Advertisement

ವಿಶ್ವಶಾಂತಿ-ಪರಿಸರ-ಜಲ ಸಂರಕ್ಷಣೆಗೆ ಸೈಕಲ್ ಹತ್ತಿದ

10:38 AM Jul 06, 2019 | Naveen |

•ಜಿ.ಎಸ್‌. ಕಮತರ
ವಿಜಯಪುರ:
ಜಾಗತಿಕವಾಗಿ ಹೆಚ್ಚುತ್ತಿರುವ ಕಲಹಗಳು, ಭಯೋತ್ಪಾದನೆ ನಿರ್ಮೂಲೆನೆಗೆ ವಿಶ್ವಶಾಂತಿ ಅಗತ್ಯ. ನಾಶವಾಗಿರುವ ಪರಿಸರ ಸಂರಕ್ಷಣೆಗೆ ಹಸಿರೀಕರಣಕ್ಕೆ ಆದ್ಯತೆ ಬೇಕಿದೆ. ಭೀಕರ ಬರಕ್ಕೆ ಉತ್ತರ ಕಂಡುಕೊಳ್ಳಲು ಜಲ ಸಂರಕ್ಷಣೆಗೆ ಅದ್ಯತೆ ಎಂಬ ಸಂದೇಶಗಳನ್ನು ಹೊತ್ತು ಜಾಗೃತಿಗಾಗಿ ದೇಶ ಸುತ್ತುತ್ತಿರುವ ಕನ್ನಡ ಮೂಲದ ಮುಂಬೈ ನಿವಾಸಿ ನಾಗರಾಜ ದೇಶ ಸುತ್ತುತ್ತ ಗುಮ್ಮಟ ನಗರಿಗೆ ಆಗಮಿಸಿದ್ದಾನೆ.

Advertisement

ಹಾಸನ ನಗರದ ಮಲ್ಲೇಗೌಡ-ಶಾರದಮ್ಮ ದಂಪತಿಯ 8 ಮಕ್ಕಳಲ್ಲಿ ಕೊನೆ ಮಗನಾಗಿ ಜನಿಸಿದ ನಾಗರಾಜಗೌಡಗೆ ಈಗ 50 ಪ್ಲಸ್‌ ವಯಸ್ಸು. ತುಂಬು ಕುಟುಂಬದಲ್ಲಿ ಊದುಬತ್ತಿಯ ಸಣ್ಣ ವ್ಯಾಪಾರದ ಬಡತನದಲ್ಲಿ ಹುಟ್ಟಿ, ಹೊಟ್ಟೆ ಹೊರೆಯುವ ಧಾವಂತದಲ್ಲಿ ಮದುವೆ ವಯಸ್ಸೇ ಮೀರಿ ಹೋಗಿತ್ತು. ಸಿನಿಮಾ ಹುಚ್ಚಿನಿಂದಾಗಿ ಶಿಕ್ಷಣವೂ ತಲೆಗೆ ಹತ್ತದ ಕಾರಣ ಹೈಸ್ಕೂಲ್ ಕಟ್ಟೆ ಇಳಿದು ನೇರವಾಗಿ ರಾಷ್ಟ್ರ ರಾಜಧಾನಿ ನವದೆಹಲಿಗೆ ಹೊರಟಿದ್ದ.

ಹಾಸನಕ್ಕೆ ಬರುತ್ತಿದ್ದ ವಿದೇಶಿ ಪ್ರವಾಸಿಗರ ಬಳಿ ಇದ್ದ ಅಧುನಿಕ ತಂತ್ರಜ್ಞಾನ ಕ್ಯಾಮರಾಗಳನ್ನು ನೋಡಿ ಅಚ್ಚರಿ ಪಡುತ್ತಿದ್ದ ನಾಗಾರಾಜ, ಎರಡು ದಶಕಗಳ ಹಿಂದೆ ದೆಹಲಿಗೆ ಹಾರಿದಾಗ ತನ್ನ ಬಳಿ ಇದ್ದ ಸಣ್ಣ ಕ್ಯಾಮರಾ ಇಂಡಿಯಾ ಗೇಟ್ ಬಳಿ ನಿಂತು ಪ್ರವಾಸಿಗರ ಫೋಟೋ ತೆಗೆಯುವ ಮೂಲಕ ಅನ್ನಕ್ಕೆ ಅಧಾರವಾಗಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ ಅವರಂಥ ನಾಯಕರ ಫೋಟೋ ತೆಗೆದು, ಆವರೊಂದಿಗೆ ತಾನೂ ಫೋಟೋ ತೆಗೆಸಿಕೊಂಡು ಬೀಗಿದ್ದೇ ಬಂತು, ಜೇಬು ಮಾತ್ರ ಖಾಲಿ ಇತ್ತು. ಇದರಿಂದಾಗಿ ಬಾಲ್ಯದಲ್ಲಿದ್ದ ಸಿನಿಮಾ ಹುಚ್ಚಿನಿಂದಾಗಿ ಸಿನಿಮಾ ನಟನೆ ಅವಕಾಶಕ್ಕೆ ಕಾದರೂ ಅದೃಷ್ಟ ಕೈ ಹಿಡಿಯಲಿಲ್ಲ.

