Advertisement

110 ಹಳ್ಳಿಗೆ ಟ್ಯಾಂಕರ್‌ ನೀರೇ ಗತಿ !

11:05 AM May 17, 2019 | Naveen |

ವಿಜಯಪುರ: ಮಳೆಗಾಲದಲ್ಲೇ ಕುಡಿಯುವ ನೀರಿಗೆ ತತ್ವಾರ ಎದುರಿಸುವ ಗಡಿಭಾಗದ ವಿಜಯಪುರ ಜಿಲ್ಲೆಯಲ್ಲಿ ಬೇಡಿಗೆ ಈ ಹಂತದಲ್ಲಿ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿದೆ. ಜಿಲ್ಲೆಯ ಇಕ್ಕೆಲಗಳಲ್ಲಿ ಕೃಷ್ಣೆ, ಭೀಮೆ ಹರಿಯುತ್ತಿದ್ದರೂ ಮಳೆ ಇಲ್ಲದೇ ಬತ್ತಿ ಬರಿದಾಗಿವೆ. ಕೆರೆಗಳು ಒಣಗಿ ನಿಂತಿದ್ದು, ಅಂತರ್ಜಲ ಬತ್ತಿ ಕೊಳವೆ ಬಾವಿಗಳು ಶೂನ್ಯಕ್ಕೆ ಬಂದು ತಲುಪಿವೆ. ಇದೆಲ್ಲರ ಮಧ್ಯೆ ಪ್ರಯಾಸಪಟ್ಟು ಜನರು ತಾವು ಸಂಗ್ರಹಿಸುವ ನೀರನ್ನು ಬ್ಯಾರಲ್ಗಳಿಗೆ ತುಂಬಿಸಿ ಬೀಗ ಹಾಕಿ ನೀರು ಕಾಯುತ್ತಿದ್ದಾರೆ. ಈ ಮಟ್ಟಕ್ಕೆ ಬಸವನಾಡಿನಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಬಿಗಡಾಯಿಸಿರುವುದಕ್ಕೆ ಜೀವಂತ ಸಾಕ್ಷಿ.

Advertisement

ಜಿಲ್ಲೆಯಲ್ಲಿ ಈ ವರ್ಷಾರಂಭದಲ್ಲೇ ಕುಡಿಯುವ ನೀರಿನ ತತ್ವಾರ ಎದುರಾಗಿದೆ. ಜಿಲ್ಲೆಯ ಇಂಡಿ, ಚಡಚಣ, ತಿಕೋಟಾ, ವಿಜಯಪುರ, ಸಿಂದಗಿ, ದೇವರ ಹಿಪ್ಪರಗಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಮಕ್ಕಳು, ಮಹಿಳೆಯರು ಜೀವಜಲಕ್ಕಾಗಿ ಬರಿ ಕೊಡಗಳನ್ನು ಹಿಡಿದು ಅಲೆಯುವ ದೃಶ್ಯ ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಕಳೆದ 3 ತಿಂಗಳಿಂದ ಬೆರಳೆಣಿಕೆ ಗ್ರಾಮಗಳಿಗೆ ಮಾತ್ರ ಸೀಮಿತವಾಗಿದ್ದ ಟ್ಯಾಂಕರ್‌ ನೀರು ಪೂರ್ಯೆಕೆ ವ್ಯವಸ್ಥೆ ಇದೀಗ 110 ಗಡಿ ದಾಟಿದೆ. ಕೆಲವೇ ದಿನಗಳಲ್ಲಿ ಟ್ಯಾಂಕರ್‌ ನೀರು ಪೂರೈಕೆಯ ಹಳ್ಳಿಗಳ ಸಂಖ್ಯೆ ದ್ವಿಗುಣಗೊಳ್ಳುವ ಭೀತಿ ಎದುರಾಗಿದೆ.

ಮಾರ್ಚ್‌ ತಿಂಗಳಲ್ಲಿ ಲೋಕಸಭೆ ಚುನಾವಣೆ ಈವರೆಗೆ ನೀತಿ ಸಂಹಿತೆ ನೆಪ ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಅಧಿಕಾರಿಗಳು ಇತ್ತ ಗಮನ ಹರಿಸಿರಲಿಲ್ಲ. ಇದರಿಂದ ಹಲವು ಹಳ್ಳಿಗರು ಮತದಾನ ಬಹಿಷ್ಕಾರಕ್ಕೂ ಮುಂದಾಗಿದ್ದರು. ಕೆಲ ಹಳ್ಳಿಗಳಿಗೆ ಭೇಡಿ ನೀಡಿದ ಅಧಿಕಾರಿಗಳು ಮನವೊಲಿಸುವ ಕೆಲಸ ಮಾಡಿದ್ದರು. ಆದರೆ ಗೃಹ ಸಚಿವ ಎಂ.ಬಿ. ಪಾಟೀಲರು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದ ತಿಕೋಟಾ ತಾಲೂಕಿನ ಶ್ರೀಪತಿ ತಾಂಡಾ ಸೇರಿದಂತೆ ಹಲವು ಹಳ್ಳಿಗಳಿಗೆ ಈಗಲೂ ಅಧಿಕಾರಿಗಳು ಕೊಟ್ಟ ಮಾತು ಉಳಿಸಿಕೊಂಡು ನೀರು ಕೊಡಲು ಸಾಧ್ಯವಾಗಿಲ್ಲ.

