ವಿಜಯಪುರ: ಜಿಲ್ಲೆಯ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರ ಆರೋಗ್ಯದ ಮೇಲೆ ನಿಗಾ ಇಡಲು ಜಿಲ್ಲೆಯಲ್ಲಿ ವಿಶೇಷ ಆ್ಯಪ್ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲೇ ಇಂಥ ವಿಶೇಷ ಆ್ಯಪ್ ಬಿಡುಗಡೆ ಮಾಡುತ್ತಿರುವ ಮೊದಲ ಜಿಲ್ಲೆ ಎಂಬ ಹಿರಿಮೆ ವಿಜಯಪುರ ಜಿಲ್ಲಾಡಳಿತಕ್ಕೆ ಸಲ್ಲುತ್ತಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತ ಎ.ಎ. ಬಿಸ್ವಾಸ್ ಅವರ ಸಲಹೆ ಮೇರೆಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ನೇತೃತ್ವದಲ್ಲಿ ಎಸ್ಪಿ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದರಡ್ಡಿ ಇವರ ಮುತುವರ್ಜಿಯಲ್ಲಿ ಈ ಆ್ಯಪ್ ರೂಪಿಸಲಾಗಿದೆ.
ಜಿಲ್ಲೆಯ ಪ್ರವಾಸೋದ್ಯಮಕ್ಕೆ ಆಧುನಿಕ ತಂತ್ರಜ್ಞಾನದ ವರ್ಚ್ಯೂವಲ್ ವಿಡಿಯೋ, ಆಡಿಯೋ ಗೈಡ್‌ನಂಥ ತಾಂತ್ರಿಕತೆಯನ್ನು ರೂಪಿಸಿರುವ ಟೆಕ್ಕಿ ಕಿರಣ ಕುಲಕರ್ಣಿ ಅವರ ತಂಡವೇ ಕೋವಿಡ್-19 ರೋಗಿಗಳ ಮೇಲೆ ನಿಗಾ ಇಡುವ ವಿಶೇಷ ಆ್ಯಪ್ ರೂಪಿಸಿರುವುದು ವಿಶೇಷ. ಜಿಲ್ಲಾ ಧಿಕಾರಿಗಳ ಸೂಚನೆ ಬರುತ್ತಲೇ ಯಚರಪ್ಪ ಕಮ್ಮಾರ ಹಾಗೂ ವಾದಿರಾಜ್ ಜೋಶಿ ಎಂಬ ಇಬ್ಬರ ಸಹಾಯಕರೊಂದಿಗೆ ಕೇವಲ 24 ಗಂಟೆಯಲ್ಲಿ ಈ ಆ್ಯಪ್ ರೂಪಿಸಿರುವುದು ವಿಶೇಷ.
ಸದರಿ ಆ್ಯಪ್ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ ಪ್ರತಿ ರೋಗಿಯ ಪ್ರತಿ ಕ್ಷಣದ ವರ್ತನೆ ಹಾಗೂ ಆರೋಗ್ಯದಲ್ಲಿನ ಬದಲಾವಣೆ ಕುರಿತು ನಿಗಾ ವಹಿಸಲು ನೆರವಾಗಲಿದೆ. ರೋಗಿಗಳಲ್ಲಿ ಕಾಣಿಸುವ ಆರೋಗ್ಯದ ಬದಲಾವಣೆ ಕುರಿತು ಜಿಲ್ಲೆಯಲ್ಲಿ ರಚಿಸಿರುವ ವಿವಿಧ ವಿಷಯ ತಜ್ಞತೆ ಹೊಂದಿರುವ 10 ವೈದ್ಯರು ಈ ಆ್ಯಪ್ ಕಾಣಿಸುವ ರೋಗಿಯ ಬೆಳವಣಿಗೆಗಳನ್ನು ಅವಲೋಕಿಸಲಿದ್ದಾರೆ.
ಅಲ್ಲದೇ ರಾಜ್ಯಮಟ್ಟದ ತಜ್ಞ ವೈದ್ಯರೊಂದಿಗೆ ಚರ್ಚೆ ನಡೆಸಲು ಈ ಆ್ಯಪ್ ನೆರವಾಗಲಿದೆ ಎಂದು ಆ್ಯಪ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಸದರಿ ಆ್ಯಪ್‌ಗೆ ಇನ್ನೂ ಯಾವುದೇ ಹೆಸರು ನಾಮಕರಣ ಮಾಡಿಲ್ಲ ಎಂದರು.