Advertisement
ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು ಕೇಂದ್ರ ಸರ್ಕಾರದ ಕಾರ್ಮಿಕರ ವಿರೋಧಿ ನೀತಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಬರೆದ ಮನವಿ ಸಲ್ಲಿಸಿದರು.
Related Articles
Advertisement
ಸದರಿ ವೇತನ ಮಸೂದೆ 15ನೇ ಭಾರತೀಯ ಕಾರ್ಮಿಕ ಸಮ್ಮೇಳನದಲ್ಲಿ ಅಂಗೀಕೃತವಾಗಿದ್ದ ವೇತನ ನಿರ್ಧಾರ ಪ್ರಕ್ರಿಯೆ ಮತ್ತು ರಾಪ್ಟಕೋಸ್ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದ್ದ ಹಾಗೂ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನಗಳಲ್ಲಿ ಅಂಗೀಕೃತವಾಗಿದ್ದ ಶೇ. 25 ಹೆಚ್ಚುವರಿ ವೇತನವನ್ನು ನಿರಾಕರಿಸುತ್ತದೆ. ಟ್ರೇಡ್ ಯೂನಿಯನ್ನುಗಳ ಒಬ್ಬ ಪ್ರತಿನಿಧಿಯನ್ನೂ ನೇಮಕ ಮಾಡಿಕೊಳ್ಳದೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಕನಿಷ್ಠ ವೇತನ ನಿಗದಿ ಪಡಿಸಲು ರೂಪಿಸಿದ್ದ ತಜ್ಞರ ಸಮಿತಿಯೂ ಈ ಶಿಫಾರಸುಗಳ ವಿರುದ್ಧವಾಗಿ ಮುಂದುವರಿಯಿತು. ಸರಕಾರ ಕಾರ್ಮಿಕರ ಹಕ್ಕುಗಳನ್ನು ತಿಲಾಂಜಲಿ ಹಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಎಐಯುಟಿಯುಸಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಮಾತನಾಡಿ, ಕೇಂದ್ರ ಸರಕಾರ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನೇ ಅನುಸರಿಸುತ್ತ ಬರುತ್ತಿವೆ. ಕೇವಲ ದೇಶದ ಶ್ರೀಮಂತ ಕಾರ್ಪೋರೇಟ್ ಕಂಪನಿಗಳ ಪ್ರತಿನಿಧಿಗಳಂತೆ ವರ್ತಿಸುತ್ತಿವೆ. ದೇಶದ ಆದಾಯಕ್ಕೆ ಮೂಲ ಕಾರಣವಾದ ಕಾರ್ಮಿಕರ ದುಡಿಮೆ ಯನ್ನು ಕಡೆಗಗಣಿಸಿ ಕಾರ್ಮಿಕರ ಕೂಲಿ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಕಿಡಿ ಕಾರಿದರು.
7ನೇ ವೇತನ ಆಯೋಗವು 2016 ಜನವರಿ 1ರಿಂದ ಜಾರಿಗೆ ಬರುವಂತೆ ಕನಿಷ್ಠ ವೇತನವನ್ನು 18 ಸಾವಿರ ಎಂದು ಘೋಷಿಸಿದ್ದರೂ ಕೇಂದ್ರ ಕಾರ್ಮಿಕ ಸಚಿವರು ಜು. 10ರಂದು ರಾಷ್ಟ್ರೀಯ ಕನಿಷ್ಠ ವೇತನವನ್ನು ಕೇವಲ ಮಾಸಿಕ 4,628 ರೂ. ಎಂದು ಘೋಷಿಸಿದ್ದಾರೆ. ಔದ್ಯೋಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯಸ್ಥಳದ ಸ್ಥಿತಿಗತಿ ಮಸೂದೆ 2019 ಈಗಿರುವ 13 ಪ್ರತ್ಯೇಕ ಕಾರ್ಮಿಕ ಕಾನೂನುಗಳ ಬದಲಾಗಿ ಜಾರಿಗೆ ತರಲಾಗಿದೆ. ಇದು 10ಕ್ಕಿಂತ ಹೆಚ್ಚು ಕೆಲಸಗಾರರಿರುವ ಉದ್ದಿಮೆಗಳಿಗೆ ಮಾತ್ರ ಅನ್ವಯವಾಗುವುದರಿಂದ, ಅಸಂಘಟಿತ ವಲಯ, ಹೊರಗುತ್ತಿಗೆ ಮತ್ತು ಗುಡಿ ಕೈಗಾರಿಕೆಗಳಲ್ಲಿ ದುಡಿಯುವ ದೇಶದ ಶೇ. 90ಕ್ಕೂ ಹೆಚ್ಚು ಕಾರ್ಮಿಕರು ಈ ಮಸೂದೆಯ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಅಸಮಾಧಾನಕ್ಕೆ ಕಾರಣವನ್ನು ವಿವರಿಸಿದರು.
ಅಂಗನವಾಡಿ ರಾಜ್ಯ ಉಪಾಧ್ಯಕ್ಷೆ ಭಾರತಿ ವಾಲಿ ಮಾತನಾಡಿದರು. ಕಾರ್ಮಿಕ ಮುಖಂಡರಾದ ಗಂಟೆಪ್ಪಗೋಳ ಬ್ಯಾಂಕ್‌ನ ದ್ಯಾಮಣ್ಣ ಬಿರಾದಾರ, ಅಂಬಿಕಾ ವಳಸಂಗ, ಅನಿತಾ ರಾಠೊಡ, ಅಕಲಕಬಾನು, ಶಾರಾದ, ಸಂತೋಷ, ಅಖಂಡೇಶ, ಮಲ್ಲಿಕಾರ್ಜುನ ಮಾದರ, ಎಂ.ಕೆ.ಚಳ್ಳಗಿ, ಮಲಿಕಸಾಬ ಟಕ್ಕಳಕಿ, ಸುಮಿತ್ರಾ ಗೊಣಸಗಿ ಈರಾಬಾಯಿ ಹಜೇರಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.