Advertisement
ಅದು ಅರವತ್ತರ ದಶಕ. ಪೇಜಾವರ ಶ್ರೀಗಳು ಅಖೀಲ ಭಾರತ ಮಾಧ್ವ ಮಹಾ ಮಂಡಳ ಅಧ್ಯಕ್ಷರಾಗಿದ್ದು, ವಿಜಯಪುರ ಜಿಲ್ಲೆಯ ವಿ.ಬಿ. ನಾಯಕ ಉಪಾಧ್ಯಕ್ಷರಾಗಿದ್ದರು. ಶ್ರೀಗಳು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೈದ್ರಾಬಾದ್‌ನಲ್ಲಿ ಮಾಧ್ವ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶ್ರೀಗಳನ್ನು ವಿ.ಬಿ. ನಾಯಕ ವಿಜಯಪುರ ಜಿಲ್ಲೆಗೆ ಬರುವಂತೆ ಆಹ್ವಾನ ನೀಡಿದ್ದರು. ಸ್ಥಳೀಯ ಮಾಧ್ವ ಸಮಾಜದ ಪ್ರಮುಖರ ಕೋರಿಕೆ ಮೇರೆಗೆ 1964ರಲ್ಲಿ ಮೊದಲ ಬಾರಿಗೆ ಗುಮ್ಮಟನಗರಿ ಪುರ ಪ್ರವೇಶ ಮಾಡಿದ್ದರು. ಅಲ್ಲಿಂದ ಬಸವನಾಡಿನೊಂದಿಗೆ ಆರಂಭಗೊಂಡ ಶ್ರೀಗಳ ನಂಟು ಈವರೆಗೂ ಮುಂದುವರಿದಿತ್ತು.
Related Articles
Advertisement
ಶ್ರೀಕೃಷ್ಣ ಮಠ ನಿರ್ಮಾಣ : 1994ರಲ್ಲಿ ವಿಶ್ವೇಶ ತೀರ್ಥರು ಪೇಜಾವರ ಮಠಕ್ಕೆ ಪೀಠಾಧೀಶರಾಗಿ 60 ವಸಂತ ವರ್ಷ ಪೂರ್ಣಗೊಂಡ ಸ್ಮರಣೆಗೆ ನಗರದಲ್ಲಿ ಪೀಠಾರೋಹಣದ 60ನೇ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ವಿಜಯಪುರ ನಗರ ಶಾಸಕರಾಗಿದ್ದ ಬಸನಗೌಡ ಪಾಟೀಲರು ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾರ್ಯಕ್ರಮವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದಲ್ಲದೇ ಈ ಕಾರ್ಯಕ್ರಮಕ್ಕೆ ಭಕ್ತರು, ಸಾರ್ವಜನಿಕರು ನೀಡಿದ್ದ ದೇಣಿಗೆ ಹಣದಲ್ಲಿ ಸುಮಾರು 5 ಲಕ್ಷ ರೂ. ಉಳಿದಿತ್ತು. ಈ ಹಣವನ್ನು ಸ್ವಾಗತ ಸಮಿತಿ ಶ್ರೀಗಳಿಗೆ ಸಮರ್ಪಿಸಲು ಮುಂದಾದಾಗ ಅದನ್ನು ಪಡೆಯದ ಶ್ರೀಗಳು ಠೇವಣಿ ಇರಿಸಿ ನಗರದಲ್ಲಿ ಕೃಷ್ಣ ಮಠ ನಿರ್ಮಾಣಕ್ಕೆ ನೀಡುವುದಾಗಿ ಘೋಷಿಸಿದ್ದರು.
ನಂತರ ಶಾಸಕ ಯತ್ನಾಳ ಅವರು ಹಾಸ್ಟೆಲ್ ನಿರ್ಮಾಣಕ್ಕೆ 10 ಲಕ್ಷ ರೂ. ನೀಡಲು ಮುಂದಾದಾಗ ಭಕ್ತರ ಕೋರಿಕೆ ಮೇರೆಗೆ ಸದರಿ ಹಣವನ್ನು ಕೃಷ್ಣ ಮಠ ನಿರ್ಮಾಣಕ್ಕೆ ಬಳಸಲು ಮುಂದಾದರು. ಆಗ ಶ್ರೀಗಳು ತಮ್ಮ ಬಳಿ ಅದಾಗಲೇ ಇದ್ದ 5 ಲಕ್ಷ ರೂ. ಹಾಗೂ ಭಕ್ತರಿಂದ ದೇಣಿಗೆ ಸಂಗ್ರಹಿಸಿ ಸುಮಾರು 25 ಲಕ್ಷ ರೂ. ಹಣ ನೀಡುವ ಮೂಲಕ ಗುಮ್ಮಟ ನಗರದಲ್ಲೂ 2007ರಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಕಾರಣವಾಯಿತು.
