Advertisement

ಶಿಕ್ಷಕರಲ್ಲಿ ಕರ್ತವ್ಯ ಪ್ರಜ್ಞೆ ಕುಸಿತ

04:41 PM Sep 06, 2019 | Team Udayavani |

ವಿಜಯಪುರ: ಶಿಕ್ಷಕರಲ್ಲಿ ಕರ್ತವ್ಯ ಪ್ರಜ್ಞೆ ಕಡಿಮೆ ಆಗುತ್ತಿರುವುದು ಸಮಾಜದಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಕುರಿತು ನಕಾರಾತ್ಮಕ ಸಂದೇಶ ರವಾನೆ ಆಗುತ್ತಿರುವುದು ನೋವಿನ ಸಂಗತಿ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ವಿಷಾದಿಸಿದರು.

Advertisement

ನಗರದ ಕಂದಗಲ್ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷ‌ಣ ಇಲಾಖೆ, ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ನಡೆದ ಶಿಕ್ಷ‌ಕರ ದಿನೋತ್ಸವ-2019 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷ‌ಕರು ಶಿಕ್ಷ‌ಕರಾಗಿಯೇ ಉಳಿದರೆ ಗೌರವ ತಾನಾಗಿಯೇ ಬರುತ್ತದೆ. ಜ್ಞಾನ, ಕಾರ್ಯ ವೈಖರಿ, ನಡತೆಯಿಂದ ಮಾತ್ರ ಗೌರವ ಸಿಗಲಿದೆ. ಕತ್ತಲೆಯನ್ನು ಓಡಿಸುವ ಶಕ್ತಿ ಗುರುವಿನಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷ‌ಕರಲ್ಲಿ ಕರ್ತವ್ಯ ಪ್ರಜ್ಞೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿ ಎಂದರು.

ಶಿಕ್ಷ‌ಕರು ತಮ್ಮ ಹಕ್ಕುಗಳನ್ನು ಪಡೆಯುವುದಲ್ಲಿ ತೋರುವ ಆಸಕ್ತಿಯನ್ನು ಕರ್ತವ್ಯ ಪಾಲನೆಗೆ ತೋರುತ್ತಿಲ್ಲ. ಶಿಕ್ಷ‌ಕರ ವಿಚಾರ ಹೆಚ್ಚಿನ ಗುಣಮಟ್ಟ ಹೊಂದಿದಲ್ಲಿ ದೇಶದ ಅಭಿವೃದ್ಧಿ ಆಗಲಿದೆ. ಶಿಕ್ಷಕರಾದವರು ನಿತ್ಯವೂ ವಿದ್ಯಾರ್ಥಿಯಾಗಿ, ನಿತ್ಯವೂ ಹೊಸದನ್ನು ಓದುವ ಹಾಗೂ ಓದಿದನ್ನು ಮಕ್ಕಳಿಗೆ ಹಂಚುವ ಕೆಲಸ ಮಾಡಬೇಕು. ಜ್ಞಾನದ ಹಸಿವಿಲ್ಲದ ಶಿಕ್ಷಕರು, ಮಕ್ಕಳಿಗೆ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾಗ ಶಿಕ್ಷಣ ನೀಡಲು ಸಾಧ್ಯವಿಲ್ಲ. ಶಿಕ್ಷಕರು ಮಾಡಿದ ಒಂದು ಪಾಠ ಪ್ರತಿ ವಿದ್ಯಾರ್ಥಿಯ ಜೀವಿತದ ಉದ್ದಕ್ಕೂ ಸ್ಮರಣೆಯಲ್ಲಿ ಇರುವಂತಿರಬೇಕು. ಶಿಕ್ಷಕರು ತಮ್ಮ ಶಾಲೆಯ ಪ್ರತಿ ಮಗುವಿಗೂ ಸ್ವಂತ ಮಕ್ಕಳಿಗೆ ತೋರುವ ಕಾಳಜಿ ತೋರಬೇಕು. ತಮ್ಮ ಶಾಲೆಯಲ್ಲಿ ಕಲಿಯುವ ಪ್ರತಿಯೊಂದು ಮಗುವಿನ ಶಿಕ್ಷಣಾಭಿವ್ರದ್ದಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಬಸವಜ್ಞಾನ ಗುರುಕುಲದ ಅಧ್ಯಕ್ಷ‌ ಈಶ್ವರ ಮಂಟೂರ, ಬುದ್ಧಿವಂತಿಕೆ ಮತ್ತು ಹೃದಯ ವಂತಿಕೆ ಸೇರಿದರೆ ಮಾತ್ರ ದೇಶ ಜಾಗತೀಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಈ ಎರಡೂ ಗುಣಗಳು ಶಿಕ್ಷ‌ಕರಲ್ಲಿ ಇರಬೇಕು. ಜಾತಿ, ಮತದ ಭೇದ, ಪಂಥ ಪಂಗಡದ ಆಸೆ, ಮೌಢ್ಯಾಚಾರಣೆ ಸೆಳೆತ ಇರಬಾರದು, ಮನೆ, ಮೋಹದ ಬಗ್ಗೆ ವ್ಯಾಮೋಹ ಇರಬಾರದು. ಸಂಕುಚಿತ ವಿಚಾರ ಮಾಡುವ ಶಿಕ್ಷಕರಿಂದ ಸಮಾಜಕ್ಕೆ ಮಾರಕ ಎಂದರು.

ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸಮಾರಂಭ ಚಾಲನೆ ನೀಡಿದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಶಿಕ್ಷ‌ಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ‌ ಕಲ್ಲಪ್ಪ ಕೊಡಬಾಗಿ, ಜಿ.ಪಂ. ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಶಿಕ್ಷ‌ಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕಿ ಸಾಯಿರಾಬಾನು ಖಾನ್‌, ನೋಡಲ್ ಅಧಿಕಾರಿ ಎಂ.ಎಸ್‌.ಬ್ಯಾಹಟ್ಟಿ, ಕ್ಷೇತ್ರ ಶಿಕ್ಷ‌ಣಾಧಿಕಾರಿ ಶರೀಫ್‌ ನದಾಫ್‌, ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ ಸಂಚಾಲಕ ಅರವಿಂದ ಕುಲಕರ್ಣಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next