ವಿಜಯಪುರ: ಪ್ರವಾಸೋದ್ಯಮಕ್ಕೆ ಬೇಕಾದ ಅತಿ ಉತ್ಕೃಷ್ಟ ಹಾಗೂ ರಾಜ್ಯದಲ್ಲೇ ಅತಿ ಹೆಚ್ಚು ವೀಕ್ಷಣೆ ಸಂಪನ್ಮೂಲ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಈ ಇಲಾಖೆಯನ್ನು ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಕಡೆಗಣಿಸಲಾಗಿದೆ ಎಂದರೆ ಕಳೆದ 16 ವರ್ಷಗಳಿಂದ ವಿಜಯಪುರ ಪ್ರವಾಸೋದ್ಯಮ ಇಲಾಖೆಗೆ ಇಲಾಖೆಯ ಪೂರ್ಣಾವಧಿ ಅಧಿಕಾರಿಗಳೇ ಇಲ್ಲ. ಪರಿಣಾಮ ಪ್ರವಾಸೋದ್ಯಮ ವ್ಯವಸ್ಥೆಯ ಆಳ-ಅಗಲದ ಅರಿವಿಲ್ಲದ ಅನ್ಯ ಇಲಾಖೆ ಅಧಿಕಾರಿಗಳೇ ಇಲ್ಲಿ ಪ್ರಭಾರಿಗಳಾಗಿ ಸೇವೆ ಸಲ್ಲಿಸುವ ಮಟ್ಟಿಗೆ ವಿಶ್ವವಿಖ್ಯಾತ ಸ್ಮಾರಕಗಳ ತವರು ಅಭಿವೃದ್ಧಿ ಹೀನವಾಗಿದೆ.
Advertisement
ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಪ್ರವಾಸೋದ್ಯಮ ಇಲಾಖೆ ಕಚೇರಿ ಇದ್ದು, ಸಹಾಯಕ ನಿರ್ದೇಶಕರ ದರ್ಜೆಯ ಅಧಿಕಾರಿ ಹೊಂದಿತ್ತು. 2003ರಲ್ಲಿ ಪಿ.ಎಚ್. ಸಾಬನ್ನವರ ಎಂಬ ಅಧಿಕಾರಿ ಪೂರ್ಣಾವಧಿಯಾಗಿ ಇಲಾಖೆಯವರೇ ಇದ್ದರು. ಇವರು ವರ್ಗವಾದ ಬಳಿಕ ಕುಲಕರ್ಣಿ ಎಂಬ ಇಲಾಖೆ ಅಧಿಕಾರಿಯನ್ನು ಇಲ್ಲಿಗೆ ನಿಯೋಜಿಸಿದರೂ ನೆರೆಯ ಬಾಗಲಕೋಟೆ ಜಿಲ್ಲೆಯ ಪ್ರಭಾರಿ ನೀಡಿದ್ದರಿಂದ ಈ ಅಧಿಕಾರಿ ಇಲ್ಲಿ ಕೆಲಸ ಮಾಡಿದ್ದೇ ಅಪರೂಪ. ಕುಲಕರ್ಣಿ ಅವರು ಕೆಲವೇ ತಿಂಗಳಲ್ಲಿ ವರ್ಗವಾಗುತ್ತಲೇ ರಾಜು ಎಂಬ ಅಧಿಕಾರಿ ಬಂದರೂ ಬಹಳ ದಿನ ಇಲ್ಲಿ ಕರ್ತವ್ಯ ನಿರ್ವಹಿಸಲಿಲ್ಲ.
Related Articles
Advertisement
ಕೇವಲ ಎರಡು ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಗೆ ಪಶು ಸಂಗೋಪನೆ ಇಲಾಖೆ ಪಶು ವೈದ್ಯಾಧಿಕಾರಿ ಡಾ| ಭೀಮಾಶಂಕರ ಕನ್ನೂರ ಅವರನ್ನು ನಿಯೋಜಿಸಲಾಯಿತು. 28-3-2018ರಂದು ಪ್ರಭಾರಿ ಅಧಿಕಾರ ವಹಿಸಿಕೊಂಡ ಡಾ| ಕನ್ನೂರ, 36 ದಿನಗಳಲ್ಲೇ ಈ ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು. ಡಾ| ಕನ್ನೂರ ಅವರಿಗೆ ಪ್ರಭಾರಿ ಅಧಿಕಾರ ಹಸ್ತಾಂತರಿಸಿದ್ದ ಅರಣ್ಯ ಇಲಾಖೆ ಅಧಿಕಾರಿ ಮಹೇಶ ಕ್ಯಾತನ್ ಅವರೇ 2018 ಮೇ 3ರಂದು ಪ್ರಭಾರಿ ಅಧಿಕಾರ ಪಡೆದರು. ಕಳೆದ ಜುಲೈ 31ರಂದು ವಯೋ ನಿವೃತ್ತಿ ಹೊಂದಿದ್ದರಿಂದ ಈ ಹುದ್ದೆಗೆ ಮತ್ತೆ ಪ್ರಭಾರಿಗಳ ತಲಾಶ್ ನಡೆಯಿತು. ಅಂತಿಮವಾಗಿ ವಿಜಯಪುರ ಸಹಾಯಕ ಅಯುಕ್ತ ರಾಗಿರುವ ಸೋಮನಿಂಗ ಗೆಣ್ಣೂರ ಅವರಿಗೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಯ ಪ್ರಭಾರಿ ನೀಡಲಾಗಿದೆ.
ಪ್ರವಾಸೋದ್ಯಮ ಇಲಾಖೆ ಮಾತ್ರ ಇಲಾಖೆ ಅಧಿಕಾರಿಗಳೇ ಇಲ್ಲದೇ 13 ವರ್ಷಗಳನ್ನು ತಳ್ಳಿದ ಪ್ರವಾಸೋದ್ಯಮ ಇಲಾಖೆ ಬಡವಾಗಿ ಕುಳಿತಿದೆ. ಪ್ರವಾಸೋದ್ಯಮ ಇಲಾಖೆ ಮೂಲ ಸ್ವರೂಪ ತಿಳಿಯದ ಅನ್ಯ ಇಲಾಖೆಗಳ ಪ್ರಭಾರಿ ಅಧಿಕಾರಿಗಳು ಈ ಇಲಾಖೆ ಮೂಲ ಕಾರ್ಯವೈಖರಿ-ವಿಧಾನಗಳನ್ನು ಹುಡುಕಿ ಓದುವ ಹಂತದಲ್ಲೇ ಅವರು ಅಲ್ಲಿಂದ ಎತ್ತಂಗಡಿ ಆಗಿರುತ್ತಾರೆ. ಇಂಥ ಸ್ಥಿತಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ವಿಖ್ಯಾತ ಐತಿಹಾಸಿಕ ನೂರಾರು ಸ್ಮಾರಕಗಳನ್ನು ಮಡಿಲಲ್ಲಿ ತುಂಬಿಕೊಂಡಿರುವ ವಿಜಯಪುರ ಜಿಲ್ಲೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯವನ್ನೂ ಕಲ್ಪಿಸಲಾಗದೇ ತೊಳಲುತ್ತಿದೆ.