Advertisement

ಪರೀಕ್ಷಾ ಫಲಿತಾಂಶ ಸುಧಾರಣೆಯಾಗಲಿ

10:38 AM Jun 19, 2019 | Team Udayavani |

ವಿಜಯಪುರ: ಮಕ್ಕಳ ಭವಿಷ್ಯ ರೂಪಿಸುವಂತಹ ಗುರುತರ ಹೊಣೆಗಾರಿಕೆ ಹೊಂದಿರುವ ಉಪನ್ಯಾಸಕರು ತಮ್ಮ ವೃತ್ತಿಯನ್ನು ಪ್ರೀತಿಸುವ ಜೊತೆಗೆ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಸೂಕ್ತ ಫಲಿತಾಂಶ ತರಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದರು.

Advertisement

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ಹಾಗೂ ಫಲಿತಾಂಶ ಸುಧಾರಣೆಗಾಗಿ 2019-20ನೇ ಸಾಲಿನ ಕ್ರಿಯಾಯೋಜನೆ ಸಿದ್ಧತೆ ಮತ್ತು ಅನುಷ್ಠಾನ ಕುರಿತಂತೆ ಉಪನ್ಯಾಸಕರಿಗೆ ನಗರದ ಸಿಕ್ಯಾಬ್‌ ಪಪೂ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕರು ತಮ್ಮ ವೃತ್ತಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಬೇಕು. ಅದರಂತೆ ತಮ್ಮ ಮಕ್ಕಳ ರೀತಿಯಲ್ಲಿ ಇತರೆ ಮಕ್ಕಳನ್ನು ಸಹ ಪ್ರೀತಿಯಿಂದ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಮಾರ್ಗದರ್ಶನ ನೀಡಿದಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿ ಸೂಕ್ತ ಫಲಿತಾಂಶ ಪಡೆಯಲು ಸಾಧ್ಯ. ತಮ್ಮ ಬೋಧನಾ ಕೌಶಲ್ಯಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಅವರ ಭವಿಷ್ಯಕ್ಕೆ ನೆರವಾಗುವಂತೆ ಸಲಹೆ ನೀಡಿದರು.

ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುವುದರಿಂದ ತಾಂತ್ರಿಕವಾಗಿ ಫಲಿತಾಂಶವನ್ನು ಸಹ ಗುರಿಗೆ ತಕ್ಕಂತೆ ಪಡೆಯಬಹುದಾಗಿದೆ. ವಿಷಯವಾರು ನುರಿತ ಶಿಕ್ಷಕರೆಲ್ಲರೂ ತಮ್ಮ ನೈಪುಣ್ಯತೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ಭವಿಷ್ಯದಲ್ಲಿ ಅವರು ಸಜ್ಜುಗೊಳ್ಳುವಂತೆ ರೂಪಿಸಬೇಕು. ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಅಥವಾ ವೈರತ್ವ ಮನೋಭಾವ ತೊರೆದು ಪ್ರೀತಿ ವಿಶ್ವಾಸದಿಂದ ಬೋಧಿಸುವ ಮೂಲಕ ಅವರ ಭವಿಷ್ಯಕ್ಕೆ ನೆರವಾಗುವಂತೆ ಕರೆ ನೀಡಿದರು.

