Advertisement

ಗಮನ ಸೆಳೆದ ಮರಿ ವಿಜ್ಞಾನಿಗಳ ಆವಿಷ್ಕಾರ

12:08 PM Dec 29, 2019 | Naveen |

ವಿಜಯಪುರ: ಮಲೀನಗೊಂಡ ಕೆರೆಗಳನ್ನು ಸೋಲಾರ್‌ ವ್ಯವಸ್ಥೆ ಮೂಲಕ ಸ್ವತ್ಛ ಗೊಳಿಸುವ, ಕಾಲಿನಿಂದ್‌ ಪೆಡಲ್‌ ತುಳಿಯುವ ಮೂಲಕ ಬಿರು ಬೇಸಿಗೆಯಲ್ಲೂ ಮನೆಯಲ್ಲಿ ತಂಪು ಪರಿಸರ ನಿರ್ಮಿಸುವ, ಅಂಧರಿಗೆ ವಿಶೇಷ ಸೆನ್ಸಾರ್‌ ಅಳವಡಿಕೆ ವಾಕಿಂಗ್‌ ಸ್ಟೀಕ್‌, ರಸ್ತೆಗಳಲ್ಲಿರುವ ರೋಡ್‌ ಬ್ರೇಕರ್‌ಗಳಿಂದ ವಿದ್ಯುತ್‌ ಉತ್ಪಾದಿಸುವಂತ ಹಲವು ಹೊಸ ಬಗೆಯ ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರದರ್ಶಿಸುವ ಮೂಲಕ ಮರಿ ವಿಜ್ಞಾನಿಗಳು ಜನಮನ ಗೆದ್ದರು.

Advertisement

ಶನಿವಾರ ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಎಂಜನಿಯರಿಂಗ್‌ ಕಾಲೇಜಿನಲ್ಲಿ ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಆವಿಷ್ಕಾರ-2019 ವಿಜ್ಞಾನ ಪ್ರದರ್ಶನದಲ್ಲಿ ಕಂಡು ಬಂದ ಬಗೆ ಬಗೆಯ ಪ್ರಾತ್ಯಕ್ಷಿಕೆಗಳ ಪರಿ ಇದು.

ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೆಳಗಾವಿ ಜಿಲ್ಲೆಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮರಿ ವಿಜ್ಞಾನಿಗಳ ತಂಡ ತಾವು ಶೈಕ್ಷಣಿಕ ಹಂತದಲ್ಲಿ ಕಂಡುಕೊಂಡ ವೈಜ್ಞಾನಿಕ ಸಂಗತಿಗಳನ್ನು ತಮ್ಮದೇ ಸ್ವಂತ ಜ್ಞಾನದ ಮೂಲಕ ಆವಿಷ್ಕರಿಸಿದ ಹಲವು ಪ್ರಯೋಗಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

100ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿಜ್ಞಾನ ಪ್ರಾತ್ಯಕ್ಷಿಕೆಗಳು ಸಹಜ ಮಾತ್ರವಲ್ಲ ಪ್ರಸ್ತುತ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗೆಯನ್ನು ತೆರೆದಿಟ್ಟವು. ಪ್ರತಿ ಪ್ರಾತ್ಯಕ್ಷಿಕೆ ಮಹತ್ವ, ಬಳಕೆಯ ವಿಧಾನ, ಉದ್ದೇಶ, ರೂಪಿಸಿದ ರೀತಿ ಬಗ್ಗೆ ಮಾಹಿತಿ ಫಲಕಗಳು, ಭಿತ್ತಿಚಿತ್ರಗಳನ್ನು ಅಳವಡಿಸಿ ವೀಕ್ಷಕರಿಗೆ ವಿವರ ನೀಡಲಾಯಿತು.

ಈಚಿನ ದಿನಗಳಲ್ಲಿ ಜಲ ಮಾಲಿನ್ಯ ಹೆಚ್ಚುತ್ತಿದ್ದು, ತೆರೆದ ವ್ಯವಸ್ಥೆಯಲ್ಲಿನ ಜಲ ಮಾಲಿನ್ಯ ತಡೆಯ ಕುರಿತು ಸೋಲಾರ್‌ ಶಕ್ತಿಯ ಸಾಧನ ಬಳಸಿ ಕೆರೆಗಳಲ್ಲಿನ ತ್ಯಾಜ್ಯ ಸಂಗ್ರಹವನ್ನು ಸಂಗ್ರಹಿಸಿ ಹೊರ ಹಾಕುವ ವಿಧಾನ ರೂಪಿಸಿದ್ದ ಬಿ.ಬಿ. ಹಜಿರಾ ತಂಡದ ಮಾದರಿ ಆಕರ್ಷಿಸಿತ್ತು.

Advertisement

ಇನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಶಿವಾಚಾರ್ಯ ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರೂಪಿಸಿರುವ ಅಂಧರು ಸುಲಭವಾಗಿ ನಡೆದಾಡಲು ಅನುಕೂಲವಾಗುವಂತೆ ರಸ್ತೆಗಳಲ್ಲಿ ದಿನ್ನೆಗಳನ್ನು, ತಗ್ಗು, ಆಪಾಯಗಳ ಕುರಿತು ಧ್ವನಿ ಸಹಿತ ಅಪಾಯದ ಸಂದೇಶ ನೀಡುವ ಸೆನ್ಸಾರ್‌ ವಾಕಿಂಗ್‌ ಸ್ಟಿಕ್‌ ಗಮನ ಸೆಳೆಯುತ್ತಿದೆ.

