ವಿಜಯಪುರ: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ಕ್ಷಿಪ್ರ ರಾಜಕೀಯ ಬೆಳವಣಿಗೆ ಆರಂಭಗೊಂಡಿದೆ. ಸೋಮವಾರ ಮೈತ್ರಿ ಪಕ್ಷಗಳ ಇನ್ನೂ ಕೆಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು ನೀರು ಎರೆಯಲಿದ್ದಾರೆಯೇ ಎಂಬ ಗುಮಾನಿ ಮೂಡಿದೆ.
Advertisement
ಏನಿಲ್ಲ ಏನಿಲ್ಲ ಎನ್ನುತ್ತಲೇ ಮೈತ್ರಿ ಪಕ್ಷಗಳ ಜೆಡಿಎಸ್ ನಿರ್ಗಮಿತ ಅಧ್ಯಕ್ಷ ಎಚ್.ವಿಶ್ವನಾಥ, ಕಾಂಗ್ರೆಸ್ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಸೇರಿದಂತೆ 14 ಶಾಸಕರು ರಾಜೀನಾಮೆ ನೀಡುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಕ್ಕೆ ದೊಡ್ಡ ಮಟ್ಟದ ಷಡ್ಯಂತ್ರ ಹೊರ ಹಾಕಿದ್ದಾರೆ. ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮಾದರಿಯಲ್ಲೇ ಜಿಲ್ಲೆಯ ಕೆಲವು ಶಾಸಕರ ನಡೆ ಕೂಡ ಇದೇ ಮಾದರಿಯಲ್ಲಿ ಸಾಗಲಿದೆಯೇ ಎಂಬ ಅನುಮಾನ ಮೂಡಿಸಿದೆ.
Related Articles
Advertisement
ಅದೇ ರೀತಿ ಅಧಿಕಾರದಿಂದ ದೂರ ಇದ್ದು ತಮ್ಮ ಕ್ಷೇತ್ರದಲ್ಲಿ ಅರ್ಧ ಶತಮಾನದಿಂದ ಮುಕ್ತಿಗೆ ಕಾಯುತ್ತಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆ ಸಕ್ಕರೆ ಉತ್ಪಾದಿಸುವಂತೆ ಮಾಡಿದ್ದರು. ರಾಜ್ಯದಲ್ಲೇ ಹೆಚ್ಚು ಲಿಂಬೆ ಬೆಳೆಯುವ ವಿಜಯಪುರ ಜಿಲ್ಲೆಯ ರೈತರ ಹಿತ ರಕ್ಷಣೆಗೆ ಕರ್ನಾಟಕ ರಾಜ್ಯ ಲಿಂಬೆ ಆಭಿವೃದ್ಧಿ ಮಂಡಳಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಲದಕ್ಕೆ ಸದರಿ ಮಂಡಳಿಯ ಕೇಂದ್ರ ಕಚೇರಿಯನ್ನು ಇಂಡಿ ಪಟ್ಟಣಕ್ಕೆ ತರುವಲ್ಲೂ ಯಶಸ್ವಿಯಾಗಿದ್ದರು.
ಆದರೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಹಂತದಲ್ಲಿ ತಮ್ಮ ಕ್ಷೇತ್ರದ ಆಭಿವೃದ್ಧಿಗೆ ರೂಪಿಸಿರುವ ಕೆಲಸಗಳು ಆಗದಿರುವುದಕ್ಕೆ ಅತೃಪ್ತಿ ಹೊರ ಹಾಕುತ್ತಲೇ ಇದ್ದಾರೆ. ಬೇಸಿಗೆಯಲ್ಲಿ ಲಿಂಬೆ ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಕಲು ಲಕ್ಷಾಂತರ ಖರ್ಚು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಮಹಾರಾಷ್ಟ್ರ ಮಾದರಿಯಲ್ಲಿ ಪ್ಯಾಕೇಜ್ ಕೊಡಿ ಎಂದು ಬೇಡಿಕೆ ಇರಿಸಿದ್ದಾರೆ. ಸಿದ್ಧರಾಮಯ್ಯ ಸರ್ಕಾರ ಇದ್ದಾಗಿನಿಂದಲೇ ಈ ವಿಷಯದಲ್ಲಿ ಕೂಗು ಎಬ್ಬಿಸಿದ್ದು, ಮೈತ್ರಿ ಸರ್ಕಾರದಲ್ಲಿ ಜಿಲ್ಲೆಯವರೇ ಎಂ.ಸಿ.