ಯೌನಾವಸ್ಥೆಯಲ್ಲಿ ಸುಬ್ಟಾರಾವ್‌ ಎಂಬ ಗಾಂಧಿವಾದಿ ಚಂಬಲ್ ಕಣಿವೆಯಲ್ಲಿ ಸ್ಥಾಪಿಸಿದ್ದ ಆಶ್ರಮದಲ್ಲಿದ್ದ ಸೇವಾ ಮನೋಭಾವದ ಗುಣಗಳು ನಾಗರಾಜನನ್ನು ಹೆಚ್ಚು ಕಾಡಿದವು. ಪರಿಣಾಮ ಸೈಕಲ್ ಮೂಲಕ ವಿಶ್ವಶಾಂತಿ ಜೊತೆಗೆ ಪರಿಸರ ರಕ್ಷಣೆಗೆ ಹಸಿರೀಕರಣ, ಜಲ ಸಂರಕ್ಷಣೆ ಮಳೆನೀರು ಕೊಯ್ಲು, ನದಿಗಳ ಸುರಕ್ಷತೆ, ವಿಶ್ವ ಮಾನವತ್ವದ ಸರ್ವ ಧರ್ಮ ಸಮನ್ವಯದ ಸಂದೇಶ ಸಾರಲು ಸೈಕಲ್ ತುಳಿಯುತ್ತ ಅಖಂಡ ಭಾರತ ಸುತ್ತಲು ಪ್ರೇರಣೆ ನೀಡಿದವು.

ಹೀಗಾಗಿ 2017 ಡಿಸೆಂಬರ್‌ 3ರಂದು ಮುಂಬೈನ ಅಂಧೇರಿ ವೆಸ್ಟ್‌ನಿಂದ ಸೈಕಲ್ ಏರಿ ಗುಜರಾತ, ರಾಜಸ್ಥಾನ ಪಂಜಾಬ್‌ ರಾಜ್ಯಗಳಲ್ಲಿ ಪಾಕಿಸ್ತಾನ ಗಡಿಯಲ್ಲಿ ಸಂಚರಿಸಿ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ ಸುತ್ತಿದ್ದಾರೆ. ಕಳೆದ ತಿಂಗಳು ತೆಲಂಗಾಣ ರಾಜ್ಯದಿಂದ ಬೀದರ ಮೂಲಕ ತವರು ನೆಲ ಕರ್ನಾಟಕಕ್ಕೆ ಕಾಲಿಟ್ಟಿದ್ದಾರೆ. ಬೀದರ ನಂತರ ಸೊಲ್ಲಾಪುರ ಮೂಲಕ ಮಹಾರಾಷ್ಟ್ರ ರಾಜ್ಯವನ್ನೂ ಸಂಪರ್ಕಿಸಿ ಇದೀಗ ಆದಿಲ್ ಶಾಹಿಗಳ ನಾಡು ವಿಜಯಪುರಕ್ಕೆ ಬಂದಿದ್ದಾರೆ.

Advertisement

ಬಿರುಗಾಳಿ ಬೀಸುವ ಆಷಾಢ ಹಾಗೂ ಮಳೆಗಾಲ ಆರಂಭದ ಈ ಹಂತದಲ್ಲಿ ಸೈಕಲ್ ತುಳಿಯುವುದು ಅಸಾಧ್ಯ. ಹೀಗಾಗಿ ಬಳ್ಳಾರಿ ಮಾರ್ಗವಾಗಿ ಅನಂತಪುರ ಮೂಲಕ ಸೀಮಾಂಧ್ರ ಪ್ರವೇಶಿಸಿ ಬೆಂಗಳೂರಿಗೆ ಸೇರುವ ಗುರಿ ಇದೆ. ಮಳೆಗಾಲದವರೆಗೆ ಹಾಸನ ನಗರದಲ್ಲಿರುವ ಅಣ್ಣಂದಿರಾದ ಗಂಗಾಧರ, ವಿಶ್ವನಾಥ, ಹೊಳೆನರಸೀಪುರ ಪಟ್ಟಣದಲ್ಲಿರುವ ಅಕ್ಕ ಜಾನಕಿ, ಬೆಂಗಳೂರಿನಲ್ಲಿರುವ ಇನ್ನೋರ್ವ ಅಕ್ಕ ಲಕ್ಷ್ಮಿದೇವಿ ಇವರ ಬಳಿ ಕೆಲ ಕಾಲ ಕಳೆದು ಮತ್ತೆ ಸೈಕಲ್ ಏರುವ ಉದ್ದೇಶ ಹೊಂದಿದ್ದಾರೆ.

