ವಿಜಯಪುರ: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ವಿಜಯಪುರ ಜಿಲ್ಲೆಯ ವೈದ್ಯರಿಗೆ ನೆರವಾಗಲು ಸರ್ಕಾರ ಶೀಘ್ರವೇ 1400 ಪರ್ಸನಲ್ ಪ್ರೋಟೆಕ್ಷನ್ ಇಕ್ವಿಪ್‌ಮೆಂಟ್ (ಪಿಪಿಇ) ಕಿಟ್, 40 ಟ್ರೀಪಲ್ ಮಾಸ್ಕ್, 35 ಸಾವಿರ ಹೈಡ್ರಾಕ್ಸಿಕ್ಲೋರೋಕ್ವೀನ್ ಮಾತ್ರೆ ಮತ್ತು ಗಂಟಲು ದ್ರವ ಸಂಗ್ರಹಕ್ಕೆ ಅಗತ್ಯ ಇರುವ ವೈರಲ್ ಟ್ರಾನ್ಸ್‌ಪೋರ್ಟ್ ಮಿಡಿಯಮ್ (ವಿಟಿಎಂ) 13 ಕಿಟ್ ಪೂರೈಸಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ್ ತಿಳಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕೊರೊನಾ ರೋಗದ ವಿರುದ್ಧ ಹೋರಾಟದಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಅನೇಕ ಕ್ರಮಗಳು ಪ್ರಶಂಸನಾರ್ಹವಾಗಿವೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಡೆಸಿದ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿ ಕಾರಿ ವೈ.ಎಸ್.ಪಾಟೀಲ ಅವರ ಕೋರಿಕೆಯಂತೆ ಕ್ಲೋರೋಕ್ವೀನ್ ಮಾತ್ರೆ ಸೇರಿದಂತೆ ಕೊರೊನಾ ವಿರುದ್ಧದ ಹೋರಾಟಕ್ಕೆ ಅಗತ್ಯ ಇರುವ ಎಲ್ಲ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸಮ್ಮತಿಸಿದೆ. ಈ ಕುರಿತು ಅಗತ್ಯ ವರದಿ ಸಲ್ಲಿಸುವಂತೆ ಸೂಚಿಸಿದರು.
ಭವಿಷ್ಯದಲ್ಲಿ ಕೊರೊನಾ ರೋಗದ ವಿರುದ್ಧ ಹೋರಾಡಲು ಸನ್ನದ್ಧವಾಗಿರಬೇಕು. ಫೀವರ್ ಕ್ಲಿನಿಕ್, ಕ್ವಾರಂಟೈನ್ ಸೆಂಟರ್, ಸೂಪರ್‌ವೈಜಡ್ ಐಸೋಲೇಶನ್ ಸೆಂಟರ್ ಮತ್ತು ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಇರುವ ಸಿದ್ಧತೆ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು. ಜಿಲ್ಲೆಯಾದ್ಯಂತ ಪಡಿತರ ಹಂಚಿಕೆ, ತರಕಾರಿ ಹಾಗೂ ಅಗತ್ಯ ವಸ್ತುಗಳ ಮಾರಾಟಕ್ಕೆ ಕೃಷಿ, ಕೃಷಿ ಪೂರಕ ಚಟುವಟಿಕೆ, ಜೀವನಾವಶ್ಯಕ ವಸ್ತುಗಳಿಗೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಒಣದ್ರಾಕ್ಷಿಗೆ ಅವಶ್ಯಕತೆ ಇರುವ ಡಿಪ್ಪಿಂಗ್ ಆಯಿಲ್ ಕುರಿತು ಸಮಗ್ರ ವರದಿ ಸಲ್ಲಿಸಬೇಕು. ಜಿಲ್ಲೆಯ ಗಡಿಭಾಗಗಳಲ್ಲಿ ತೀವ್ರ ನಿಗಾವಹಿಸಬೇಕು ಎಂದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಶಬ್ -ಎ-ಬರಾತ್ ಮತ್ತು ಶುಭ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳದಂತೆ ಜಿಲ್ಲಾಡಳಿತ ಮಾಡಿರುವ ಮನವಿಗೆ ಎಲ್ಲ ಧರ್ಮಿಯರು ಸಹಕಾರ ನೀಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಸರ್ಕಾರಿ ಜಿಲ್ಲಾ ಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಪ್ರಾಥಮಿಕ ಹಾಗೂ ಸಿವಿಲ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಡಯಾಲಿಸಿಸ್ 80 ರೋಗಿಗಳ ಮ್ಯಾಪಿಂಗ್ ಸಹ ಮಾಡಲಾಗುತ್ತಿದೆ. ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಆನ್‌ಲೈನ್ ಟ್ರೇಡಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ. ತೋಟಗಾರಿಕಾ, ಕೃಷಿ ಬೆಳೆಗಳ ಸಾಗಾಣಿಕೆ-ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ಬೇಸಿಗೆ ಹಂಗಾಮಿನ ಸಂದರ್ಭದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಲು ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನುಪಮ್ ಅಗರವಾಲ್, ಎಡಿಸಿ ಡಾ| ಔದ್ರಾಮ್, ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ|
ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಡಾ| ಸರ್ಜನ್ ಶರಣಪ್ಪ ಕಟ್ಟಿ ಇತರರು ಉಪಸ್ಥಿತರಿದ್ದರು.