ವಿಜಯಪುರ: ಕೂಡಗಿ ಬಳಿ ರೈಲ್ವೆ ಸೇತುವೆ ಮಾರ್ಗವಾಗಿ ಹೋಗಿರುವ ಮುಳವಾಡ ಏತ ನೀರಾವರಿ ಕಾಲುವೆ ಕೆಳಗೆ ಬಾಕ್ಸ್ ಪುಸ್ಸಿಂಗ್ ಕಾಮಗಾರಿ ನಡೆಯುತ್ತಿದ್ದು, ಬುಧವಾರ ರೈಲ್ವೆ ಇಲಾಖೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಸ್ಥಳ ವೀಕ್ಷಿಸಿದರು.
ಈ ವೇಳೆ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿದ ರೈತರು, ಸದ್ಯ ಬಾಕ್ಸ್ ಪುಸ್ಸಿಂಗ್ ಕಾಮಗಾರಿಗೆ ಬೃಹತ್ ಕಲ್ಲು ಬಂಡೆ ಅಡ್ಡಿಯಾಗಿದ್ದು ಇದರಿಂದ ಪುಸ್ಸಿಂಗ್ ಕಾಮಗಾರಿ ವಿಳಂಬವಾಗುತ್ತಿದೆ. ಕಲ್ಲು ಬಂಡೆ ತೆರವಿಗೆ ಆಧುನಿಕ ಯಂತ್ರೋಪಕರಣ ಬಳಸದೇ ಸಣ್ಣ ಯಂತ್ರಗಳನ್ನು ಬಳಸುತ್ತಿರುವ ಕಾರಣ ಬಂಡೆ ತೆರವಿಗೆ ಸಮಸ್ಯೆ ಉಂಟಾಗುತ್ತಿದೆ.
ಸ್ಫೋಟಕ ಬಳಸಿ ಕಲ್ಲು ಬಂಡೆಯನ್ನು ತೆರವುಗೊಳಿಸಿದರೆ ತೀವ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಿದೆ. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಬೇಸಿಗೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲಂದಂತಾಗುತ್ತದೆ. ಆದ್ದರಿಂದ ಕೂಡಲೇ ಕಾಮಗಾರಿಗೆ ವೇಗ ಹೆಚ್ಚಿಸಬೇಕೆಂದು ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮಂದಗತಿಯಲ್ಲಿ ನಡೆಸುತ್ತಿರುವ ಕಾಮಗಾರಿಯಿಂದ ಬೇಸಿಗೆ ಸಂದರ್ಭದಲ್ಲಿ ಕಾಲುವೆಗೆ ನೀರು ಹರಿಸುವುದು ಅನುಮಾನವಾಗಿದೆ. ಇದರಿಂದ ಗ್ರಾಮೀಣ ಪ್ರದೇಶ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಗಂಭೀರ ಸ್ವರೂಪದಲ್ಲಿ ಆಗುವ ಭೀತಿ ಇದೆ. ಕಾಮಗಾರಿ ತೀವ್ರಗೊಳಿಸಲು ವಿಳಂಬವಾದರೆ ಕಾಮಗಾರಿ ನಿಲ್ಲಿಸಿ ಕಾಲುವೆಗೆ ನೀರು ಹರಿಸಿ ಅನುವು ಮಾಡಿಕೊಡಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಹಾಗೂ ಕೆಬಿಜಿಎನ್‌ಎಲ್ ಅಧಿಕಾರಿಗಳು ಬೃಹತ ಗಾತ್ರದ ಕಲ್ಲು ಬಂಡೆ ಇರುವುದರಿಂದ ಕಾಮಗಾರಿಗೆ ವಿಳಂಬವಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಕಲ್ಲುಗಳನ್ನು ತೆರವುಗೊಳಿಸಿ ಬಾಕ್ಸ್ ಪುಸ್ಸಿಂಗ್ ಕಾಮಗಾರಿ ಮುಗಿಸಿ ಕಾಲುವೆಗೆ ನೀರು ಹರಿಸಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದರು. ಈ ವೇಳೆ ರೈಲ್ವೆ ಇಲಾಖೆ ಅಧಿಕಾರಿಗಳಾದ ನಳಿನಕುಮಾರ, ಕೆಬಿಜೆಎನ್‌ಎಲ್ ಅಧೀಕ್ಷಕ ಅಭಿಯಂತರ ಬಿ.ಎಸ್.ಪಾಟೀಲ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.