ಇದರ ಹೊರತಾಗಿ ಜಿಲ್ಲೆಯಲ್ಲಿ ಈವರೆಗೆ 110 ಹಳ್ಳಿಗಳಿಗೆ 556 ಟ್ಯಾಂಕರ್‌ಗಳು ನಿತ್ಯವೂ 1,584 ಟ್ರಿಪ್‌ ಮೂಲಕ ನೀರು ಪೂರೈಸುತ್ತಿವೆ. ಹಲವು ಗ್ರಾಮಗಳಲ್ಲಿ ಪ್ರತಿ ಮನೆಗೆ ಕೇವಲ 2 ಕೊಡ ನೀರನ್ನು ಮಾತ್ರ ನೀಡುತ್ತಿರುವ ಕಾರಣ ಜೀವಜಲಕ್ಕಾಗಿ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಲ್ಲಿ ಜನಜೀವನ ಅತ್ಯಂತ ಹೀನಾಯ ಸ್ಥಿತಿ ತಲುಪಿದೆ. ಜಿಲ್ಲಾಡಳಿತ ತನ್ನ ಜಲ ಮೂಲಗಳ ಕೊರತೆ ಕಾರಣ ಖಾಸಗಿ ವ್ಯಕ್ತಿಗಳಲ್ಲಿ ಜಲ ಮೂಲ ಲಭ್ಯ ಇರುವ ಕೊಳವೆ ಬಾವಿಗಳಿಂದಲೂ ನೀರು ಪಡೆಯಲು ಮುಂದಾಗಿದ್ದರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ ಏಪ್ರಿಲ್ 1ರಿಂದಲೇ ಮೇ 5ರರವರೆಗೆ ಜಿಲ್ಲೆಯಲ್ಲಿ 15.60 ಕೋಟಿ ರೂ. ಖರ್ಚಾಗಿದ್ದು, ಜಿಲ್ಲಾಡಳಿತ ಬಳಿ ಕೇವಲ 5 ಕೋಟಿ ರೂ. ಮಾತ್ರ ಲಭ್ಯ ಇದೆ. ಕುಡಿಯುವ ನೀರಿಗೆ ಎಲ್ಲಿಯೇ ಸಮಸ್ಯೆ ಕಂಡು ಬಂದರೂ ತಕ್ಷಣ ಸ್ಪಂದಿಸುವಂತೆ ಕೆಳಹಂತದ ಅಧಿಕಾರಿಗಳಿಗೆ ಮೇಲಧಿಕಾರಿಗಳು ತಾಕೀತು ಮಾಡಿದ್ದಾರೆ. ಆದರೂ ಜಿಲ್ಲೆಯ ಹಲವು ಕಡೆಗಳಲ್ಲಿ ಇನ್ನೂ ಸಮರ್ಪಕ ನೀರು ಪೂರೈಸಲು ಸಾಧ್ಯವಾಗಿಲ್ಲ. ಕುಡಿಯುವ ನೀರಿಗೆ ಜಿಲ್ಲೆಯಲ್ಲಿ ಹಣಕಾಸು ಕೊರತೆ ಇಲ್ಲ ಎನ್ನುವ ಅಧಿಕಾರಿಗಳಿಗೆ ನೀರು ಹೊಂದಿಸಿಕೊಳ್ಳುವುದು ತಲೆನೋವಾಗಿದೆ.

Advertisement

ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಸ್ಪಂದಿಸುವಂತೆ ಸ್ಥಾನಿಕ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಸಮಸ್ಯಾತ್ಮಕ 110 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡ ಲಾಗುತ್ತಿದೆ. ಕುಡಿಯುವ ನೀರಿಗೆ ಹಣಕಾಸು ಕೊರತೆ ಇಲ್ಲ.
ಎಂ.ಕನಗವಲ್ಲಿ,
ಜಿಲ್ಲಾಧಿಕಾರಿ, ವಿಜಯಪುರ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next