Advertisement

Vijayapura; ಖಾಸಗಿ ಆಸ್ಪತ್ರೆಗಳಿಗೆ ಕೆಪಿಎಂಇ ಕಾಯ್ದೆಯಡಿ ನೋಂದಣಿ, ಫಲಕ ಅಳವಡಿಕೆ ಕಡ್ಡಾಯ

06:06 PM Jun 11, 2024 | Team Udayavani |

ವಿಜಯಪುರ: ನಕಲಿ ವೈದ್ಯರ ಹಾವಳಿ ತಡೆಗಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳು ಕಡ್ಡಾಯವಾಗಿ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ) ಕಾಯ್ದೆ ಅನ್ವಯ ನೋಂದಣಿ ಮಾಡಿಸಬೇಕು. ಆಸ್ಪತ್ರೆಯಲ್ಲಿ ನೋಂದಣಿ ಸಂಖ್ಯೆಯ ಸಹಿತ ಸಾರ್ವಜನಿಕರಿಗೆ ಕಾಣುವಂತೆ ಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಭೂಬಾಲನ್ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಕೆಪಿಎಂಇ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳು, ಪ್ರಯೋಗಾಲಯ, ನರ್ಸಿಂಗ್ ಹೋಂಗಳು ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ನಕಲಿ ವೈದ್ಯರ ಹಾವಳಿ ತಡೆಗಟ್ಟುವ ಉದ್ದೇಶದಿಂದ ಕಡ್ಡಾಯವಾಗಿ ಎಲ್ಲರಿಗೂ ಕಾಣುವ ರೀತಿಯಲ್ಲಿ ನೋಂದಣಿ ಫಲಕ ಅಳವಡಿಸಬೇಕು ಎಂದು ಸೂಚಿಸಿದರು.

ಅಲೋಪತಿ ಆಸ್ಪತ್ರೆಗಳು ಆಕಾಶ ನೀಲಿ ಬಣ್ಣದ, ಆಯುರ್ವೇದಿಕ್ ಆಸ್ಪತ್ರೆಗಳು ತಿಳಿ ಹಸಿರು ಬಣ್ಣದ ಫಲಕಗಳನ್ನು ಅಳವಡಿಸಬೇಕು. ಜಿಲ್ಲೆಯಲ್ಲಿ ಈ ವರೆಗೆ ನೋಂದಣಿಯಾಗದೆ ಇರುವ ಸಂಸ್ಥೆಗಳು ಒಂದು ವಾರದ ಒಳಗೆ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದರು.

ನವೀಕರಣ ಮಾಡಿಸುವುದಕ್ಕೂ ಒಂದು ವಾರದ ಅವಕಾಶ ನೀಡಲಾಗಿದೆ. ತಪ್ಪಿದಲ್ಲಿ ಕೆಪಿಎಂಪಿ ಕಾಯ್ದೆ-2018 ರ ಅನ್ವಯ ಕಾನೂನು ಕ್ರಮ ಜರುಗಿಸುವುದಾಗಿ ಭೂಬಾಲನ್ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ನಕಲಿ ವೈದ್ಯರು ಮಾತ್ರವಲ್ಲದೇ ನಕಲಿ ಕ್ಲಿನಿಕ್, ನಕಲಿ ಔಷಧಾಲಯ ಕಂಡು ಬಂದರೂ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಆಯಾ ತಾಲೂಕ ವ್ಯಾಪ್ತಿಯ ತಹಶೀಲ್ದಾರ, ಪೊಲೀಸ್ ಇಲಾಖೆ ಅಧಿಕಾರಿಗಳು ಜೊತೆ ಸಮನ್ವಯದಿಂದ ನಕಲಿ ಆಸ್ಪತ್ರೆ, ವೈದ್ಯಕೀಯ ಸೇವೆ ನೀಡುವ ಸಂಸ್ಥೆಗಳ ಮೇಲೆ ದಾಳಿ ನಡೆಸಿ, ದಂಡ ಹಾಗೂ ಕಾನೂನು ಕ್ರಮ ಜರಗಿಸಬೇಕು ಎಂದು ಸೂಚಿಸಿದರು.

Advertisement

ವಿಜಯಪುರ ಜಿಲ್ಲೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಸೇರಿದಂತೆ ಇತರರು ಸಭೆಯಲ್ಲಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next