Advertisement

ಮಕ್ಕಳ ಸಾವು ಖಂಡಿಸಿ ಪ್ರತಿಭಟನೆ

10:57 AM Jun 26, 2019 | Naveen |

ವಿಜಯಪುರ: ಬಿಹಾರ ಮತ್ತು ಕೇಂದ್ರ ಸರಕಾರಗಳ ನಿರ್ಲಕ್ಷ್ಯದಿಂದಾಗಿ ನಡೆದಿರುವ ಮಕ್ಕಳ ಮಾರಣಹೋಮ ಘಟನೆ ಖಂಡಿಸಿ ಎಸ್‌ಯುಸಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಅಪೌಷ್ಟಿಕತೆಯಿಂದ ಮಕ್ಕಳ ಸಾವಿಗೆ ಕಾರಣವಾಗಿರುವ ಉಭಯ ಸರ್ಕಾರಗಳು ಬಾಧಿತ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಫ‌ಲಕ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭಗವಾನರೆಡ್ಡಿ, ಕೇಂದ್ರದ ಬಿಜೆಪಿ ಸರಕಾರ ಮತ್ತು ಬಿಹಾರದ ಎನ್‌ಡಿಎ ಸಮ್ಮಿಶ್ರ ಸರಕಾರದ ನಿರ್ಲಕ್ಷ್ಯ ಮಕ್ಕಳ ಸಾಮೂಹಿಕ ಮರಣಕ್ಕೆ ಕಾರಣವಾಗಿದೆ. ಬಿಹಾರ ಸರ್ಕಾರದ ಆರೋಗ್ಯ ಸಚಿವರಿಗೆ ರಾಜ್ಯದ ಮಕ್ಕಳ ಆರೋಗ್ಯಕ್ಕಿಂತಲೂ ಕ್ರಿಕೆಟ್ ತಂಡದ ಸ್ಕೋರ್‌ ಬಗ್ಗೆಯೇ ಹೆಚ್ಚು ಚಿಂತೆ. ಆರೋಗ್ಯ ಸಮಾಲೋಚನಾ ಸಭೆಯಲ್ಲಿಯೂ ಇವರು ಕ್ರಿಕೆಟ್ ಸ್ಕೋರ್‌ ಕೇಳುತ್ತಿದ್ದರು ಎಂಬ ವರದಿ ಇವರ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದರು.

ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್‌ ಕೂಡಾ ಇದರ ಬಗ್ಗೆ ತೀವ್ರ ಗಮನ ಹರಿಸಿ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಲ್ಲಿನ ಸರಕಾರ ಲಿಚ್ಚಿ ಹಣ್ಣು ತಿಂದಿರುವುದೇ ಮಕ್ಕಳ ಸಾವಿಗೆ ಕಾರಣ ಎಂದು ಸುಳ್ಳು ಹೇಳುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದೆ. ವಾಸ್ತವದಲ್ಲಿ ಅಲ್ಲಿನ ತಜ್ಞರ ಅಭಿಪ್ರಾಯದ ಪ್ರಕಾರ ಮಕ್ಕಳು ಪೌಷ್ಟಿಕ ಆಹಾರ ಕೊರತೆಯಿಂದ ಮತ್ತು ಆಸ್ಪತ್ರೆಗಳಲ್ಲಿ ಸಕಾಲಿಕ ಉಪಚಾರ ಸಿಗದೆ ಸಾವಿಗೀಡಾಗಿದ್ದಾರೆ ಎಂದು ಎಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ-ರಾಜ್ಯ ಸರಕಾರಗಳು ಎರಡು ಸೇರಿ ದೇಶದ ಜನಗಳ ಕಣ್ಣಿಗೆ ಮಣ್ಣೆರಚುತ್ತಿವೆ ಎಂದು ಹರಿಹಾಯ್ದರು.

ಬಿಹಾರ ರಾಜ್ಯದಲ್ಲಿ ಭೀಕರ ಬಡತನ ಪರಿಸ್ಥಿತಿ ಇದ್ದು, ಬಡ ಕುಟುಂಬಗಳ ಮಕ್ಕಳು ಹೊಟ್ಟೆ ತುಂಬಾ ಆಹಾರ ಸೇವಿಸಲೂ ಸಾಧ್ಯವಾಗದೇ ಕೇವಲ ಲಿಚ್ಚಿ ಹಣ್ಣು ತಿಂದು ಜೀವಿಸುವಂತ ಸ್ಥಿತಿಗೆ ಬಂದಿದೆ. ಸರಕಾರಕ್ಕೆ ಅಲ್ಲಿನ ಕಡುಬಡವರಿಗೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿಲ್ಲ ಎಂಬ ಸಂಗತಿಯೂ ನಾಚಿಕೆಗೇಡು ಸಂಗತಿ. ಸರ್ಕಾರ ಇನ್ನಾದರೂ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಜೊತೆಗೆ ಮೃತ ಮಕ್ಕಳ ಕುಟುಂಬಗಳಿಗೆ ತಲಾ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Advertisement

ಮಲ್ಲಿಕಾರ್ಜುನ ಮಾತನಾಡಿ, ಪ್ರಧಾನ ಮಂತ್ರಿಗಳು ಹಸಿವು ಮುಕ್ತ ಭಾರತ ಮಾಡುತ್ತೇನೆ ಎಂಬ ಮಾತು ಒಣ ಮಾತಾಗಿದ್ದು ವಾಸ್ತವದಲ್ಲಿ ಇಂದಿಗೂ ಕೂಡಾ ಜನತೆಗೆ ಆರೋಗ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತುರ್ತಾಗಿ ಸಹಾಯ ಹಸ್ತ ಚಾಚುವುದನ್ನು ಬಿಟ್ಟು ಯೋಗ ಮಾಡುವುದರಲ್ಲೇ ಮುಳುಗಿರುವುದು ದುರಂತವೇ ಸರಿ ಎಂದರು. ಇವರ ಆಯುಷ್ಮಾನ್‌ ಭಾರತವೂ ದೇಶದ ಕಡು ಬಡಜನತೆಗೆ ಉಪಯೋಗವಾಗುತ್ತಿಲ್ಲ ಎಂದರು.

ಎಸ್‌ಯುಸಿಐನ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶದ ಜನರು ಇಂದಿಗೂ ಹಸಿವಿನಿಂದ ಸಾಯುತ್ತಿದ್ದಾರೆ ಎಂಬುದು ನೋವಿನ ಸಂಗತಿ. ಮತ್ತೂಂದೆಡೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ದೊರಕಲಿಲ್ಲ ಎಂಬುದು ಕೂಡ ದೇಶದ ಆರೋಗ್ಯ ಕ್ಷೇತ್ರಕ್ಕೆ ಹಿಡಿದ ಕನ್ನಡಿ. ಆದ್ದರಿಂದ ದೇಶದ ಎಲ್ಲ ಸರಕರಗಳು ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿಟ್ಟು ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಭರತಕಮಾರ, ಬಾಳು ಜೇವೂರ, ಶಿವಬಾಳಮ್ಮ ಉಪ್ಪಾರ, ಗೀತಾ, ಮುತ್ತುರಾಜ, ರೂಪಾ ಬಿರಾದಾರ, ಸುನಿಲ ಸಿದ್ರಾಮಶೆಟ್ಟಿ, ರಾಹು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next