ವಿಜಯಪುರ : ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ 8 ಅಭ್ಯರ್ಥಿಗಳು ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಅಂತಿಮ ಕಣದಲ್ಲಿದ್ದರು. ಆದರೆ ಮತದಾರ ಪ್ರಭು ನೀಡಿರುವ ತೀರ್ಪಿನಲ್ಲಿ ನೋಟಾ ಮತದಾನವೇ 4ನೇ ಸ್ಥಾನದಲ್ಲಿ ಮಿಂಚಿದೆ.
ವಿಜೇತ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 6,72,781 ಮತ ಪಡೆದು ಮೊದಲ ಸ್ಥಾನದೊಂದಿಗೆ ವಿಜೇತರಾದರೆ, ಕಾಂಗ್ರೆಸ್ ಸ್ಪರ್ಧಿ ರಾಜು ಆಲಗೂರ 5,95,552 ಮತಗಳೊಂದಿಗೆ ರನ್ನರ್ ಸ್ಥಾನದಲ್ಲಿ ತೃಪ್ತಿ ಪಡದಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ಗಣೇಶ ರಾಠೋಡ 7,691 ಮತಗಳೊಂದಿಗೆ ತೃತೀಯ ಸ್ಥಾನ ಸಂಪಾದಿಸಿದ್ದಾರೆ. ಇವರ ನಂತರ 4ನೇ ಸ್ಥಾನ ನೋಟಾ ಬಟನ್‍ಗೆ ದಕ್ಕಿದೆ.
ಒಟ್ಟು ಚಲಾವಣೆಯಾದ ಮತಗಳಲ್ಲಿ 7,502 ಮತಗಳು ನೋಟಾ ಬಟನ್ ಒತ್ತಿದ್ದಾರೆ. ಅಂಚೆ ಮೂಲಕ ಚಲಾವಣೆಯಾದ ಸೇವಾ ಮತದಾರರಲ್ಲಿ 20 ಮತಗಳು ನೋಟಾ ಎಂದು ನಮೂದಿಸಲಾಗಿದೆ.
ಈ ಮೂಲಕ ಸ್ಪರ್ಧಿಸಿರುವ ಎಲ್ಲ 8 ಅಭ್ಯರ್ಥಿಗಳನ್ನೂ ತಿರಸ್ಕರಿಸಿರುವ ಮತದಾರರ ಸಂಖ್ಯೆ 4ನೇ ಸ್ಥಾನದಲ್ಲಿರುವುದು ರಾಜಕೀಯ ಪಕ್ಷಗಳಿಗೆ, ಚುನಾವಣಾ ಸ್ಪರ್ಧಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಏಕೆಂದರೆ ಕೇವಲ ಇನ್ನು 121 ಮತದಾರರು ನೋಟಾ ಬಟನ್ ಒತ್ತಿದ್ದರೆ ನನ್ ಆಫ್ ದ ಅಬೌ 3ನೇ ಸ್ಥಾನದಲ್ಲಿ ಕುಳಿತಿರುತ್ತಿತ್ತು ಎಂಬುದು ಚುನಾವಣೆ ಗುಂಗಿನ ರಾಜಕೀಯ ಮಂದಿ ಗಂಭೀರವಾಗಿ ಚಿಂತಿಸಬೇಕಿರುವ ವಿಷಯ.