ನಗರದಲ್ಲಿ 75ನೇ ಚಾತುರ್ಮಾಸ: ಶ್ರೀಗಳು ತಮ್ಮ 75ನೇ ವರ್ಷದ ಚಾತುರ್ಮಾಸವನ್ನು ವಿಜಯಪುರ ನಗರದಲ್ಲೇ ಆಚರಿಸಿಕೊಳ್ಳುವ ಮೂಲಕ ಈ ನೆಲದೊಂದಿಗೆ ತಾವು ಹೊಂದಿದ್ದ ಅವಿನಾಭಾವಬಾಂಧವ್ಯವನ್ನು ಸ್ಮರಣೀಯವಾಗಿಸಿದ್ದರು. ಚಾತುರ್ಮಾಸ ಸಂದರ್ಭದಲ್ಲಿ 48 ದಿನಗಳ ಕಾಲ ನಗರದಲ್ಲಿ ಧರ್ಮ ಪ್ರಸಾರ, ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಕಳೆದ ವರ್ಷ ಜಿಲ್ಲೆಯ ಕಗ್ಗೊàಡ ಗ್ರಾಮದಲ್ಲಿ ಜರುಗಿದ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ
ಪೇಜಾವರ ಮಠಾಧೀಶ ವಿಶ್ವೇಶ್ವರ ಶ್ರೀಗಳು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯ ಜನರ ವಿಶ್ವಾಸ ಗಳಿಸುವ ಹಾಗೂ ಇದೇ ಸಂಕಲ್ಪದೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಘೋಷಣೆ ಮಾಡಿದ್ದರು. ಬಹುತೇಕ ಇದೇ ಭೇಟಿ ಶ್ರೀಗಳು ಜಿಲ್ಲೆಗೆ ನೀಡಿದ ಕೊನೆಯ ಭೇಟಿಯಾಗಿತ್ತು. ಗಣ್ಯರೊಂದಿಗೆ ಅವಿನಾಭಾವ ನಂಟು: ಜಿಲ್ಲೆಯಲ್ಲಿ ಕೇವಲ ವಿಪ್ರ ಸಮುದಾಯದೊಂದಿಗೆ ಮಾತ್ರವಲ್ಲ ಇತರೆ ಸಮುದಾಯದ ಜನರೊಂದಿಗೆ ಪೇಜಾವರ ಮಠಾಧೀಶರು ಆಪ್ತ ಬಾಂಧವ್ಯ ಇರಿಸಿಕೊಂಡಿದ್ದರು. ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು. ಈ ಕಾರಣಕ್ಕಾಗಿಯೇ ನಂದಿ ಸಕ್ಕರೆ ಕಾರ್ಖಾನೆ 25ನೇ ವರ್ಷದ ಸಮಾರಂಭದಲ್ಲಿ ಪಾಲ್ಗೊಳ್ಳುವ ವಿಷಯದಲ್ಲಿ ದಿನಾಂಕ ಹೊಂದಾಣಿಕೆ ಆಗದಿದ್ದಾಗ ಸಂಘಟಕರು ಗೊಂದಲಕ್ಕೀಡಾಗಿದ್ದರು. ಆಗ ಪೇಜಾವರ ಶ್ರೀಗಳೇ ಸಿದ್ದೇಶ್ವರ ಶ್ರೀಗಳೊಂದಿಗೆ ಮಾತನಾಡಿದಾಗ, ನಾನು ನನ್ನ ಎಲ್ಲ ಕಾರ್ಯಕ್ರಮಗಳನ್ನು ಬದಿಗಿರಿಸಿ, ನೀವು ಪಾಲ್ಗೊಳ್ಳುವ ದಿನದಂದೇ ಪಾಲ್ಗೊಳ್ಳುವುದಾಗಿ ಹೇಳಿ ಸ್ನೇಹಕ್ಕೆ ಸಾಕ್ಷಿಯಾಗಿದ್ದರು. ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕ, ಹಾಲಿ ಸಂಸದ ರಮೇಶ ಜಿಗಜಿಣಗಿ, ನಗರ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಉದ್ಯಮಿ ಬಾಬುಗೌಡ ಬಿರಾದಾರ ಸೇರಿದಂತೆ ಹಲವು ಗಣ್ಯರೊಂದಿಗೆ ವಿಶೇಷ ಆಪ್ತತೆ ಹೊಂದಿದ್ದರು. ಅಷ್ಟರ ಮಟ್ಟಿಗೆ ಅರ್ಧ ಶತಮಾನಕ್ಕಿಂತ ಹಿಂದಿನಿಂದಲೂ ಆರಂಭಗೊಂಡಿದ್ದ ಪೇಜಾವರ ಮಠಾಧೀಶ ವಿಶ್ವೇಶ್ವರ ಶ್ರೀಗಳ ನಂಟು, ಕಳೆದ ವರ್ಷದವರೆಗೂ ನಿರಂತರವಾಗಿತ್ತು. ಶ್ರೀಗಳು
ಕೇವಲ ಧರ್ಮ ಕಾರ್ಯಕ್ರಮಗಳಲ್ಲದೇ ಸಮಾಜಮುಖೀ ಕೆಲಸಗಳೊಂದಿಗೂ ಸರ್ವ ಸಮುದಾಯದ ಜನರ ಪ್ರೀತಿ ಗಳಿಸಿ, ಮನೆ-ಮನಗಳಲ್ಲಿ ಚಿರಸ್ಥಾಯಿಯಾಗಿದ್ದರು. ಜಿ.ಎಸ್. ಕಮತರ