ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಜೈನಾಪುರ ರೈತರೊಬ್ಬರ ಕಬ್ಬಿನ ಗದ್ದೆಯಲ್ಲಿ ಚಿರತೆಯ ಎರಡು ಮರಿಗಳು ಪತ್ತೆಯಾಗಿವೆ.
ಬಬಲೇಶ್ವರ ತಾಲ್ಲೂಕಿನ ಜೈನಾಪುರ ಗ್ರಾಮದ ಪ್ರಶಾಂತ ದೇಸಾಯಿ ಎಂಬುವವರ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ ಚಿರತೆಯ ಮರಿಗಳು ಪತ್ತೆಯಾಗಿವೆ.
ಕಳೆದ ಮೇ ತಿಂಗಳಲ್ಲಿ ಇದೇ ಪ್ರದೇಶದಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದವು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದು ಗಂಡು ಚಿರತೆ ಸೆರೆಯಾಗಿತ್ತು. ಈ ಮರಿಗಳು ಸೆರೆ ಸಿಕ್ಕ ಗಂಡು ಚಿರತೆಯ ಸಂಗಾತಿಯದ್ದೇ ಇರಬಹುದು ಎಂದು ರೈತರು ಶಂಕಿಸಿದ್ದಾರೆ. ಆದರೆ ಮರಿಗಳು ಪತ್ತೆಯಾದ ಸ್ಥಳದಲ್ಲಿ ತಾಯಿ ಚಿರತೆ ಸುಳಿವು ಸಿಕ್ಕಿಲ್ಲ, ಹೀಗಾಗಿ ಈ ಪರಿಸರದಲ್ಲಿ ತಾಯಿ ಚಿರತೆ ಇರುವ ಭೀತಿ ಎದುರಾಗಿದೆ.
ಮರಿಗಳನ್ನು ಕಳೆದುಕೊಂಡ ಹೆಣ್ಣು ಚಿರತೆ ಕುಪಿತಗೊಂಡು ಮರಿಗಳಿದ್ದ ಪರಿಸರದ ಜನ-ಜಾನುವಾರುಗಳ ಮೇಲೆ ದಾಳಿ ಮಾಡುವ ಭೀತಿ ಎದುರಾಗಿದೆ.
ತಮ್ಮ ಕಬ್ಬಿನ ಗದ್ದೆಯಿಂದ ರಕ್ಷಿಸಲ್ಪಟ್ಟ ಚಿರತೆಯ ಎರಡೂ ಮರಿಗಳನ್ನು ಪ್ರಶಾಂತ ದೇಸಾಯಿ ಮನೆಗೆ ಒಯ್ದು ಆರೈಕೆ ಮಾಡಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಗಳನ್ನು ಹಸ್ತಾಂತರಿಸಿದ್ದಾರೆ.