ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾ ನದಿ ತೀರದ ಹಳ್ಳಿಗಳ ಬಳಿ ಮೂರು ವಾರಗಳಿಂದ ಸಂಚರಿಸುತ್ತಿರುವ ಮರಿ ಚಿರತೆ ಇನ್ನೂ ಸೆರೆಯಾಗಿಲ್ಲ. ಮತ್ತೊಂದೆಡೆ ಇಷ್ಟು ಅವಧಿಯಲ್ಲಿ ರೈತರ ಯಾವುದೇ ಪ್ರಾಣಿಯನ್ನು ಬೇಟೆ ಆಡದೇ ಜೀವಿಸಿರುವ ಚಿರತೆ ನಡೆಯೂ ಅಚ್ಚರಿ ಮೂಡಿಸಿದೆ. ಚಿರತೆ ಹೆಜ್ಜೆ ಗುರುತು ಆಧರಿಸಿ ಅರಣ್ಯ ಇಲಾಖೆ ಎರಡು ಗ್ರಾಮಗಳ ಬಳಿ ಮೇಕೆ ಕಟ್ಟಿ ಬೋನು ಇರಿಸಿ ಕಾಯುತ್ತಿದ್ದು, ಬೋನಿನ ಹತ್ತಿರ ಬಂದರೂ ಒಳ ಪ್ರವೇಶಿಸದೇ ಮರಳಿ ಹೋಗಿರುವುವುದು ತಲೆನೋವು ತರಿಸಿದೆ.
ಬಬಲೇಶ್ವರ ತಾಲೂಕಿನ ಶಿರಬೂರು ಬಳಿ ರೈತರೊಬ್ಬರ ಜಮೀನಿನಲ್ಲಿ ಮರಿ ಚಿರತೆಯೊಂದು ಓಡಾಡುವುದನ್ನು ಜೆಸಿಬಿ ಚಾಲಕ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಬಳಿಕ ಈ ಭಾಗದಲ್ಲಿ ಮತ್ತೆ ಆತಂಕ ಹೆಚ್ಚಿದೆ. ಆದರೆ ತಿಂಗಳ ಹಿಂದೆ ದೇವರಗೆಣ್ಣೂರು ಬಳಿ ಸೆರೆಯಾದ ಚಿರತೆಗೂ, ಶಿರಬೂರು ಬಳಿ ಕಾಣಿಸಿಕೊಂಡಿರುವ ಚಿರತೆ ವರ್ತನೆಗೂ ಭಾರಿ ವ್ಯತ್ಯಾಸ ಇದೆ. ತಿಂಗಳ ಹಿಂದೆ ಸೆರೆಯಾದ 3 ವರ್ಷದ ಚಿರತೆ 10 ದಿನಗಳಲ್ಲಿ 8 ಕುರಿ, 2 ಎಮ್ಮೆ ಕರು ಹಾಗೂ ಒಂದು ಆಕಳು ಕರುವನ್ನು ತಿಂದು ಹಾಕಿತ್ತು. ಇದರಿಂದ ಈ ಭಾಗದ ರೈತರು ಹಾಗೂ ಸಂಚಾರಿ ಕುರಿಗಾಯಿಗಳು ಕಂಗಾಲಾಗಿದ್ದರು. ಅಂತಿಮವಾಗಿ ಮೇಕೆಯ ಬೇಟೆ ಆಡಲು ಬಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿತ್ತು. ಆದರೆ, ಅರಣ್ಯ ಇಲಾಖೆಯ ಅಂದಾಜಿನ ಪ್ರಕಾರ ಸುಮಾರು 1 ವರ್ಷದ ಈ ಚಿರತೆ ಈವರೆಗೆ ಯಾವ ಜೀವ ಹಾನಿ ಅಥವಾ ಕನಿಷ್ಠ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿಲ್ಲ. ರೈತರು ಈ ಮರಿ ಚಿರತೆ ಓಡಾಟವನ್ನು ಪ್ರತ್ಯಕ್ಷವಾಗಿ ನೋಡಿಯೇ 3-4 ವಾರ ಕಳೆದಿದೆ. ಈ ಅವಧಿಯಲ್ಲಿ ಒಂದೇ ಒಂದು ಬೇಟೆಯಾಡದ ಮರಿ ಚಿರತೆ ಆಹಾರ ಇಲ್ಲದೇ ಬದುಕಿದ್ದಾದ್ರೂ ಹೇಗೆ? ಎಂಬುದೇ ಅಚ್ಚರಿ ಮೂಡಿಸಿದೆ.