ಇನ್ನು ಜಮಖಂಡಿ ತಾಲೂಕಿನ ಸಾವಳಗಿ ಎಸ್‌ ಡಿಎಸ್‌ಜಿ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿರುವ ಬೆಳೆಗಳು ಚಿಗುರುಗಳನ್ನು ಕತ್ತರಿಸುವ ಸೋಲಾರ ಆಧಾರಿತ ವಿನೂತನ ಯಂತ್ರ ಅನ್ನದಾತರಿಗೆ ವರವಾಗುವಂತಿದೆ. ಜಮಖಂಡಿಯ ರಾಯಲ್‌ ಪಪೂ ಕಾಲೇಜಿನ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಗಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಬಳಕೆ ಕುರಿತು ರೂಪಿಸಿರುವ ಸಂದೇಶ ನೀಡುವ ಹೆಲ್ಮೇಟ್‌ ಮಾದರಿ ಗಮನ ಸೆಳೆಯುತ್ತಿದೆ. ಈ ಮಾದರಿ ಹೆಲ್ಮೆಟ್‌ ಧರಿಸಿದರೆ ಮಾತ್ರ ಬೈಕ್‌ಗೆ ಸಂದೇಶ ರವಾನೆಯಾಗಿ, ನಂತರವೇ ಬೈಕ್‌ ಆರಂಭಗೊಳ್ಳುತ್ತದೆ. ಹೆಲ್ಮೆಟ್‌ ಧರಿಸಿರದಿದ್ದರೆ ಬೈಕ್‌ ಆರಂಭಗೊಳ್ಳದಂತೆ ರೂಪಿಸಿರುವ ಮಾದರಿ ಜನಾಕರ್ಷಣೆಗೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆ ಅಥಣಿಯ ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಸಿ ವಿದ್ಯಾರ್ಥಿಗಳು ಹೊಸ ಮಾದರಿ ಮನೆಗಳಲ್ಲಿ ವಿದ್ಯುತ್‌ ಹಾಗೂ ಆಧುನಿಕ ದುಬಾರಿ ವೆಚ್ಚ ಹವಾನಿಯಂತ್ರಣ ವ್ಯವಸ್ಥೆ ಇಲ್ಲದೆಯೂ ತಂಪು ವಾತಾವರಣ ಸೃಷ್ಟಿಸುವ ವಿಧಾನ ಆಕರ್ಷಣೆ ಎನಿಸಿತ್ತು. ಮನೆಯ ಮುಂಭಾಗದಲ್ಲಿ ಗುಂಡಿ ತೋಡಿ, ಅಲ್ಯೂಮಿನಿಯಂ ಕೇಬಲ್‌ ಅಳವಡಿಸಿ, ಅದಕ್ಕೆ ಜೋಡಿಸಿದ ಪೈಪ್‌ ಮೂಲಕ ತಂಪಾದ ಗಾಳಿ ಮನೆ ಪ್ರವೇಶಿಸುವ ವಿಧಾನ ಹೊಸತನವನ್ನು ನೀಡಿದೆ. ಮನೆಯಲ್ಲಿರುವ ಬಿಸಿ ವಾತಾವರಣವನ್ನು ಕೂಡ ಹೊರ ಹಾಕಲು ಎಕ್ಸಾಸ್ಟ್‌ ಫ್ಯಾನ್‌ ಅಳವಡಿಸಿರುವ ಮಾದರಿ ವಿದ್ಯಾರ್ಥಿಗಳಲ್ಲಿ ಭವಿಷ್ಯದ ವಿಜ್ಞಾನಿಗಳನ್ನು ಕಾಣುವಂತೆ ಮಾಡಿತ್ತು.

ಇಂಥ ಮಾದರಿಗಳ ಹೊರತಾಗಿಯೂ ರೈತರಿಗೆ ಕಾಲ ಕಾಲಕ್ಕೆ ಕೃಷಿಯಲ್ಲಿ ಮಣ್ಣಿನ ತೇವಾಂಶದ ಮಾಹಿತಿ ನೀಡಲು ರೂಪಿಸಿರುವ ವಿಶೇಷ ವ್ಯವಸ್ಥೆ, ಅತ್ಯಾಧುನಿಕ ಸ್ಮಾರ್ಟ್‌ ಸಿಟಿ, ಚರಂಡಿ ನೀರಿನ ಶುದ್ಧೀಕರಿ ಮರು ಬಳಕೆ ಸಾಧನ, ಮಳೆ ಕೊಯ್ಲು ವಿಧಾನ ಸೇರಿದಂತೆ ಮರಿ ವಿಜ್ಞಾನಿಗಳು ರೂಪರಿಸಿರುವ ಆಧುನಿಕ ವಿಜ್ಞಾನ ವಿಧಾನದ ನೂತನ ಮಾದರಿಗಳು.

Advertisement

Udayavani is now on Telegram. Click here to join our channel and stay updated with the latest news.

Next