Advertisement

ಶತಮಾನೋತ್ಸವ ಕಟ್ಟಡಕ್ಕೆ 2.5 ಕೋಟಿ ರೂ. ಬಿಡುಗಡೆ

05:16 PM Jul 29, 2019 | Naveen |

ವಿಜಯಪುರ: ಪ್ರಸ್ತುತ ಆರ್ಥಿಕ ವರ್ಷದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ 13 ಕೋಟಿ ರೂ. ಲಾಭ ಗಳಿಸಿದ್ದು ಬ್ಯಾಂಕ್‌ನ ಶತಮಾನದ ದಾಖಲೆ. ಈ ಹಂತದಲ್ಲೇ ಬಾಂಕ್‌ ಶತಮಾನೋತ್ಸವದ ಸಂಭ್ರಮದಲ್ಲಿದೆ. ಡಿಸಿಸಿ ಬ್ಯಾಂಕ್‌ ಶತಮಾನೋತ್ಸವ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ 5 ಕೋಟಿ ರೂ. ಅನುದಾನದಲ್ಲಿ ಈಗಾಗಲೇ 2.5 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ, ಮಾಜಿ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ರವಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಶತಮಾನೋತ್ಸವ, ಅಂಚೆ ಲಕೋಟೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ರೈತರಿಗೆ ಉತ್ತಮ ಸೇವೆ ನೀಡುತ್ತ ಮುನ್ನಡೆಯುತ್ತಿದೆ. 2003ರಿಂದ ಈ ವರೆಗೆ 105 ಕೋಟಿ ರೂ. ಲಾಭ ಗಳಿಸಿದೆ. ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಪ್ರತ್ಯೇಕಗೊಂಡ ನಂತರ ಬ್ಯಾಂಕ್‌ ಹಿನ್ನಡೆ ಆತಂಕದಲ್ಲಿತ್ತು. ಅದರೆ ಬ್ಯಾಂಕ್‌ ಸದಸ್ಯರು, ನಿರ್ದೇಶಕರ ಹಾಗೂ ಸಿಬ್ಬಂದಿಗಳ ಪರಿಶ್ರಮದ ಫಲವಾಗಿ ಸತತ ಲಾಭದಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಬ್ಯಾಂಕ್‌ ಸದೃಢವಾಗಿ ಬೆಳೆದರೆ, ನಾವು ಸದೃಢವಾಗಿ ಬೆಳೆಯಲು ಸಾಧ್ಯ. ಡಿಸಿಸಿ ಬ್ಯಾಂಕ್‌ನಿಂದಾಗಿ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಲಕ್ಷಾಂತರ ಜನರು ಬ್ಯಾಂಕ್‌ನಿಂದ ಆರ್ಥಿಕ ಸಹಾಯ ಪಡೆದುಕೊಂಡಿದ್ದಾರೆ, ಬ್ಯಾಂಕಿನ ನಿವೃತ್ತ ನೌಕರರಿಗೆ 6 ಕೋಟಿ ರೂ. ಪಿಂಚಣಿ ಹಣ ವಿತರಿಸಲಾಗಿದೆ ಎಂದರು.

ಕೇವಲ 38 ಸಾವಿರ ರೂ.ಗಳ ಷೇರು ಬಂಡವಾಳ ಹಾಗೂ 25 ಸಾವಿರ ರೂ. ಠೇವಣಿಯಿಂದ ಆರಂಭಗೊಂಡಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಇದೀಗ ಹೆಮ್ಮರವಾಗಿ ಬೆಳೆದಿದೆ. ಆರಂಭದ ಅವಧಿ ಕಾಲಘಟ್ಟದಲ್ಲಿ ಜಿಲ್ಲೆಯಲ್ಲಿ 55 ಹಳ್ಳಿಗಳಲ್ಲಿ ಹಾಗೂ 4 ಪಟ್ಟಣಗಳಲ್ಲಿ ಮಾತ್ರ ಸಹಕಾರ ಸಂಘಗಳು ಅಸ್ತಿತ್ವದಲ್ಲಿದ್ದವು. ಜಿಲ್ಲೆಯ ಅವಶ್ಯಕತೆಗೆ ಅನುಗುಣವಾಗಿ ಹೊಸದಾಗಿ ರಚನೆಗೊಂಡ ವಿವಿಧ ಸಹಕಾರ ಸಂಘಗಳ ಕಾರ್ಯ ನಿರ್ವಹಣೆ, ಬೆಳವಣಿಗೆಗೆ ಅಗತ್ಯವಾದ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ ಎಂದರು.

2018-19 ನೇ ವರ್ಷದಲ್ಲಿ ಡಿಸಿಸಿ ಬ್ಯಾಂಕ್‌ ಕೃಷಿಗಾಗಿ 857.18 ಕೋಟಿ ರೂ. ಹಾಗೂ ಕೃಷಿಯೇತರ ಚಟುವಟಿಕೆಗಳಿಗಾಗಿ 826.08 ಕೋಟಿ ರೂ. ಒಟ್ಟು 1683.26 ಕೋಟಿ ರೂ. ಸಾಲ ವಿತರಿಸಿದೆ. ಕೃಷಿ ಸಾಲ ವಸೂಲಾತಿ ಶೇ. 98.14 ಹಾಗೂ ಕೃಷಿಯೇತರ ಸಾಲ ವಸೂಲಾತಿ ಪ್ರಮಾಣ ಶೇ. 86.78ರಷ್ಟಾಗಿದ್ದು, ಒಟ್ಟಾರೆ ಶೇ. 93.26 ಸಾಲ ವಸೂಲಾತಿ ಪ್ರಮಾಣ ಇದೆ ಎಂದು ವಿವರಿಸಿದರು.

Advertisement

ಶಿರೂರ ಡಾ| ಬಸವಲಿಂಗ ಶ್ರೀಗಳು, ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಡಿಸಿಸಿ ಉಪಾದ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಶೇಖರ ದಳವಾಯಿ, ಸಂಯುಕ್ತಾ ಪಾಟೀಲ, ಎಂ.ಆರ್‌. ಪಾಟೀಲ ಬಳ್ಳೊಳ್ಳಿ, ಗುರುಶಾಂತ ನಿಡೋಣಿ, ಸೋಮನಗೌಡ ಬಿರಾದಾರ, ಕಲ್ಲನಗೌಡ ಬಿರಾದಾರ, ಎಚ್.ಆರ್‌.ಆರ್‌. ಬಿರಾದಾರ ಪಾಟೀಲ, ಮುರುಗೇಶ ಹೆಬ್ಟಾಳ, ಅಣ್ಣಪ್ಪ ಪೂಜಾರಿ, ಸುರೇಶ ಬಿರಾದಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next