ವಿಜಯಪುರ: ಅತಿ ಎತ್ತರದ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಜಿಲ್ಲೆಯ ಮಹತ್ವಾಕಾಂಕ್ಷೆಯ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ದಕ್ಷಿಣ ಕಾಲುವೆಗೆ ನೀರು ಹರಿಸಲಾಗಿದ್ದು, ಮೊದಲ ಬಾರಿ ತಮ್ಮೂರಿಗೆ ಕಾಲುವೆ ಮೂಲಕ ಹರಿದು ಬಂದ ಗಂಗೆಯನ್ನು ಕವಟಗಿ ಗ್ರಾಮದ ಮಹಿಳೆಯರು ಪೂಜೆ ಸಲ್ಲಿಸಿ ಗಂಗೆಗೆ ಉಡಿ ತುಂಬಿ ಬರಮಾಡಿಕೊಂಡರು. ಯುವಕರು ಓಕುಳಿಯಾಡಿ ಗಂಗೆಯನ್ನು ಅದ್ಧೂರಿಯಾರಿ ಸ್ವಾಗತಿಸಿದರು.
ಕೃಷ್ಣಾ ನದಿ ನೀರು ಕವಟಗಿಯ ಹತ್ತಿರ ಲಿಫ್ಟ್ ಮೂಲಕ ನದಿಯಿಂದ 165 ಮೀ. ಎತ್ತರದ ತಿಕೋಟಾ ಪ್ರದೇಶದ ಜಮೀನಿಗೆ ನೀರು ಮೇಲೆತ್ತಿ ನೀರಾವರಿ ಕಲ್ಪಿಸುವ ಎಂ.ಬಿ. ಪಾಟೀಲ ಕನಸಿನ ಯೋಜನೆ ಕೊನೆಗೂ ಕೈಗೂಡಿದೆ. ತಿಕೋಟಾ ಬಳಿಯ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕು ಕಾಲುವೆಗಳ ಮೂಲಕ ಯತ್ನಾಳ, ಇಟ್ಟಂಗಿಹಾಳ, ಕನಮಡಿ, ಕಣಮುಚನಾಳ ಈ ನಾಲ್ಕು ದಿಕ್ಕಿನಲ್ಲಿ ಕಾಲುವೆಗಳನ್ನು ನಿರ್ಮಿಸಲಾಗಿದೆ.
ಕಳೆದ ವಾರ ಯತ್ನಾಳ ಉತ್ತರ ಕಾಲುವೆಗೆ ನೀರು ಹರಿಸಲಾಗಿದ್ದು, ಇದೀಗ ದಕ್ಷಿಣ ಕಣಮುಚನಾಳ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಈ ಕಾಲುವೆ ತಿಕೋಟಾ-ಕಣಮುಚನಾಳ ಡೋಣಿ ವರೆಗೆ 19 ಕಿ.ಮೀ. ಉದ್ದ ಹರಿಯುತ್ತದೆ. ತಿಕೋಟಾ, ರತ್ನಾಪುರ, ತಾಜಪುರ, ಧನ್ಯಾಳ, ಕಣಮುಚನಾಳ ಗ್ರಾಮಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಿ ಉಳಿಕೆ ನೀರು ನಂತರ ಡೋಣಿ ನದಿ ಸೇರಲಿದೆ.
ನಮ್ಮ ಭಾಗಕ್ಕೆ ಕಾಲುವೆ ಮೂಲಕ ನೀರಾವರಿ ಎನ್ನುವುದು ಗಗನ ಕುಸುಮವಾಗಿತ್ತು. ಹೀಗಾಗಿ ಕೊಳವೆ ಬಾವಿ ಮೂಲಕ ದೊರೆಯುವ ಅಲ್ಪ ನೀರನ್ನೇ ಸಂಗ್ರಹಿಸಿಕೊಂಡು, ದ್ರಾಕ್ಷಿ, ದಾಳಿಂಬೆಯಂತಹ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದೇವೆ. ನಾಲೆ ಮೂಲಕ ನೀರು ಹರಿಸುತ್ತಿರುವುದು ನಮ್ಮ ಸಂತಸವನ್ನು ನೂರ್ಮಡಿಗೊಳಿಸಿದೆ. ನಮ್ಮ ಈ ಸಂಭ್ರಮಕ್ಕೆ ಕಾರಣವಾದ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಮಾಜಿ ಸಚಿವ ಎಂ.ಬಿ. ಪಾಟೀಲ ಅಭಿನಂದನಾರ್ಹರು ಎಂದು ರೈತ ಮುಖಂಡರಾದ ಆರ್.ಜಿ. ಯರನಾಳ, ಅನಿಲ ಹಿರೇಮಠ ಹೇಳುತ್ತಾರೆ.
ಕಳೆದ ವರ್ಷವೇ ಇಲ್ಲಿ ಕಾಲುವೆ ನಿರ್ಮಿಸಲು ಆರಂಭಿಸಿದ್ದರೂ ಕಾಲುವೆ ಕಾಮಗಾರಿ ಮುಗಿದಿಲ್ಲ. ಆದರೂ ಅದಾಗಲೇ ನೀರು ಹರಿಸಿದ್ದು, ಬರಗಾಲದಿಂದ ಕಂಗೆಟ್ಟಿದ್ದ ನಮಗೆ ಇದರಿಂದ ನಮಗೆ ಬಾರಿ ಉಪಯೋಗವಾಗಿದೆ ಎಂದು ಅನ್ನದಾತರು ಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಎಡವೆ ಸಂಭ್ರಮಿಸುತ್ತಾರೆ.
ಕೇವಲ ಕಾಲುವೆಗೆ ನೀರು ಹರಿಸುವುದಲ್ಲದೇ, ಸುತ್ತಲಿನ ಕೆರೆ, ಬಾಂದಾರಗಳು, ಹಳ್ಳಗಳಿಗೂ ನೀರು ಹರಿಸಿದ್ದು ಬೇಸಿಗೆಯಲ್ಲಿ ಈ ಬಾರಿ ನಮಗೆ ನೀರಿನ ತೊಂದರೆ ಆಗುವುದಿಲ್ಲ ಎನ್ನುವ ಭರವಸೆ ಇದೆ ಎನ್ನುವಾಗ ಈ ಭಾಗದ ರೈತರ ಮುಖದಲ್ಲಿ ಮಂದಾಹಸ ಮೂಡಿತ್ತು. ತಮ್ಮ ಗ್ರಾಮಕ್ಕೆ ನಾಲೆ ಮೂಲಕ ನೀರು ಹರಿದು ಬಂದ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಬರಮಾಡಿಕೊಂಡ ಸಂದರ್ಭದಲ್ಲಿ ಆರ್.ಜಿ. ಯರನಾಳ, ಅನಿಲ ಹಿರೇಮಠ, ರಾಮಜಿ ಮಿಸಾಳ, ಗುರು ಮುಚ್ಚಂಡಿ, ಶ್ರೀಶೈಲ ಆಲಳ್ಳಿ, ಗೌಸಪೀರ್ ಮೊಕಾಶಿ, ನಿಂಗನಗೌಡ ಬಿರಾದಾರ, ಮಹೇಶ ಪಾಟೀಲ, ಪರಮಾನಂದ ಕಲಬೀಳಗಿ, ಅಶೋಕ ಸಾವಳಸಂಗ, ಉಮೇಶ ಯರನಾಳ, ಅಡಿವೆಪ್ಪ ಬಿರಾದಾರ ಇದ್ದರು.