ವಿಜಯಪುರ : ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದು, ಭಾನುವಾರ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಭೇಟಿ ಪರಿಶೀಲನೆ ನಡೆಸಿದರು.
ಭಾನುವಾರ ಒಟ್ಟು 15 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದು, ನಗರದ ನವಬಾಗ್ ಪ್ರದೇಶದ ಸಿಕ್ಯಾಬ್ ಪಿಯು ಕಾಲೇಜ್, ಜಲನಗರದ ಹೇಮರೆಡ್ಡಿ ಪ್ರೌಢಶಾಲೆ, ಪುಲುಕೇಶಿ ನಗರದ ಜಗಜ್ಯೋತಿ ಬಸವೇಶ್ವರ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆಯನ್ನು ಅವಲೋಕಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಪರೀಕ್ಷಾ ಕರ್ತವ್ಯದಲ್ಲಿದ್ದ ಅಧಿಕಾರಿ ಸಿಬ್ಬಂದಿಗೆ ಪರೀಕ್ಷಾ ಅಕ್ರಮಗಳಿಗೆ ಅವಕಾಶ ನೀಡದಂತೆ ಸೂಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮೇ 22 ರಂದು ಬೆಳಿಗ್ಗೆ 3ನೇ ಅಧಿವೇಶನದ ಪರೀಕ್ಷೆಗೆ ಬರೆಯಲು 3975 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಸಿದ್ದು, ಇದರಲ್ಲಿ 2846 ಅಭ್ಯರ್ಥಿಗಳು ಹಾಜರಾಗಿದ್ದು, 1129 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.
ಮಧ್ಯಾಹ್ನ ವೇಳೆ ನಡೆದ 4ನೇ ಅಧಿವೇಶನದ ಪರೀಕ್ಷೆಗೆ 3975 ಹೆಸರು ನೋಂದಾಯಿಸಿದ್ದು, ಅದರಲ್ಲಿ 2830 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1145 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ ಎಂದರು.
ಎಲ್ಲಾ 15 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆಗಳು ಶಾಂತಿ, ಸುವ್ಯವಸ್ಥೆಯಿಂದ ನಡೆದಿದ್ದು, ಯಾವುದೇ ಅಕ್ರಮಗಳು ದಾಖಲಾಗಿರುವದಿಲ್ಲ ಎಂದು ತಿಳಿಸಿದರು.