•ಜಿ.ಎಸ್. ಕಮತರ
ವಿಜಯಪುರ: ಸತತ ಭೀಕರ ಬರದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲೂ ಮಳೆ ಕೊರತೆ ಕಾಡುತ್ತಿದೆ. ಕಾರಣ ಬಿತ್ತನೆಯಾದ ಬೆಳೆ ಕೂಡ ತೇವಾಂಶದ ಕೊರತೆ ಎದುರಿಸುತ್ತಿದ್ದು, 15 ದಿನಗಳಲ್ಲಿ ಅಗತ್ಯ ಮಳೆ ಆಗದಿದ್ದಲ್ಲಿ ಮತ್ತೆ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಆವರಿಸುವ ಆತಂಕ ಎದುರಾಗಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ 4.99 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇರಿಸಿಕೊಂಡಿದ್ದು, 2.20 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಮತ್ತೂಂದೆಡೆ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಮೇ ತಿಂಗಳಲ್ಲಿ ವಾಡಿಕೆಯಂತೆ 46 ಮಿ.ಮೀ. ಮಳೆ ಆಗಬೇಕಿದ್ದು, ಆಗಿದ್ದು ಮಾತ್ರ 18 ಮಿ.ಮೀ. ಮಳೆ. ಜೂನ್ ತಿಂಗಳಲ್ಲಿ 172.4 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಸುರಿದ ಮಳೆ ಮಾತ್ರ 129.6 ಮಿ.ಮೀ. ಮಾತ್ರ. ಅಂದರೆ ವಾಡಿಕೆಗಿಂತ 43 ಮಿ.ಮೀ. ಮಳೆ ಕೊರತೆಯಾಗಿದೆ. ಜುಲೈ ತಿಂಗಳ ಅಂತ್ಯಕ್ಕೆ 92 ಮಿ.ಮೀ. ವಾಡಿಕೆ ಮಳೆ ಆಗಬೇಕಿದ್ದರೂ ಮಾಸ ಕೊನೆಗೊಳ್ಳಲು 15 ದಿನ ಬಾಕಿ ಇದ್ದರೂ ಈ ವರೆಗೆ ಸುರಿದ ಮಳೆ ಕೇವಲ 23 ಮಿ.ಮೀ. ಮಾತ್ರ.
ತೇವಾಂಶ ಕೊರತೆಯ ಕಾರಣ ಬಿತ್ತನೆಯಾಗಿರುವ ಬಹುತೇಕ ಬೆಳೆಗಳು ಬಾಡ ತೊಡಗಿವೆ. ಪರಿಣಾಮ ಬರುವ 15 ದಿನಗಳಲ್ಲಿ ಅಂದರೆ ಜುಲೈ ಮಾಸಾಂತ್ಯದೊಳಗೆ ನಿಗದಿ ಪ್ರಮಾಣದ ಮಳೆ ಆಗದಿದ್ದಲ್ಲಿ ಬಿತ್ತನೆಯಾಗಿರುವ ಶೇ.44ರಷ್ಟು ಬೆಳೆ ಕೂಡ ಹಾನಿ ಸಂಭವವಿದೆ. ಇದರಿಂದ ಮತ್ತೂಂದು ಬರ ಎದುರಾಗುವ ಭೀತಿ ಜಿಲ್ಲೆಯ ರೈತರನ್ನು ಕಾಡುತ್ತಿದೆ. ಮುಂಗಾರು ಮಳೆ ಅಭಾವ ಹಾಗೂ ತೇವಾಂಶದ ಕೊರತೆ ಕಾರಣ ಬಿತ್ತನೆ ಬೆಳೆ ಕೂಡ ಬಾಡುತ್ತಿರುವುದನ್ನು ಕೃಷಿ ಇಲಾಖೆ ಮನಗಂಡಿದೆ. ಕಾರಣ ಮುಂಗಾರು ಬಿತ್ತನೆ ಗುರಿಯಲ್ಲಿ ಬಾಕಿ ಇರುವ 2.79 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಪರ್ಯಾಯ ಬೆಳೆ ಬಿತ್ತನೆಗೆ ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಲು ಮುಂದಾಗಿದೆ. ಮಳೆ ಕೊರತೆಯ ಕಾರಣ ಕಡಿಮೆ ಮಳೆ ಬಿದ್ದರೂ ಬೆಳೆ ಕೈ ಹಿಡಿಯುವ ಸಾಧ್ಯತೆ ಇರುವ ಬೆಳೆಗಳಾದ ಸಜ್ಜೆ, ತೊಗರಿ, ನವಣೆ, ಔಡಲ, ಸೂರ್ಯಕಾಂತಿ, ಉದಲು, ಎಳ್ಳು, ಗುರೆಳ್ಳು, ಬರ ನಿಗ್ರಹ ಶಕ್ತಿಗಾಗಿ ಕ್ಯಾಲ್ಸಿಯಂಯುಕ್ತ ಬೀಜೋಪಚಾರ ಮಾಡಬೇಕು. ರಸಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸದ ಸಾವಯವ ಪದ್ಧತಿ ಅನುಸರಿಸಬೇಕು. ಈಗಾಗಲೇ ಬಿತ್ತನೆ ಆಗಿರುವ ಮಳೆ ಆಧಾರಿತ ಪ್ರದೇಶದಲ್ಲಿ ದಟ್ಟವಾಗಿರುವ ಬೆಳೆಯಲ್ಲಿ ಕೆಲವು ಸಸಿಗಳನ್ನು ಕಿತ್ತು ಹಾಕಿ ಕಡಿಮೆ ಸಾಂದ್ರತೆ ರೂಪಿಸುವುದು, ಮುಚ್ಚಿಗೆ ಮಾಡುವುದು, ಮಣ್ಣಿನ ತೇವಾಂಶ ಸಂರಕ್ಷಣೆಗೆ ಎಡೆ ಹೊಡೆಯುವುದು ಸೇರಿದಂತೆ ತೇವಾಂಶ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಲಹೆ ರೈತರಿಗೆ ನೀಡಿದ್ದಾರೆ.