Advertisement

ವರುಣನ ಆರ್ಭಟ

10:49 AM May 23, 2019 | Naveen |

ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಭಾರಿ ಬಿರುಗಾಳಿ ಸಹಿತ ಸುರಿದ ಮಳೆ ಹಾಗೂ ಸಿಡಿಲಿಗೆ ಇಬ್ಬರು ಬಲಿಯಾಗಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. 2 ಎಮ್ಮೆ ಹಾಗೂ 7 ಮೇಕೆ ಸೇರಿ 9 ಜಾನುವಾರುಗಳು ಮೃ್ರತಪಟ್ಟಿವೆ. ಹಲವು ಕಡೆಗಳಲ್ಲಿ ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದರೆ, ಮರಗಳು ನೆಲಕ್ಕುರುಳಿದ್ದು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿ ಜಿಲ್ಲೆಯಲ್ಲಿ ಲಕ್ಷಾಂತರ ರೂ. ಬೆಳೆ ನಷ್ಟ ಸಂಭವಿಸಿದೆ.

Advertisement

ಮಂಗಳವಾರ ರಾತ್ರಿ ಸಿಡಿಲು ಬಡಿದು ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ಕರೆಪ್ಪ ವಿಠuಲ ಹಿರೇಕುರುಬರ (25), ಮುದ್ದೇಬಿಹಾಳ ತಾಲೂಕಿನ ಡೊಂಕಮಡು ಗ್ರಾಮದ ರೇಣುಕಾ ಶಿವರಾಜ್‌ ಕೂಡಲಗಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಿರಾಜ್‌ ಬಾಬುಸಾಬ್‌ ಮರ್ತೂರ ಹಾಗೂ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಕೃಷ್ಣಾ ಮಾರುತಿ ತರಸೆ ಎಂಬವರು ಸಿಡಿಲಿನಿಂದ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೇ ಚಡಚಣ ತಾಲೂಕಿನ ಇಂಚಗೇರಿ, ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಎರಡು ಎಮ್ಮೆಗಳು ಸೇರಿದಂತೆ ಇತರೆಡೆ ಒಂದು ಎಮ್ಮೆ, ಒಂದು ಹೋರಿ, ಎರಡು ಆಕಳು, ನಾಲ್ಕು ಮೇಕೆ, ಆರು ಕುರಿ, ಎರಡು ಕುದುರೆ, ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ 7 ಮೇಕೆಗಳು ಜೀವ ಕಳೆದುಕೊಂಡಿವೆ. ವಿಜಯಪುರ ಹಾಗೂ ಬಬಲೇಶ್ವರ ತಾಲೂಕಿನ 27 ಮನೆಗಳು ಹಾನಿಗಿಡಾಗಿವೆ.

ವಿಜಯಪುರ ತಾಲೂಕಿನ ಮಹಲ್ ಐನಾಪುರ ಗ್ರಾಮದಲ್ಲಿ ವೀರೇಶ ಗೊಬ್ಬೂರು ಎಂಬ ಯುವ ರೈತ 3 ಎಕರೆ ಜಮೀನಿನಲ್ಲಿ ಬೆಳೆಸಿದ್ದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿ ನಷ್ಟವಾಗಿದೆ. 9 ತಿಂಗಳಿಂದ ಟ್ಯಾಂಕರ್‌ ನೀರು ಹಾಕಿ ಬೆಳೆಸಿದ್ದ ಬಾಳೆ ಬೆಳೆ ಕೆಲವೇ ದಿನಗಳಲ್ಲಿ ಕೊಯ್ಲಿಗೆ ಬರುವ ಹಂತದಲ್ಲಿತ್ತು. ಇದೀಗ ತೋಟದಲ್ಲಿ 3,800 ಬಾಳೆ ಗಿಡಗಳು ಸಂಪೂರ್ಣ ನೆಲ ಕಚ್ಚಿದ್ದು, ಈ ಬೆಳೆಯನ್ನೇ ನಂಬಿಕೊಂಡಿದ್ದ ವೀರೇಶ ಸುಮಾರು 8 ಲಕ್ಷ ರೂ. ನಷ್ಟವಾಗಿ ದಿಕ್ಕು ತೋಚದೇ ಕಂಗಾಲಾಗಿದ್ದಾನೆ.

ಮಂಗಳವಾರ ಮಧ್ಯಾಹ್ನದಿಂದಲೇ ಹಲವು ಕಡೆಗಳಲ್ಲಿ ಬಿರುಗಾಳಿ ಬೀಸಲಾರಂಭಿಸಿದ್ದು, ಸಂಜೆ ವೇಳೆಗೆ ವೇಗ ಪಡೆದಿದೆ. ಬಿರುಗಾಳಿ ಹೊಡೆತಕ್ಕೆ ಜಿಲ್ಲೆಯ ಆಲಮೇಲ, ಸಿಂದಗಿ, ವಿಜಯಪುರ, ಚಡಚಣ, ತಿಕೋಟಾ ಭಾಗದ ಹಲವು ಕಡೆಗಳಲ್ಲಿ ಮರಗಳು ನೆಲಕ್ಕುರುಳಿವೆ. ಕೆಲವು ಕಡೆಗಳಲ್ಲಿ ಮುಖ್ಯ ರಸ್ತೆಗಳ ಪಕ್ಕದ ಭಾರಿ ಮರಗಳು ನೆಲಕ್ಕುರುಳಿದ್ದು ರಸ್ತೆ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.

ಬಿರುಗಾಳಿ ಪರಿಣಾಮ ಜಿಲ್ಲೆಯ ಬಹುತೇಕ ಭಾಗದಲ್ಲಿ ಸಂಜೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ವಿಜಯಪುರ ನಗರದಲ್ಲೂ ರಾತ್ರಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ನಗರದಲ್ಲಿ ಬುಧವಾರ ವಿದ್ಯುತ್‌ ಕಣ್ಣಾಮುಚ್ಚಾಲೆ ನಡೆಸಿತು.

Advertisement

ಜಿಲ್ಲೆಯಲ್ಲಿ ಬಿರುಗಾಳಿ ಹಾಗೂ ಮಳೆಗೆ ತೋಟಗಾರಿಕೆ ಬೆಳೆ ಹಾನಿ ಕುರಿತು ಮಾಹಿತಿ ಪಡೆಯುತ್ತಿದ್ದೇವೆ. ನಷ್ಟದ ಕುರಿತು ಕಂದಾಯ ಇಲಾಖೆಗೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದು, ಪ್ರತಿ ಹೆಕ್ಟೇರ್‌ಗೆ 13 ಸಾವಿರ ರೂ. ಪರಿಹಾರ ನೀಡಲು ಅವಕಾಶವಿದೆ. ಇದರ ಹೊರತಾಗಿ ನಮ್ಮ ಇಲಾಖೆಯಿಂದ ನಷ್ಟಕ್ಕೀಡಾದ ರೈತರಿಗೆ ಸರ್ಕಾರದ ತೋಟಗಾರಿಕೆ ಬೆಳೆಗಳ ರಿಯಾಯ್ತಿ ಯೋಜನೆಗಳ ಅನುಷ್ಠಾನದಲ್ಲಿ ಆದ್ಯತೆಯಲ್ಲಿ ಪರಿಗಣಿಸಿ ಸಹಾಯ ಮಾಡಲಾಗುತ್ತದೆ.
ಸಂತೋಷ ಇನಾಮದಾರ
ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next