ಮಳೆಗಾಲ ಮುಗಿಯುತ್ತಲೇ ಮತ್ತೆ ಪೆಡಲ್ ತುಳಿದು ತಮಿಳುನಾಡು, ಕೇರಳ ರಾಜ್ಯಗಳನ್ನು ಸುತ್ತಿ ವಿಶ್ವಕ್ಕೆ ಭಾರತೀಯ ಸನಾತನ ಧರ್ಮ ಸಂದೇಶವನ್ನು ವಿಶ್ವಕ್ಕೆ ಸಾರಿ ಹೇಳಿದ ವೀರ ಸನ್ಯಾಸಿ ಸ್ವಾಮಿವಿವೇಕಾನಂದ ಅವರ ತಪೋಭೂಮಿ ಕನ್ಯಾಕುಮಾರಿ ತಲುಪುವ ಯೋಜನೆ ಹಾಕಿಕೊಂಡಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಸೈಕಲ್ ತುಳಿಯುತ್ತಿರುವ ನಾಗರಾಜಗೆ ಎಲ್ಲೂ, ಯಾವ ಸಮಸ್ಯೆಯೂ ಅಗಿಲ್ಲ, ಸಣ್ಣ ಆರೋಗ್ಯ ಸಮಸ್ಯೆ ಕಾಡಿಲ್ಲ. ಮಾರ್ಗ ಮಧ್ಯೆ ಸಣ್ಣ ವ್ಯಾಪಾರಿಗಳು, ದಾನಿಗಳು, ಉದಾರಿಗಳು ನೀಡುವ ಬಿಡಿಗಾಸು, ಹಾಕುವ ಉಪಾಹಾರ, ಊಟವೇ ನನಗೆ ಸಾಕು. ಗಳಿಸಿ ಬಾಳುವ ಅಗತ್ಯ ನನಗೆ ಈಗಂತೂ ಇಲ್ಲ ಎನ್ನುತ್ತ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕ ಗೋಲಗುಂಬಜ್‌ ಕಣ್ತುಂಬಿಕೊಳ್ಳಲು ಸೈಕಲ್ ಏರಿ ಹೊರಟೇ ಬಿಟ್ಟ.

ಅಣ್ಣ-ಅಕ್ಕಂದಿರಿದ್ದರೂ ಎಲ್ಲ ಇದ್ದೂ ಏನೂ ಇಲ್ಲದ ಫ‌ಕೀರ ನಾನು. ಯಾವ ಉದ್ಯೋಗವೂ ಸರಿಯಾಗಿ ಬರದ ನನಗೆ, ಒಂದೆಡೆ ನೆಲೆ ನಿಲ್ಲುವ ಗುಣವೂ ಇಲ್ಲ. ಹೀಗಾಗಿ ಜಗತ್ತಿನಲ್ಲಿ ನಡೆಯುತ್ತಿರುವ ಭಯೋತ್ಪಾನೆ ಅಳಿಸಿ, ವಿಶ್ವಶಾಂತಿ ನೆಲೆಸಬೇಕು. ಹಸಿರೀಕರಣದ ಮೂಲಕ ಪರಿಸರ ರಕ್ಷಣೆ ಆಗಲಿ, ಜಲ ಸಂರಕ್ಷಣೆ ಮೂಲಕ ಜಲ ಕ್ಷಾಮ ತಪ್ಪಲಿ ಎಂಬ ಸಂದೇಶ ಸಾರುವುದೇ ನನ್ನ ಜೀವಿತದ ಕೊನೆ ಆಸೆ. ನಾನು ಹರಿಸಿದ ಬೆವರಿಗೆ ಜನರಲ್ಲಿ ಕೊಂಚವೇ ಜಾಗ್ರತಿ ಮೂಡಿದರೂ ಸಾಕು ಸಾರ್ಥಕವಾಗುತ್ತದೆ.
•ನಾಗರಾಜ ಹಾಸನ ಸೈಕಲ್ ಸವಾರಿಯ ದೇಶ ಪರ್ಯಟಕ

Advertisement

Udayavani is now on Telegram. Click here to join our channel and stay updated with the latest news.

Next