Advertisement

ಕೃತಕ ಜಲ ಸಂಕಷ್ಟ ಭೀತಿ

11:21 AM May 13, 2019 | Team Udayavani |

ವಿಜಯಪುರ: ಐತಿಹಾಸಿಕ ರಾಜಧಾನಿ ವಿಜಯಪುರ ನಗರಕ್ಕೆ ಬೇಸಿಗೆ ಹಂಗಾಮಿನ ಬಿರು ಬಿಸಿಲಿನ ಈ ಹಂತದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಇತರೆ ಕಡೆಗಳಲ್ಲಿ ಜಲ ಮೂಲಗಳಿಲ್ಲದೇ ಸಂಕಷ್ಟ ಎದುರಾಗಿದ್ದರೆ, ವಿಜಯಪುರ ನಗರದ ಮಟ್ಟಿಗೆ ನೀರಿದ್ದರೂ ಗುತ್ತಿಗೆದಾರರ ಕಾಮಗಾರಿ ವಿಳಂಬ, ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ಲೋಪದಿಂದಾಗಿ ಕೃತಕ ಜಲ ಸಂಕಷ್ಟದಿಂದಾಗಿ ಗುಮ್ಮಟ ನಗರಿ ಜನರು ತತ್ತರಿಸುವಂತಾಗಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ ಗಡಿಯಲ್ಲಿ ಬಂದಿರುವ ಕಾರಣ ಜನರು ಬಿಸಿಲ ಬೇಗೆಗೆ ತತ್ತರಿಸುವಂತೆ ಮಾಡಿದೆ. ವಿಜಯಪುರ ನಗರಕ್ಕೆ ಆಲಮಟ್ಟಿಯ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಿನ್ನೀರಿನಿಂದ ಜಲಮೂಲ ಕಂಡುಕೊಳ್ಳಲಾಗಿದೆ. ನಗರದ ಜನಸಂಖ್ಯೆಗೆ ಬೇಕಾಗುವ ನೀರಿಗಾಗಿ ಜಲಾಶಯದಲ್ಲಿ 510 ಅಡಿ ನೀರು ಇರುವಂತೆ ನಿರ್ವಹಣೆ ಮಾಡಲಾಗಿದೆ. ಈ ಜಲಾಶಯದ ಜಲ ಮೂಲದಿಂದ ನಗರದಲ್ಲಿ ಸದ್ಯ ಇರುವ ಸುಮಾರು 4 ಲಕ್ಷ ಜನಸಂಖ್ಯೆಗೆ ನಿತ್ಯವೂ ಸುಮಾರು 75 ಗ್ಯಾಲನ್‌ ನೀರು ಪಡೆಯಲಾಗುತ್ತದೆ.

ವಿಜಯಪುರ ನಗರಕ್ಕೆ ನೀರು ಪೂರೈಸುವ ಜಲ ಸಂಗ್ರಹಗಳಾದ ಭೂತನಾಳ ಕೆರೆಯಲ್ಲಿ 8 ಎಂಎಲ್ಡಿ, ಕೃಷ್ಣಾ ನದಿಯ ಕೊಲಾØರ ಜಾಕ್‌ವೆಲ್ನಲ್ಲಿ 65 ಎಂಎಲ್ಡಿ, ಮಲಘಾಣ ಜಾಕ್‌ವೆಲ್ನಿಂದ 5 ಎಂಎಲ್ಡಿ ನೀರು ಸಂಗ್ರಹವಿದೆ.

ಆದರೆ ನಗರದ ಜನರಿಗೆ ನೀರಿನ ಸಮಸ್ಯೆ ನೀಗುವುದಕ್ಕಾಗಿ ನಗರದಲ್ಲಿ ಕಳೆದ ಆರೇಳು ವರ್ಷಗಳಿಂದ 24×7 ನೀರು ಪೂರೈಕೆ ಯೋಜನೆ ರೂಪಿಸಿದ್ದು, ಈ ವರೆಗೆ ಪೂರ್ಣಗೊಂಡಿಲ್ಲ. ಇದರಿಂದ ನಗರದ ಜನತೆ ವ್ಯವಸ್ಥೆಯ ಲೋಪದಿಂದಾಗಿ ನೀರಿನ ಕೃತಕ ಅಭಾವ ಎದುರಿಸುವಂತಾಗಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಜೈನ್‌ ಸಂಸ್ಥೆ ಪ್ರಸಕ್ತ ವರ್ಷದ ನವೆಂಬರ್‌ ಅಂತ್ಯಕ್ಕೆ ಯೋಜನೆ ಪೂರ್ಣಗೊಳಿಸಬೇಕಿದ್ದರೂ, ವಿವಿಧ ಹಂತಗಳ ಕಾಮಗಾರಿಗಳಲ್ಲಿ ತೀರಾ ವಿಳಂಬ ನೀತಿ ಅನುಸರಿಸುತ್ತಿದೆ. ವಿಳಂಬ ಕಾಮಗಾರಿಗಾಗಿ 2 ಕೋಟಿ ರೂ. ದಂಡ ವಿಧಿಸಿದ್ದರೂ ಕಾಮಗಾರಿ ವೇಗ ಪಡೆದಿಲ್ಲ.

