ವಿಜಯಪುರ: ತಜ್ಞ ವೈದ್ಯರ ಸಲಹೆವಿಲ್ಲದೇ ಎಂಟಿಪಿ (ಮೆಡಿಕಲ್ ಟರ್ಮಿನೆಷನ್ ಆಫ್ ಪ್ರೆಗ್ನೆನ್ಸಿ) ಗೆ ಸಂಬಂಧಪಟ್ಟಂತೆ ಔಷಧಗಳನ್ನು ಮಾರಾಟ ಮಾಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಕೂಡಾ ಕೆಲವು ಔಷಧ ಮಳಿಗೆಗಳಲ್ಲಿ ಇಂತಹ ಔಷಧ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಅಂತಹ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಟಿಸಿ ಪಿಎನ್‌ಡಿಪಿ ಜಿಲ್ಲಾ ಸಲಹಾ ಸಮಿತಿ ಹಾಗೂ ತಪಾಸಣಾ ಮತ್ತು ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಎಂಟಿಪಿ (ಗರ್ಭಪಾತ) ಕೈಗೊಳ್ಳುವ ಕುರಿತಂತೆ ಕಾನೂನಿನ ಅಡಿಯಲ್ಲಿ ಅವಕಾಶ ಇರುವುದರಿಂದ ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ. ಆದರೂ ಕೂಡಾ ಗರ್ಭಪಾತಕ್ಕೆ ಇಚ್ಚಿತ ಮಹಿಳೆಯರು ತಜ್ಞವೈದ್ಯರ ಸಲಹಾ ಚೀಟಿಗಾಗಿ ಸಂಪರ್ಕಿಸಬಹುದೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿ ತಜ್ಞವೈದ್ಯರ ಸಲಹೆವಿಲ್ಲದೆ ವಿವಿಧ ಔಷಧಿ ಅಂಗಡಿಗಳ ಮೂಲಕ ಗರ್ಭಪಾತಕ್ಕೆ ಸಂಬಂಧಪಟ್ಟ ಔಷಧಗಳನ್ನು ಕೌಂಟರ್‌ಸೇಲ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನೂ ಮುಂದೆ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕಾನೂನಿನ ಅಡಿಯಲ್ಲಿ ಸಂಬಂಧಪಟ್ಟ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ತಜ್ಞ ವೈದ್ಯರ ಸಲಹಾ ಚೀಟಿ ಆಧಾರದ ಮೇಲೆ ಗರ್ಭಪಾತಕ್ಕೆ ಔಷಧ ಮಾರಾಟಕ್ಕೆ ಸಂಬಂ ಧಿಸಿದಂತೆ ಆಯಾ ಔಷಧ ಮಳಿಗೆ ಮಾಲೀಕರು ಕಡ್ಡಾಯವಾಗಿ ಸಂಬಂಧಿಸಿದ ವೈದ್ಯರ ಹೆಸರಿನೊಂದಿಗೆ ಪ್ರತ್ಯೇಕ ರಜಿಸ್ಟರ್ ನಿರ್ವಹಣೆ ಮಾಡಬೇಕು. ಅದರಂತೆ ಸ್ಟಾಕ್ (ಸಂಗ್ರಹಣಾ) ರಜಿಸ್ಟರ್‌ದಲ್ಲಿ ಓಪನಿಂಗ್ ಹಾಗೂ ಕ್ಲೋಸಿಂಗ್ ಬ್ಯಾಲೆನ್ಸ್‌ಅನ್ನು ಸಹ ತಪ್ಪದೇ ನಮೂದಿಸುವಂತೆ ಸೂಚನೆ ನೀಡಿದರು.
ಪ್ರಸವ ಪೂರ್ವ ಭ್ರೂಣಲಿಂಗ ಪತ್ಯೆ ನಿಷೇಧ ಕಾನೂನಿನ ಕುರಿತಂತೆ ಗಡಿ ಭಾಗದ ವೈದ್ಯರನ್ನು ಸೇರಿದಂತೆ ಸಂಬಂಧಪಟ್ಟವರಿಗೆ ಫೆ.25ರಂದು ಕಾರ್ಯಾಗಾರವೊಂದನ್ನು ಸಹ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸ್ಕ್ಯಾನಿಂಗ್ ಮಷಿನ್ ಬಳಕೆಗೆ ಸಂಬಂಧಿ ಸಿದಂತೆ ಒಂದು ಆಸ್ಪತ್ರೆಯಿಂದ ಬಂದಿರುವ ಹೊಸ ಅರ್ಜಿಯನ್ನು ಹಾಗೂ ಆಸ್ಪತ್ರೆ ವರ್ಗಾವಣೆ ಕೋರಿ ಬಂದಿರುವ ಒಂದು ಅರ್ಜಿಯನ್ನು ಪರಿಶೀಲಿಸಿ ಆಯಾ ಆಸ್ಪತ್ರೆಗಳು ಕಾನೂನಿನ ಪ್ರಕಾರ ಎಲ್ಲಾ ಮಾರ್ಗಸೂಚಿಗಳನ್ನು ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು. ಚೆಕ್‌ಲಿಸ್ಟ್ ದೃಢೀಕರಣ ಆಧಾರದ ಮೇಲೆ ಸ್ಕ್ಯಾನಿಂಗ್ ಮಷಿನ್ ಬಳಕೆ ಅನುಮತಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ಮಕ್ಕಳ ತಜ್ಞ ಎಲ್.ಎಚ್. ಬಿದರಿ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.