ವಿಜಯಪುರ: ಐತಿಹಾಸಿಕ ಸ್ಮಾರಕಗಳ ದೊಡ್ಡ ಗಣಿಯನ್ನೇ ಹೊಂದಿರುವ ಪಾರಂಪರಿಕ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಕಚೇರಿ ಯನ್ನು ಕೆಳದರ್ಜೆಗೆ ಇಳಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ. ಬಸವನಾಡಿನ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಕಚೇರಿಯನ್ನು ಸಹಾಯಕ ನಿರ್ದೇಶಕ ಕಚೇರಿಯಾಗಿ ಕೆಳದರ್ಜೆಗೆ ಇಳಿಸಿ ಹೊರಡಿಸಿದ್ದ ಆದೇಶ ಹಿಂಪಡೆದು ತಿದ್ದುಪಡಿ ಆದೇಶ ಹೊರಡಿಸಿದೆ.
Advertisement
ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇರುವ ವಿಜಯಪುರ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರ ಅಭಿವೃದ್ಧಿ ಮಾಡಿಲ್ಲ. ಪ್ರವಾಸೋದ್ಯಮ ಬಲಪಡಿಸುವ ಕುರಿತು ರೂಪಿಸಿರುವ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಅಭಿವೃದ್ಧಿಗೆ ಬಂದಿರುವ ಹತ್ತಾರು ಕೋಟಿ ರೂ. ಬಳಕೆ ಮಾಡಲು ಇಲಾಖೆಗೆ ಅಧಿಕಾರಿಯೇ ಇರಲಿಲ್ಲ. ಇಂಥ ಸ್ಥಿತಿಯಲ್ಲಿ ಸರ್ಕಾರ ಮತ್ತೂಂದು ಆಘಾತ ನೀಡಲು ಮುಂದಾಗಿತ್ತು.
Related Articles
Advertisement
ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಕಳೆದ 16 ವರ್ಷದಿಂದ ಇಲಾಖೆಯ ಮೂಲ ಅಧಿಕಾರಿಯೇ ಇಲ್ಲದ ಕುರಿತು ಆಗಸ್ಟ್ 15ರಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಸರ್ಕಾರ ಸರ್ಕಾರ ಧಾರವಾಡ ಕಚೇರಿಯಲ್ಲಿದ್ದ ಸಹಾಯಕ ನಿರ್ದೇಶಕ ದರ್ಜೆ ಅಧಿಕಾರಿ ಮಲ್ಲಿಕಾರ್ಜುನ ಭಜಂತ್ರಿ ಅವರನ್ನು ಉಪ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಿದ್ದು, ಅಕ್ಟೋಬರ್ 28ರಂದು ಅವರು ಅಧಿಕಾರ ಸ್ವೀಕರಿಸಿದ್ದರು. ಸರ್ಕಾರ ಇಲಾಖೆಗೆ ಅಧಿಕಾರಿಯನ್ನು ನೇಮಿಸಿದ ಖುಷಿಯಲ್ಲಿದ್ದ ಜಿಲ್ಲೆಯ ಜನರಿಗೆ ಇದರ ಬೆನ್ನಲ್ಲೇ ಕಚೇರಿಯನ್ನು ಕೆಳದರ್ಜೆಗೆ ಇಳಿಸುವ ಹುನ್ನಾರ ನಡೆಸಿತ್ತು. ಹೀಗಾಗಿ ಉದಯವಾಣಿ ಪತ್ರಿಕೆ ಈ ಕುರಿತು ನ. 30 ರಂದು ವಿಶೇಷ ವರದಿ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿತ್ತು.
ಪರಿಣಾಮ ಉಪ ನಿರ್ದೇಶಕರ ದರ್ಜೆಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಕುಸಿದಿದ್ದ ಪ್ರವಾಸೋದ್ಯಮ ಕಚೇರಿಯ ಹುದ್ದೆ ಮತ್ತೆ ಉಪ ನಿರ್ದೇಶಕರ ಕಚೇರಿ ದರ್ಜೆಯಲ್ಲೇ ಮುಂದುವರಿಯುವಂತಾಗಿದೆ.