ಇತ್ತ ನಗರದಲ್ಲಿ ಈಗಾಗಲೇ ಪೂರ್ಣಗೊಂಡಿರುವ 6 ಹಾಗೂ ಹೊಸದಾಗಿ ಸಂಪರ್ಕ ಕಲ್ಪಿಸಲಾಗುತ್ತಿರುವ 8 ವಾರ್ಡ್‌ಗಳಲ್ಲಿ 24×7 ನೀರಿನ ಪೂರೈಕೆಗೆ ಮುಂದಾಗಿದ್ದರೂ ವಾಸ್ತವಿಕವಾಗಿ ವಾರದಲ್ಲಿ 3 ದಿನ ನಿರಂತರ ನೀರು ಹರಿಸಿ, 4 ದಿನ ಸಂಪೂರ್ಣ ಸ್ಥಗಿತ ಮಾಡಲಾಗುತ್ತಿದೆ. ಸಂಪರ್ಕ ಕಲ್ಪಿಸಿರುವ ಪೈಪ್‌ ಮಾರ್ಗದಲ್ಲಿ 0.7 ಕೆ.ಜಿ. ಒತ್ತಡದ ನೀರು ಹರಿಯಬೇಕು. ಆದರೆ ಈ ಪ್ರಮಾಣದ ನೀರು ಸರಬರಾಜು ಆಗುತ್ತಿಲ್ಲ. ಅಧಿಕಾರಿಗಳು ಸಮಸ್ಯೆಗೆ ಪ್ರಾಯೋಗಿಕ ಪರೀಕ್ಷೆಯ ನೆಪ ಹೇಳುತ್ತಿದ್ದಾರೆ. ಇನ್ನು 24×7 ಸಂಪರ್ಕ ಕಲ್ಪಿಸದ ಇತರೆ 21 ವಾರ್ಡ್‌ಗಳಿಗೆ ವಿವಿಧ ಜಲಮೂಲಗಳಿಂದ 8-10 ದಿನಗಳಿಗೆ ಒಮ್ಮೆ ನೀರು ಸರಬರಾಜಾಗುತ್ತಿದೆ.

Advertisement

2017ರಲ್ಲಿ ಅಲಮಟ್ಟಿಯ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಲ್ಲಿ ನೀರು ಸಂಗ್ರಹಣೆಯಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದಿತ್ತು. ಪರಿಣಾಮ ಆಗ ಜಲಚರಗಳ ಜೀವ ಸಂರಕ್ಷಣೆಗೆ ಜಲಾಶಯದಲ್ಲಿ ಸಂಗ್ರಹ ಇದ್ದ ಡೆಡ್‌ ಸ್ಟೋರೆಜ್‌ ನೀರನ್ನು ಪಂಪ್‌ ಮಾಡಿ ಕೊಲ್ಹಾರ ಜಾಕ್‌ವೆಲ್ಗೆ ಹರಿಸಲಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಂದು ಜಲ ಸಂಪನ್ಮೂಲ ಸಚಿವರಾಗಿದ್ದ ಡಾ| ಎಂ.ಬಿ. ಪಾಟೀಲ ಬೇಸಿಗೆ ಹಂಗಾಮಿನಲ್ಲೂ ನಗರಕ್ಕೆ ಅಗತ್ಯ ಇರುವಷ್ಟು ನೀರನ್ನು ಶಾಶ್ವತವಾಗಿ ಜಲಾಶಯದಲ್ಲಿ ಸಂಗ್ರಹಿಸಿ ಇರಿಸಲು ಕ್ರಮ ಕೈಗೊಂಡಿದ್ದರು.

