Advertisement

ಕ್ವಾರಂಟೈನ್‌ ಕೇಂದ್ರದಲ್ಲಿ ನಿಯಮ ಉಲ್ಲಂಘನೆ

06:01 PM May 28, 2020 | Naveen |

ಮುದ್ದೇಬಿಹಾಳ: ಕೋವಿಡ್ ಸೋಂಕಿನ ಪ್ರಭಾವ ಹೆಚ್ಚಾಗಿರುವ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ರಾಜಸ್ಥಾನ್‌, ದೆಹಲಿ ಭಾಗದಿಂದ ಇಲ್ಲಿಗೆ ಬಂದಿರುವ ವಲಸಿಗರನ್ನು ವಿವಿಧ ಶಾಲೆ, ಕಾಲೇಜು, ಸರ್ಕಾರಿ ಹಾಸ್ಟೇಲ್‌, ಸಮುದಾಯಭವನ ಸೇರಿ ಹಲವೆಡೆ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಆದರೆ, ಕೆಲವು ಕೇಂದ್ರಗಳಲ್ಲಿನ ಜನರು ರಾಜಾರೋಷವಾಗಿ ಹೊರಗಡೆ ತಿರುಗಾಡುತ್ತಿರುವುದು, ಹೊರಗಿನಿಂದ ಊಟ, ಉಪಾಹಾರ ಮುಂತಾದ ಸಾಮಗ್ರಿ ತರಿಸಿಕೊಳ್ಳುತ್ತಿರುವುದು ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

Advertisement

14 ದಿನಗಳ ಕ್ವಾರಂಟೈನ್‌ ಅವಧಿ ನಿಗದಿಪಡಿಸಲಾಗಿದೆ. ಈ ಅವಧಿ ಯಲ್ಲಿ ಯಾರೂ ಕೇಂದ್ರ ಬಿಟ್ಟು ಹೊರಗೆ ಬರುವಂತಿಲ್ಲ. ಬೇರೆ ಜನರೊಂದಿಗೆ ಬೆರೆಯುವಂತಿಲ್ಲ ಎನ್ನುವ ನಿಯಮ ಇದೆ. ಆದರೆ, ಈ ನಿಯಮ ಕೆಲವು ಕೇಂದ್ರಗಳಲ್ಲಿ ಪಾಲನೆ ಆಗುತ್ತಿಲ್ಲದಿರುವುದು ಕಂಡುಬರುತ್ತಿದೆ. ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೇಂದ್ರ ಇದಕ್ಕೊಂದು ಉದಾಹರಣೆಯಾಗಿದ್ದು, ಮಹಾರಾಷ್ಟ್ರದಿಂದ ಬಂದವರ ಕೈ ಮೇಲೆ ಸೀಲ್‌ ಹಾಕಿ ಕ್ಯಾರಂಟೈನ್‌ ಮಾಡಲಾಗಿದೆ. ಇವರು ಕೇಂದ್ರ ಬಿಟ್ಟು ಸಂಚರಿಸುತ್ತಿರುವ ಆರೋಪ ಕೇಳಿಬರುತ್ತಿದೆ. ಕೆಲವರ ಬಂಧುಗಳು ಕೇಂದ್ರಕ್ಕೆ ಬಂದು ನೀರು, ಊಟ, ಉಪಾಹಾರ ಕೊಟ್ಟು ಮರಳಿ ಹೋಗುತ್ತಿದ್ದಾರೆ. ಈ ಕೇಂದ್ರ ಕಾಯುತ್ತಿರುವ ಪೊಲೀಸ್‌, ಹೋಮಗಾರ್ಡ್‌, ಆರೋಗ್ಯ ಸಿಬ್ಬಂದಿಗೂ ಇವರು ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಇವರ ಉಪಟಳದಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಕೆಲವರಂತೂ ತಮಗೆ ಕುಡಿಯಲು ಶುದ್ಧ ನೀರು, ಸ್ನಾನಕ್ಕೆ ನೀರು ಕೊಡುತ್ತಿಲ್ಲ. ಶೌಚಾಲಯ, ಕೋಣೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿಲ್ಲ. ತಡವಾಗಿ ಊಟ, ಉಪಾಹಾರ ಕೊಡಲಾಗುತ್ತಿದೆ. ನಮಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುತ್ತಿಲ್ಲ ಎಂದೆಲ್ಲ ದೂರತೊಡಗಿ ಕೇಂದ್ರದ ಪರಿಸ್ಥಿತಿ ಸರಿ ಇಲ್ಲ ಎನ್ನುವುದನ್ನು ತೋರಿಸುತ್ತಿದ್ದಾರೆ.

ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರೂ ಅಲ್ಲಲ್ಲಿ ಇಂಥ ಘಟನೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿಲ್ಲ. ಕೂಡಲೇ ಸಿಪಿಐ, ತಾಪಂ ಇಒಗೆ ಮಾತನಾಡಿ ಭದ್ರತೆ ಹೆಚ್ಚಿಸುತ್ತೇನೆ. ಬೀಟ್‌ ಪೊಲೀಸರಿಗೂ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸುವೆ. .
ಜಿ.ಎಸ್‌.ಮಳಗಿ,
ತಹಸೀಲ್ದಾರ್‌, ಮುದ್ದೇಬಿಹಾಳ

ಡಿ.ಬಿ.ವಡವಡಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next