Advertisement

‘ಮಹಾ’ಆಗಮನಕ್ಕೆ ಪ್ರತ್ಯೇಕ ಕ್ವಾರಂಟೈನ್‌

04:17 PM May 22, 2020 | Naveen |

ವಿಜಯಪುರ: ಅಂತರ ರಾಜ್ಯದಿಂದ ಅದರಲ್ಲೂ ಮುಂಬೈ-ಪುಣೆಯಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದವರಿಗೆ ಆದ್ಯತೆ ಮೇಲೆ ಪ್ರತ್ಯೇಕವಾಗಿ ಸಾಂಸ್ಥಿಕ ಕ್ವಾರಂಟೈನ್‌ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು .

Advertisement

ಜಿಲ್ಲೆಯ ಎಲ್ಲ ತಾಲೂಕು ತಹಶೀಲ್ದಾರ್‌, ತಾ.ಪಂ ಇಒ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಕೋವಿಡ್‌ ನಿಗ್ರಹ ಕುರಿತು ವಿಡಿಯೋ ಸಂವಾದದಲ್ಲಿ ಈ ಸೂಚನೆ ನೀಡಿದ ಅವರು, ಹೊರ ರಾಜ್ಯಗಳಿಂದ ಆಗಮಿಸಿದ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡುತ್ತಿದ್ದು, ಇದರಿಂದ ಯಾರೂ ಹೊರಹೋಗದಂತೆ ಎಚ್ಚರಿಕೆ ವಹಿಸಬೇಕು. ಕ್ವಾರಂಟೈನ್‌ ನಿಗಾ ಅವಧಿ ಮುಗಿದ ಬಳಿಕ 15ನೇ ದಿನ ಬಿಡುಗಡೆ ಮಾಡುವ ಮುನ್ನ ಕಡ್ಡಾಯವಾಗಿ ಗಂಟಲು ದ್ರವ ಮಾದರಿ ಪಡೆದು, ನೆಗೆಟಿವ್‌ ವರದಿ ಬಂದ ಬಳಿಕ ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿದರು.

ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿದ ನಂತರ ಹೋಂಕ್ವಾರಂಟೈನ್‌ ನಿಗಾ ಇಡಬೇಕು. ತಪ್ಪದೇ ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್‌ ಬಳಸುವಂತೆ ನೋಡಿಕೊಳ್ಳಬೇಕು. ಕ್ವಾರಂಟೈನ್‌ ವಾಚ್‌ ಆ್ಯಪ್‌ ಮೂಲಕವು ತೀವ್ರ ನಿಗಾ ಇಡಬೇಕು. ತಹಶೀಲ್ದಾರ್‌, ತಾಪಂ ಇಒ, ಬಿಇಒ, ಟಿಎಚ್‌ಒ ಎಲ್ಲರೂ ಸಮನ್ವಯದಿಂದ ಮೇಲ್ವಿಚಾರಣೆ ನಡೆಸಬೇಕು. ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಮುಖ್ಯೋಪಾಧ್ಯಾಯರು ಸೇರಿದಂತೆ ಇತರೆ ಸಿಬ್ಬಂದಿ ತಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸುವಂತೆ ನೋಡಿಕೊಳ್ಳಲು ಸೂಚಿಸಿದರು.

ತಾಲೂಕಾವಾರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಮಾಹಿತಿ ನೀಡದೇ ವಿಡಿಯೋ ಸಂವಾದಕ್ಕೆ ಗೈರು ಹಾಜರಾದ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಬೇಕು. ತೀವ್ರ ಉಸಿರಾಟ ಹಾಗೂ ಕೆಮ್ಮು-ದಮ್ಮಿನಂತಹ ಗಂಭೀರ ಸ್ವರೂಪದ ರೋಗ ಇರುವವರನ್ನು ಗುರುತಿಸುವ ಪರಿಣಾಮಕಾರಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಶಿಷ್ಟಾಚಾರದಂತೆ ಗಂಟಲು ದ್ರವ ಮಾದರಿ ಸಂಗ್ರಹ, ಬಿಡುಗಡೆ, ಕ್ವಾರಂಟೈನ್‌ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ತಹಶೀಲ್ದಾರ್‌, ಇಒ ಮತ್ತು ಟಿಎಚ್‌ಒಗಳು ಉಪ ಸಮಿತಿ ರಚಿಸಿಕೊಂಡು ಬಿಡುಗಡೆ ನಿಯಮ ಪಾಲಿಸಬೇಕು. ಮುಂಬೈ-ಪುಣೆ ಜನರ ಬಗ್ಗೆ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿದಿನ ಪ್ರತಿ ತಾಲೂಕಿನಲ್ಲಿ ತಲಾ 300 ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಬೇಕು ಎಂದರು. ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲಿರುವ ಟಾಸ್ಕ್ಫೋರ್ಸ್‌ ಸಮಿತಿಗಳ ಮೂಲಕ ಹೋಮ್‌ ಕ್ವಾರಂಟೈನ್‌ ಕ್ರಮ, ಮನೆಗಳಿಗೆ ನೋಟಿಸ್‌ ಅಂಟಿಸುವುದು, ಸೀಲ್‌ ಹಾಕಿಸುವುದು ಸೇರಿದಂತೆ ಇನ್ನಿತರ ಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು. ಎಡಿಸಿ ಡಾ| ಔದ್ರಾಮ್‌, ಸೋಮಲಿಂಗ್‌ ಗೆಣ್ಣೂರು, ತಾ.ಪಂ. ಇಒ ಬಿ.ಎಸ್‌. ರಾಠೋಡ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next