ಒಂದು ವರ್ಷ ಪ್ರಾಯದ ಈ ಮರಿ ಚಿರತೆ ದೊಡ್ಡ ಪ್ರಾಣಿಗಳ ಬೇಟೆ ಆಡುವುದನ್ನು ಕಲಿತಿಲ್ಲ. ಹೀಗಾಗಿ ಜನರು ಅಥವಾ ರೈತರ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡುವ ಪ್ರಯತ್ನ ನಡೆಸಿಲ್ಲ. ಬೇಟೆ ಆಡಿ ಗೊತ್ತಿರದ ಕಾರಣಕ್ಕೆ ಶಿರಬೂರು ಗ್ರಾಮದಿಂದ ಜೈನಾಪುರ ವರೆಗೆ ಸುಮಾರು 25 ಕಿ.ಮೀ. ಪರಿಸರದಲ್ಲಿ ಓಡಾಡಿಕೊಂಡಿರುವ ಈ ಚಿರತೆ ಜೈನಾಪುರ ಬಳಿ ಅರಣ್ಯ ಇಲಾಖೆ ಇರಿಸಿರುವ ಬೋನಿನ ಹತ್ತಿರ ಬಂದರೂ ಒಳಗೆ ಪ್ರವೇಶಿಸಿಲ್ಲ. ಈ ಭಾಗದಲ್ಲಿ ಸಮೃದ್ಧವಾಗಿ ಬೆಳೆದಿರುವ ಕಬ್ಬಿ ಗದ್ದೆಗಳಲ್ಲಿ ಸುಲಭವಾಗಿ ಸಿಗುವ ಮೊಲ, ನವಿಲುಗಳಂಥ ಪ್ರಾಣಿ-ಪಕ್ಷಿಗಳನ್ನು ಬೇಟೆ ಆಡಿ ತಿಂದಿರುವ ಸಾಧ್ಯತೆ ಇದೆ. ಹೀಗಾಗಿ ಮೇಕೆ ಕಟ್ಟಿ ಹಾಕಿದ ಬೋನಿನ ಬಳಿ ಸುಳಿದರೂ ಒಳಗೆ ಪ್ರವೇಶಿಸಿಲ್ಲ ಎಂದು ಅಂದಾಜಿಸಲಾಗಿದೆ.
ಮತ್ತೊದೆಡೆ ಚಿರತೆ ಅತ್ಯಂತ ಚಾಣಾಕ್ಷ ಹಾಗೂ ಶಂಕೆಯ ಗುಣ ಹೊಂದಿದೆ. ಹೀಗಾಗಿ ಮೇಕೆ ಕಟ್ಟಿ ಹಾಕಿ ಇರಿಸಿದ ಬೋನಿನ ಬಳಿ ಸುಳಿದರೂ ಒಳಗೆ ಹೋಗದಿರಲು ಇದೇ ಕಾರಣ ಇರಬಹುದು. ಈ ಮಧ್ಯೆ ಚಿರತೆ ಇರುವುದು ಖಚಿತವಾಗುತ್ತಲೇ ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಶಿರಬೂರು ಹಾಗೂ ಜೈನಾಪುರ ಬಳಿ ಹೆಜ್ಜೆ ಗುರುತು ಆಧರಿಸಿ ಎರಡೂ ಕಡೆ ತಲಾ ಒಂದೊಂದು ಬೋನು ಇರಿಸಿದೆ. ಅಲ್ಲದೇ ಈ ಪರಿಸರದಲ್ಲಿ ನಾಲ್ವರು ಸಿಬ್ಬಂದಿ ನಿರಂತರ ಗಸ್ತು ತಿರುಗುತ್ತಿದ್ದಾರೆ. ಇದಲ್ಲದೇ ಗದಗ ಹಾಗೂ ಸಿಂದಗಿ ಅರಣ್ಯ ಪ್ರದೇಶದಿಂದ ಇನ್ನೂ ಒಂದೊಂದು ಬೋನು ತರಿಸಲು ಯೋಜಿಸಿದೆ. ಇದಲ್ಲದೇ ಚಿರತೆ ಚಲನವಲನದ ನಿಖರತೆ ಅರಿಯಲು ಗುರುವಾರದಿಂದ 4 ಕಡೆಗಳಲ್ಲಿ ಟ್ರ್ಯಾಕಿಂಗ್ ಕ್ಯಾಮೆರಾ ಅಳವಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಬಬಲೇಶ್ವರ ಭಾಗದಲ್ಲಿ ಚಿರತೆ ಇರುವುದು ಖಚಿತವಾಗಿದ್ದು, ಅರಣ್ಯ ಇಲಾಖೆ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಅಗತ್ಯ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಬೇರೆ ಕಡೆಗಳಿಂದ ಇನ್ನೂ ಎರಡು ಬೋನು ತರಿಸಲಾಗುತ್ತಿದೆ.
ಪ್ರಭುಲಿಂಗ ಬುಯ್ನಾರ,
ಆರ್‌ಎಫ್‌ಒ, ವಿಜಯಪುರ