಂಧನೆ ವಿಧಿಸಬಾರದು.

1995ರವರೆಗಿನ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಿದ ಸರಕಾರ ನಂತರ ಆರಂಭಗೊಂಡಿದ್ದ ಸಂಸ್ಥೆಗಳಿಗೆ ಅನುದಾನ ನೀಡದೆ ಕಡೆಗಣಿಸಿದೆ. ಸರ್ಕಾರದ ಈ ತಾರತಮ್ಯದಿಂದಾಗಿ ಅನುದಾನ ರಹಿತ ಶಾಲೆಯಲ್ಲಿ ಸೇವೆ ಸಲ್ಲಿಸುವ ಸಾವಿರಾರು ಜನ ಶಿಕ್ಷಕರ ಬದುಕು ಅತಂತ್ರವಾಗಿದೆ ಎಂದು ದೂರಿದರು.

Advertisement

1995ರ ನಂತರ ಪ್ರಾರಂಭವಾದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು, ಖಾಸಗಿ ಶಾಲೆಗಳಿಗೆ ಜನಪ್ರತಿನಿಧಿಗಳು ಅನುದಾನ ಒದಗಿಸುವ ನಿಟ್ಟಿನಲ್ಲಿ ವಿಧಿಸಲಾಗಿರುವ ನಿರ್ಬಂಧ ತೆರವುಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಯ ಮನವಿ ಸಲ್ಲಿಸಿದರು.

ಸಂಘಟನೆ ಕಾರ್ಯಾಧ್ಯಕ್ಷ ಸಂಗನಗೌಡ ಯಂಕಂಚಿ, ಜಿಲ್ಲಾ ಉಪಾಧ್ಯಕ್ಷ ಎಂ.ಆರ್‌. ತುಪ್ಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲೇಶಿ ಪವಾರ, ಸಹ ಕಾರ್ಯದರ್ಶಿ ಲಕ್ಷ್ಮೀಕಾಂತ ಮಾನೆ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next