ವಿಜಯಪುರ: ನನಗೆ ಟಿಕೆಟ್ ಸಿಗದಿದ್ದರೆ ಊರ ಸಿದ್ದಪ್ಪನ ತಲಿಮ್ಯಾಲೆ (ಸಿದ್ಧೇಶ್ವರ ದೇವರು) ಕಾಯಿ ಒಡೆದು, ಕೈ ಮುಗಿದು, ಮನೆಗೆ ಹೋಗುತ್ತೇನೆ. ಆದರೆ ಹೊಟ್ಟಿ ಕಿಚ್ಚಿನ ಕೆಲ ಮಂದಿ ಮಾತ್ರ ನನಗೆ ಟಿಕೆಟ್ ಸಿಗೋದಿಲ್ಲ ಅಂತ ಸುಳ್ಳು ಸುದ್ದಿ ಹಬ್ಬಿಸಿ, ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಕಿಡಿ ಕಾರಿದ್ದಾರೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನಗೆ ಟಿಕೆಟ್ ಸಿಗುವ ವಿಶ್ವಾಸವಿದ್ದು, ಪಕ್ಷ ಸ್ಪರ್ಧೆಗೆ ಅವಕಾಶ ನೀಡುವ ವಿಶ್ವಾಸವಿದ್ದು, ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ, ಗೆಲ್ಲುವುದು ನಿಶ್ಚಿತ.ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಅಧಿಕಾರ ಕಳೆದುಕೊಂಡಿರಬಹದು. ಆದರೆ, ವಿಧಾನಸಭೆ-ಲೋಕಸಭೆ ಚುನಾವಣೆಗಳಿಗೆ ಭಾರಿ ವ್ಯತ್ಯಾಸವಿದೆ. ಹೀಗಾಗಿ ವಿಧಾನಸಭೆ ಚುನಾವಣೆ ಲೋಕಸಭಾ ಚುನಾವಣೆ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆ ಬಳಿಕ ಸ್ಥಗಿತಗೊಳ್ಳಲಿವೆ. ಚುನಾವಣೆಯಲ್ಲಿ ನನಗೂ ಫ್ರೀ, ನಿನಗೂ ಫ್ರೀ ಎಂದು ಗ್ಯಾರಂಟಿ ಕಾರ್ಡ್ ಹಂಚಿದ ಕಾಂಗ್ರೆಸ್ ನಾಯಕರು, ಅಧಿಕಾರಕ್ಕೆ ಬರುತ್ತಲ್ಲೇ ನಿನಗೆ ಅದಿಲ್ಲ, ಅವರಿಗೆ ಇದಿಲ್ಲ ಅಂತೆಲ್ಲ ಷರತ್ತು ವಿಧಿಸಲಾರಂಭಿಸಿದ್ದಾರೆ. ಸರ್ಕಾರ ಗಂಡ-ಹೆಂಡತಿ ಮಧ್ಯೆ ಜಗಳ ಹಚ್ಚಿ, ಮನೆ ಒಡೆಯುತ್ತಿದೆ ಎಂದು ಕಿಡಿ ಕಾರಿದರು.
ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ದೇಶದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ನಿರೀಕ್ಷೆ ಮೀರಿ ಸಾಧನೆ ಮಾಡಿದ್ದಾರೆ. ರೈಲ್ವೇ ಇಲಾಖೆ ವಿದ್ಯುತ್-ಆಧುನೀಕರಣ, ಹೆದ್ದಾರಿಗಳ ನಿರ್ಮಾಣ, ವಿಮಾನ ನಿಲ್ದಾಣಗಳ ನಿರ್ಮಾಣ, ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಸರ್ಕಾರಿ ವೈಧ್ಯಕೀಯ ಕಾಲೇಜುಗಳ ಆರಂಭ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಸ್ವಾತಂತ್ರ್ಯ ನಂತರದಲ್ಲಿ ಆಗದಿದ್ದ ಅಭಿವೃದ್ಧಿ ಕೆಲಸಗಳನ್ನು ಕಡಿಮೆ ಅವಧಿಯಲ್ಲೇ ಮಾಡಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ ಹವಾ ಕಡಿಮೆ ಆಗಿಲ್ಲ. ಅವರು ಮಾಡಿರುವ ಅಭೂತಪೂರ್ವ ಸಾಧನೆಗಳ ಆಧಾರದಲ್ಲೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರಲಿದೆ. ಮೋದಿ ಅವರೇ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ಹಿಂದೆಂದೂ ಪ್ರಧಾನಿ ನರೇಂದ್ರ ಮೋದಿ ಅವರಂಥ ವಿಶಾಲ ಹೃದಯಿ ನಾಯಕನನ್ನು ನೋಡಿರಲಿಲ್ಲ. ಜಗತ್ತಿನ ಎಲ್ಲ ರಾಷ್ಟ್ರಗಳ ಜನರೇ ಮೋದಿ ಅವರ ಮೋಡಿಗೆ ಮನಸೋತಿದ್ದಾರೆ. ಪರಿಣಾಮವೇ 2014 ರಲ್ಲಿ 303.67 ಮಿಲಿಯನ್ ಡಾಲರ್ ಇದ್ದ ವಿದೇಶಿ ವಿನಿಮಯ ಹೂಡಿಕೆ ಬಂಡವಾಳ, ಇದೀಗ 593.73 ಮಿಲಿಯನ್‍ಗೆ ಏರಿದೆ. ಹೀಗಾಗಿ ವಿಶ್ವ ಮೆಚ್ಚಿದ ಮೋದಿ ಹವಾ ಎಂದೂ ಕಡಿಮೆ ಆಗಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮಾಧ್ಯಮ ಪ್ರಮುಖ ವಿಜಯ ಜೋಷಿ ಇದ್ದರು.