ಈ ಬಾರಿ ನೀರಿನ ಸಂಗ್ರಹ ಸಮಸ್ಯೆ ಇಲ್ಲದಿದ್ದರೂ ನೀರು ನಿರ್ವಹಣೆ ಲೋಪದಿಂದ ನಗರದ ಜನರು ಅಧಿಕಾರಿಗಳು ಸೃಷ್ಟಿಸಿರುವ ಕೃತಕ ಜಲ ಸಂಕಷ್ಟ ಎದುರಿಸುವಂತಾಗಿದೆ. ಭೂತನಾಳ ಕೆರೆ ಅವಲಂಬಿತ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿ ಎದುರಾಗಿದೆ. ಆದರ್ಶ ನಗರ, ಕೆಎಚ್ಬಿ ಕಾಲೋನಿ, ಆಶ್ರಮ, ಗಚ್ಚಿನಕಟ್ಟಿ ಕಾಲೋನಿ, ಡಿಸಿಸಿ ಮುಖ್ಯ ಶಾಖೆ ಸುತ್ತಮುತ್ತಲಿನ ಬಡಾವಣೆಗಳು, ಆಲಕುಂಟೆ ನಗರ ಹೀಗೆ ಅನೇಕ ಭಾಗಗಳಲ್ಲಿ 10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು ಜನತೆಯನ್ನು ಹೈರಾಣಕ್ಕೆಡವಿದೆ.

ಇದರಿಂದ ರೊಚ್ಚಿಗೆದ್ದಿರುವ ನಗರದ ಹಲವು ಬಡಾವಣೆ ಜನರು ಈಗಾಗಲೇ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಹಲವು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ನಗರದ ಆಲಕುಂಟೆ ನಗರ, ಆದರ್ಶನಗರ ಸೇರಿ ಹಲು ಬಡಾವಣೆಗಳ ಜನರು ಬೀದಿಗಿಳಿದು ಖಾಲಿ ಕೊಡಗಳ ಮೂಲಕ ಹೋರಾಟ ನಡೆಸಿದ್ದಾರೆ.

ಆದರ್ಶನಗರ ಭಾಗದ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆಪಾಯದ ಕುರಿತು ಸಾರ್ವಜನಿಕರು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಗೆ ಎಚ್ಚರಿಕೆ ನೀಡಿದ್ದರು. ಪಾಲಿಕೆ ಕೆಲ ಸದಸ್ಯರು ಜಲ ಮಂಡಳಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳಿಗೆ ಪತ್ರ ಬರೆದು ಮುನ್ನೆಚ್ಚರಿಕೆ ಕೊಟ್ಟಿದ್ದರು. ಇಷ್ಟಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ನಗರದ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆಯಲಾರಂಭಿಸಿದೆ.

ಇನ್ನಾದರೂ ಜನರ ತಾಳ್ಮೆ ಪರೀಕ್ಷೆ ಮಾಡದೇ ಸಂಕಷ್ಟದ ಸಂದರ್ಭದಲ್ಲಿ ತ್ವರಿತ ಪರಿಹಾರಕ್ಕಾಗಿ ಜಿಲ್ಲೆಯ ಸಚಿವ-ಶಾಸಕರು ಸೇರಿ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕಿದೆ. ಇದರೊಂದಿಗೆ ಜನರು ಅನುಭವಿಸುತ್ತಿರುವ ಜಲ ಸಂಕಷ್ಟಕ್ಕೆ ಪರಿಹಾರ ಕಂಡುಕೊಡಬೇಕಿದೆ.

ನಗರದಲ್ಲಿ ಜನರು ಯಾವುದೇ ವಾರ್ಡ್‌ ಯಾವುದೇ ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ ಮಹಾನಗರ ಪಾಲಿಕೆ ಪೌರಾಯುಕ್ತ ಡಾ| ಔದ್ರಾಮ್‌ ಮೊ. 9449535101 ಅಥವಾ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಇ.ಇ. ಪ್ರಕಾಶ ಮಾಡಿಹಾಳ ಮೊ.9480813142 ಸಂಖ್ಯೆಗೆ ಸಂಪರ್ಕಿಸುವಂತೆ ಪಾಲಿಕೆ ಪ್ರಕಟಣೆ ಕೋರಿದೆ.

ನಗರದಲ್ಲಿ ಹೊಸದಾಗಿ 8 ವಾರ್ಡ್‌ಗಳಲ್ಲಿ ಕಲ್ಪಿಸಿರುವ 24×7 ಸಂಪರ್ಕ ವ್ಯವಸ್ಥೆಯಲ್ಲಿ ನಿರ್ವಹಣೆ ಲೋಪವಾಗುತ್ತಿದೆ. ಗುತ್ತಿಗೆದಾರರ ನಿಧಾನಗತಿ ಕಾಮಗಾರಿ ಹಾಗೂ ನಿರ್ವಹಣೆಯಲ್ಲಿನ ಲೋಪವೇ ಇದಕ್ಕೆ ಕಾರಣವಾಗಿದೆ. ನಗರದ ಜನರು ಅನುಭವಿಸುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೇ 13ರಂದು ಜಲಮಂಡಳಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗಿದೆ.
ಡಾ| ಔದ್ರಾಮ್‌,
ಪೌರಾಯುಕ್ತರು, ಮಹಾನಗರ ಪಾಲಿಕೆ, ವಿಜಯಪುರ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next