ವಿಜಯಪುರ: ಸಿಎಎ ಹಿಂಪಡೆಯುವುದು, ಎನ್‌ಪಿಆರ್, ಎನ್‌ಆರ್‌ಸಿ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಜೈಲ್ ಭರೋ ಚಳವಳಿ ಬೆಂಬಲಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಜನವಾದಿ ಮಹಿಳಾ ಸಂಘದ ಧುರೀಣೆ ಸುರೇಖಾ ರಜಪೂತ ಮಾತನಾಡಿ, ಸಂವಿಧಾನ ವಿರೋಧಿ ಯಾಗಿರುವ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಈ ರೀತಿ ಕಾಯ್ದೆಗಳಿಂದ ಯಾವ ಉಪಯೋಗವೂ ಇಲ್ಲ, ಮಹಿಳೆಯರಿಗೆ ಬಾಧಿಸುವ ನಿರುದ್ಯೋಗವನ್ನು ನಿವಾರಣೆ ಮಾಡಲು ಉದ್ಯೋಗವನ್ನು ಸೃಷ್ಟಿಸಿ ಕೊಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಬೇಕು. ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಹಾಗೂ ಅದೇ ತೆರನಾಗಿ ಶಾಸನಸಭೆಗಳಲ್ಲಿ ಶೇ. 33ಮಹಿಳಾ ಮೀಸಲಾತಿಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳೆಯರ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಅನುದಾನ ಮೀಸಲಿರಿಸಿಲ್ಲ ಎಂದು ಪ್ರತಿಭಟನಾಕಾರರು ಖಂಡಿಸಿದರು. ಅಸಂಘಟಿತ ಮಹಿಳಾ ಕಾರ್ಮಿಕರಿಗೆ ಕನಿಷ್ಠ 21,000 ಸಾವಿರ ವೇತನ ನೀಡಬೇಕು. ಭವಿಷ್ಯ ನಿಧಿ , ಪಿಂಚಣಿ ನಿವೃತ್ತಿ ವೇತನವನ್ನು ಕಾಯಂ ಗೊಳಿಸಬೇಕು. ಅಂಗನವಾಡಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯನ್ನು ಖಾಸಗೀಕರಣ ಮಾಡಬಾರದು ಎಂದು ಬೇಡಿಕೆಗಳನ್ನು ಮುಂದಿರಿಸಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ, ಅಂಗನವಾಡಿ ಜಿಲ್ಲಾ ಕಾರ್ಯದರ್ಶಿ ಭಾರತಿ ವಾಲಿ, ಸರಸ್ವತಿ ಮಠ, ಚಡಚಣ ತಾಲೂಕಿನಿಂದ ಅಶ್ವಿನಿ ತಳವಾರ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ, ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಸುವರ್ಣ ಹಲಗಣಿ, ಜಯಶ್ರೀ ಪೂಜಾರಿ, ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಶೈಲಾ ಕಟ್ಟಿ, ಹನೀಫಾ ಮೊಕಾಶಿ, ಲಲಿತಾ ಪೋಳ, ರಾಜೇಶ್ವರಿ ಸಂಕದ, ಗೀತಾ ಜಾಧವ, ಇಂಡಿ ತಾಲೂಕಿನಿಂದ ಮಹಾದೇವಿ ರಾಠೊಡ, ಸಿಂದಗಿ ತಾಲೂಕಿನಿಂದ ಪ್ರತಿಭಾ ಕುರಡಿ, ಸರೋಜಿನಿ ಪಾಟೀಲ, ಉಷಾ ಕುಲಕರ್ಣಿ, ಬಿಸಿಯೂಟದ ಸುರೇಖಾ ವಾಗ್ಮೋಡೆ, ಸುರೇಖಾ ವಾಗ್ಮೋಡೆ, ಲಕ್ಷ್ಮೀ ಗಣಜಲಿ, ಸವಿತಾ ಕೊಕಟನೂರ, ಬೋರಮ್ಮ ಸಿಂದಗಿ ಇದ್ದರು.