ಮನಗೂಳಿ ತೋಟಗಾರಿಕೆ ಸಚಿವರಾಗಿದ್ದ ತಮ್ಮ ಬೇಡಿಕೆ ಕೈಗೂಡುತ್ತೆ ಎಂದು ನಂಬಿದ್ದರು. ಆದರೆ ಮನಗೂಳಿ ಅವರು ಸ್ಪಂದಿಸಿಲ್ಲ. ಇದರಿಂದ ಕುಪಿತರಾಗಿರುವ ಯಶವಂತರಾಯಗೌಡ ಅವರು ವಾರದ ಹಿಂದಷ್ಟೇ ಜರುಗಿದ ಕೆಡಿಪಿ ಸಭೆಯಲ್ಲಿ ಬಹಿರಂಗವಾಗಿ ತೋಟಗಾರಿಕೆ ಸಚಿವರು ನಮ್ಮ ಜಿಲ್ಲೆಯವರೇ ಆಗಿರುವುದು ನಮ್ಮ ದುರ್ದೈವ ಎಂದು ಮನಗೂಳಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೇ ಸಭೆಯಲ್ಲಿ ತನ್ನ ಕ್ಷೇತ್ರದ ಜನರಿಗೆ ಕುಡಿಯಲು ನೀರಿಲ್ಲದಿದ್ದರೂ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಿಂದ ಜಿಲ್ಲೆಯ ಇತರೆ ತಾಲೂಕಿಗೆ ಕಾಲುವೆ ಮೂಲಕ ಕೃಷಿಗಾಗಿ ನೀರು ಹರಿಸಲಾಗಿದೆ. ನೀರಾವರಿ ಸಲಹಾ ಸಮಿತಿ ನಿರ್ಣಯಗಳಿಗೆ ವಿರುದ್ಧವಾಗಿ ನೀರು ಬಳಸಿದ್ದೀರಿ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ್ದರು.
ಆರೇಳು ತಿಂಗಳ ಹಿಂದೆ ಬರ ಆಧ್ಯಯನಕ್ಕೆ ಬಂದಿದ್ದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರ ವರ್ತನೆಗೂ ಹರಿಹಾಯ್ದಿದ್ದರು. ಸದಾ ಭೀಕರ ಬರ ಎದುರಿಸುವ ಜಿಲ್ಲೆಯಲ್ಲಿ ಲಿಂಬೆ ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರು ಹಾಕುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿಕೊಳ್ಳುವ ನಮ್ಮ ರೈತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಪ್ಯಾಕೇಜ್ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಸಚಿವ ದೇಶಪಾಂಡೆ ವರದಿ ತರಿಸಿಕೊಳ್ಳುತ್ತೇವೆ ಎಂದು ಹೇಳಿದಾಗ, ಹಲವು ವರ್ಷಗಳಿಂದ ವರದಿ ತರಿಸಿಕೊಳ್ಳುವ ಮಾತಿನಲ್ಲೇ ಕಾಲ ಹರಣ ಮಾಡುತ್ತಿದ್ದೀರಿ. ನಿಮ್ಮಿಂದ ಆಗದಿದ್ದರೆ ಹೇಳಿ ಬಿಡಿ, ಆದರೆ ಸಮೀಕ್ಷೆ, ವರದಿ, ಪ್ರಸ್ತಾವನೆ ಅಂತೆಲ್ಲ ರೈತರನ್ನು ಮೋಸಗೊಳಿಸುವ ಕೆಲಸ ಮಾಡಬೇಡಿ ಎಂದು ಗುಡುಗಿದ್ದರು.
ಆದರೆ ರಾಜ್ಯದಲ್ಲಿ ಪ್ರಸ್ತುತ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉರುಳುವ ಹಂತಕ್ಕೆ ತಂದು ನಿಲ್ಲಿಸಿರುವ ಶಾಸಕರಲ್ಲಿ ಬಹುತೇಕರು ಕೂಡ ಇದೇ ರೀತಿ ಹೇಳಿಕೆ ನೀಡಿದ್ದರು. ಅತೃಪ್ತಿ ಇದೆ, ಪಕ್ಷ ತೊರೆಯಲ್ಲ ಎನ್ನುತ್ತಿದ್ದರು. ಎಲ್ಲೂ ಹೋಗಲ್ಲ ಎನ್ನುತ್ತಲೇ ಇದೀಗ ಸದ್ದಿಲ್ಲದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಕಮಲ ಕೋಟೆಯಲ್ಲಿ ಬಿಜೆಪಿ ಪಟ್ಟಾಭಿಷೇಕಕ್ಕೆ ಮುಂದಾಗಿದ್ದಾರೆ. ಹೀಗಾಗಿ ಯಶಂವತರಾಯಗೌಡ ಆವರ ರಾಜಕೀಯ ನಡೆಯ ಕುರಿತು ಜಿಲ್ಲೆಯಲ್ಲಿ ಕುತೂಹಲ ಮೂಡುವಂತೆ ಮಾಡಿದೆ.