ವಿಜಯಪುರ: ಕೋಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಹತ್ಯೆ ಖಂಡಿಸಿ ಐಎಂಎ ಕರೆ ಮೇರೆಗೆ ಶನಿವಾರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ.
ವಿಜಯಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಆರೋಗ್ಯ ಸೇವೆಯ ಹೊರತಾಗಿ ಹೊರ ರೋಗಿಗಳ ಸೇವೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ವಿಧೀಸಬೇಕು ಎಂಬ ಒತ್ತಾಯದ ಮೇರೆಗೆ ಐಎಂಎ ಕರೆ ನೀಡಿರುವ ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6 ರ ವರೆಗೆ 24 ಗಂಟೆಗಳ ಕಾಲ ಹೊರ ರೋಗಿಗಳ ಆರೋಗ್ಯ ಸೇವೆ ಸ್ಥಗಿತಕ್ಕೆ ಕರೆ ನೀಡಿದೆ.
ಐಎಂಎ ಕರೆ ಮೇರೆಗೆ ವಿಜಯಪುರ ಜಿಲ್ಲೆಯಲ್ಲೂ ಸಂಘಟನೆ ಜಿಲ್ಲಾಧ್ಯಕ್ಷ ಡಾ. ರವಿ ಬಿರಾದಾರ ನೇತೃತ್ವದಲ್ಲಿ ಜಿಲ್ಲೆಯ 734 ಖಾಸಗಿ ಆಸ್ಪತ್ರೆಯ ಹೊರ ರೋಗಿಗಳ ಸೇವೆಯನ್ನು ಸಂಪೂರ್ಣ ಬಂದ್ ಮಾಡಿವೆ. ಆದರೆ ರೋಗಿಗಳ ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ತೊಂದರೆ ಇಲ್ಲ ಎಂದು ವೈದರು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತವಾಗಿದ್ದರೂ ಜಿಲ್ಲೆಯ ಸರ್ಕಾರಿ 92 ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸೇವೆಗೆ ಯಾವುದೇ ಸಮಸ್ಯೆ ಆಗದಂತೆ ಎಂದಿನಂತೆ ಮುಂದುವರೆದಿದೆ.
ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಶನಿವಾರ ಆರೋಗ್ಯ ಸೇವೆಯ ಹೆಚ್ಚಿನ ಒತ್ತಡ ಬಿದ್ದಿದೆ.