Advertisement
ಮಂಗಳವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಎಲ್ಲ ಶಾಸಕರು ಅನುದಾನ ವಿಚಾರದಲ್ಲಿ ಅಸಮಾಧಾನ ಹೊಂದಿದ್ದಾರೆ. ಅಭಿವೃದ್ಧಿಗೆ ಹಣ ನೀಡುತ್ತಿಲ್ಲವೆಂದು ಕಾಂಗ್ರೆಸ್ ಶಾಸಕರು ಸ್ವಪಕ್ಷೀಯ ಸರ್ಕಾರದ ವಿರುದ್ಧ ಬಂಡೇಳಲು ಕಾರಣ. ತಮ್ಮ ಕ್ಷೇತ್ರದಲ್ಲಿ ಒಂದೂ ಅಭಿವೃದ್ಧಿ ಕಾಮಗಾರಿ ಪೂಜೆ ಮಾಡಲು ಸಾಧ್ಯವಾಗದೇ ಕಾಂಗ್ರೆಸ್ ಶಾಸಕರೇ ಧ್ವನಿ ಎತ್ತಿದ್ದು, ಹಿಂದಿನ ಸರ್ಕಾರದ ಕಾಮಗಾರಿಗಳಿಗೆ ಪೂಜೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Related Articles
Advertisement
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೇಗ ಪತನವಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕನಸು ಕಾಣುತ್ತಿದ್ದಾರೆ. ಬರುವ 3 ತಿಂಗಳಲ್ಲಿ ಬಿಜೆಪಿ ಶಾಸಕರ ಬಲ 272ಕ್ಕೆ ಏರಲಿದ್ದು, ಇದು ಆಪರೇಷನ್ ಅಲ್ಲ ನಾರ್ಮಲ್ ಡಿಲೆವರಿ ಎಂದು ಶಾಸಕ ಯತ್ನಾಳ ಕುಟುಕಿದ್ದಾರೆ.
ಸೋಮಣ್ಣ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದಕ್ಕೆ ಸ್ವಪಕ್ಷದಲ್ಲಿ ಅಸಮಾಧಾನ ಎದ್ದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ನಿಲ್ಲಿಸಿ ಸೋಲಿಸಿದರು. ಆದರೆ ಹಿಂದಿನ ಉಪ ಚುನಾವಣೆಗಳಲ್ಲಿ ಸೋಮಣ್ಣ ಕೆಲಸ ಮಾಡಿ ಗೆಲ್ಲಿಸಿದ್ದನ್ನು ನೋಡಿ ಹೈಕಮಾಂಡ್ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿ, ಎರಡು ಖಾತೆ ನೀಡಿದೆ ಎಂದರು.
ಜಮೀನಿಗೆ ಲಂಚ: ಬೆಂಗಳೂರಿನಲ್ಲಿ ಕೃಷಿಯೇತರ ಜಮೀನು ಪರಿವರ್ತಿಸಲು ಪ್ರತಿ ಚದರ ಅಡಿಗೆ 75 ರೂ. ಲಂಚ ನೀಡಬೇಕಾಗಿದೆ. ನಮ್ಮ ಸರ್ಕಾರದ ವಿರುದ್ಧ ಶೇ.40 ಕಮೀಷನ್ ಆರೋಪ ಮಾಡಿದವು, ಇಷ್ಟು ಇದೀಗ ಪ್ರಮಾಣದ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಯತ್ನಾಳ ಆರೋಪಿಸಿದರು.
ವಿಜಯಪುರ ಜಿಲ್ಲೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಖರೀದಿ ಮಾಡಿಸುವ ಪ್ರಕರಣಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ, ವಕ್ಫ್ ಹೆಸರಿನಲ್ಲಿದ್ದ ಜಮೀನನ್ನು ಓರ್ವ ವ್ಯಕ್ತಿಯ ಹೆಸರಿಗೆ ಮಾಡಿದ್ದಾರೆ. ದೇಶದಲ್ಲಿ 12 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, ಸರ್ಕಾರ ಇದನ್ನು ವಶಕ್ಕೆ ಪಡೆದು ಬಡವರಿಗೆ ಮನೆ ಕಟ್ಟಿಸಬೇಕು. ಈ ಕುರಿತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತೇನೆ ಎಂದರು.
ಭೇಟಿಗೆ ಬೇರೆ ಅರ್ಥ ಬೇಡ: ಮೇಲ್ಮನೆ ಶಾಸಕ ರವಿಕುಮಾರ ಸೇರಿದಂತೆ ಬಿಜೆಪಿ ಪಕ್ಷದ ಕೆಲ ಮಾಜಿ ಶಾಸಕರೊಂದಿಗೆ ಭೇಟಿ ಮಾಡಿದ್ದು, ಯಡಿಯೂರಪ್ಪ ಅವರೊಂದಿಗೆ ಹೊಂದಾಣಿಕೆಗಾಗಿ ಅಲ್ಲ. ಈ ಭೇಟಿ ಹಾಗೂ ಮಾತುಕತೆಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಯತ್ನಾಳ ಪ್ರತಿಕ್ರಿಯಿಸಿದ್ದಾರೆ.
ರವಿಕುಮಾರ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಆಭಯ ಪಾಟೀಲ ಇವರೆಲ್ಲ ನನ್ನನ್ನು ಭೇಟಿ ಮಾಡಿದ್ದಕ್ಕೆ ವಿಶೇಷ ಮಹತ್ವ ನೀಡಬೇಕಿಲ್ಲ. ಪಕ್ಷದ ಸಂಘಟನೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಘಟಿತ ಹೋರಾಟದ ಕುರಿತು ಚರ್ಚಿಸಿದ್ದೇವೆ ಎಂದು ಸಮಜಾಯಿಸಿ ನೀಡಿದರು.