ಉಪನ್ಯಾಸಕ ವೃತ್ತಿಯೂ ಅತ್ಯಂತ ಜವಾಬ್ದಾರಿಯುತ ವೃತ್ತಿ. ವಿವಿಧ ಕಾರ್ಯಾಗಾರಗಳು ಹಾಗೂ ತರಬೇತಿಗಳನ್ನು ಆಯೋಜಿಸಿದ ಸಂದರ್ಭದಲ್ಲಿ ಹಗುರವಾಗಿ ಪರಿಗಣಿಸದೇ ಗಂಭೀರವಾಗಿ ಇಂತಹ ಕಾರ್ಯಾಗಾರ ಸದುಪಯೋಗ ಮಾಡಿಕೊಳ್ಳುವ ಮೂಲಕ ವೃತ್ತಿ ಕೌಶಲ್ಯತೆ ಹೆಚ್ಚಿಸಿಕೊಳ್ಳಬೇಕು. ಮಕ್ಕಳಿಗೆ ಪ್ರೋತ್ಸಾಹಿಸಬೇಕೆಂದ ಅವರು, ಇದರಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸ ವರ್ಗದ ಮಧ್ಯೆ ಪ್ರೀತಿ ವಿಶ್ವಾಸ ವೃದ್ಧಿಗೊಳ್ಳುವ ಜೊತೆಗೆ ಫಲಿತಾಂಶಕ್ಕೂ ನೆರವಾಗಲಿದೆ ಎಂದು ಹೇಳಿದರು.

Advertisement

ಉಪನ್ಯಾಸಕರು ತಾವು ಬೋಧಿಸುವ ಶಿಕ್ಷಣವನ್ನು ವಿದ್ಯಾರ್ಥಿಗಳು ಸಂತಸದಿಂದ ಆಲಿಸಿದ್ದಲ್ಲಿ ಉಪನ್ಯಾಸಕರ ಬೋಧನಾ ಕಾರ್ಯ ಸಾರ್ಥಕತೆ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಯಾವುದೇ ರೀತಿಯ ಸಮಸ್ಯೆ ಇಲ್ಲದಿದ್ದರೂ ಮಕ್ಕಳ ಭವಿಷ್ಯ ರೂಪಿಸುವ ಮತ್ತು ಮಕ್ಕಳನ್ನು ಸಾಧನೆ ಮಾಡುವಂತಹ ಪ್ರೇರಣಾ ಬೋಧನೆಗಳು ಅತ್ಯಂತ ಪರಿಣಾಮಕಾರಿಯಾಗಲಿವೆ. ಉಪನ್ಯಾಸಕರೆಲ್ಲರೂ ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗುವಂತೆ ತಮ್ಮ ಉಪನ್ಯಾಸ ಅವಧಿಯಲ್ಲಿ ಅನುಭವದ ಉದಾಹರಣೆಗಳನ್ನು ಹಂಚಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕಿವಿಮಾತು ಹೇಳಿದರು.

ಕಾರ್ಯಾಗಾರದಲ್ಲಿ ಸಿಕ್ಯಾಬ್‌ ಸಂಸ್ಥೆ ನಿರ್ದೇಶಕ ಸಲಾವುದ್ದೀನ್‌ ಪುಣೇಕರ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜೆ.ಎಸ್‌.ಪೂಜೇರಿ ಕಾರ್ಯಾಗಾರದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಅಪರ್‌ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಸಿಕ್ಯಾಬ್‌ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೆ.ಎಸ್‌. ಪಾಟೀಲ, ಕಗ್ಗೋಡ ಸರ್ಕಾರಿ ಕಾಲೇಜ್‌ ಪ್ರಾಚಾರ್ಯ ಎಸ್‌.ವೈ. ಅಮಾತೆ, ಸಿಕ್ಯಾಬ್‌ ಮಹಿಳಾ ಪಪೂ ಕಾಲೇಜ್‌ ಪ್ರಾಂಶುಪಾಲ ಎಸ್‌.ಎನ್‌. ಶೇಖ್‌, ಮುಳವಾಡ ಸರ್ಕಾರಿ ಪಪೂ ಕಾಲೇಜ್‌ ಪ್ರಾಂಶುಪಾಲ ಆರ್‌.ಎ. ಜಹಾಗೀರದಾರ, ಸಿಕ್ಯಾಬ್‌ ಗಂಡು ಮಕ್ಕಳ ಕಾಲೇಜ್‌ ಪ್ರಾಂಶುಪಾಲ ಎನ್‌.ಎಸ್‌. ಭೂಸನೂರ, ದರಬಾರ್‌ ಕಾಲೇಜ್‌ ಉಪನ್ಯಾಸಕಿ ಗೌರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next