ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣಾ ಚಟುವಟಿಕೆ ಬಿರುಸುಗೊಂಡ ಬೆನ್ನಲ್ಲೇ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ತಕರಾರು ಅರ್ಜಿ ಸಲ್ಲಿಸಲಾಗಿದೆ. ಪರಿಣಾಮ ಚುನಾವಣಾ ನಡೆಯುವುದು ಅನುಮಾನ ಮೂಡಿಸಿದೆ.
ಅವೈಜ್ಞಾನಿಕ ವಾರ್ಡ್ ವಿಂಗಡಣೆ, ಮೀಸಲು ಪ್ರಕಟಣೆಯಲ್ಲಿ ತಾರತಮ್ಯ, ಮಹಿಳಾ ಮೀಸಲಿನಲ್ಲಿ ಖೋತಾ ಸೇರಿದಂತೆ ಹಲವು ಲೋಪಗಳಿಂದ ಕೂಡಿರುವ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಸಲ್ಲಿಸಿರುವ ತಕರಾರು ಅರ್ಜಿ ಹೈಕೋರ್ಟಿನಲ್ಲಿ ವಿಚಾರಣೆ ಬಂದಿದೆ.
ಗುರುವಾರ ತಕರಾರು ಅರ್ಜಿ ಅಂತಿಮ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಮಹತ್ವದ ಪ್ರಕರಣದ ಕುರಿತು ತೀವ್ರ ಕುತೂಹಲ ಮೂಡಿಸಿದೆ. 35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಚುನಾವಣಾ ಆಯೋಗದ ಅಧಿಸೂಚನೆ ಮೇರೆಗೆ ಅ.10ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, 28 ರಂದು ಮತದಾನಕ್ಕೆ ದಿನವನ್ನೂ ನಿಗದಿ ಮಾಡಿದೆ.
ಪರಿಷ್ಕೃತ ವಾರ್ಡ್ ಮೀಸಲು ಅವೈಜ್ಞಾನಿಕ ಎಂಬ ಕಾರಣಕ್ಕೆ ತಡೆಯಾಜ್ಞೆ ನೀಡುವಂತೆ ಕಲಬುರಗಿ ಹೈಕೋರ್ಟಿಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ. ಪಾಲಿಕೆಯ ಮಾಜಿ ಸದಸ್ಯ ಮೈನುದ್ದೀನ ಬಿಳಗಿ, ಇದ್ರೂಸ್ ಭಕ್ಷಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ದೀಪಾ ಕುಂಬಾರ ಇವರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಸದರಿ ಅರ್ಜಿಯ ಕುರಿತು ಕಲಬುರಗಿ ಹೈಕೋರ್ಟಿಗೆ ಸೆಪ್ಟೆಂಬರ್ 27 ರಂದು ತಕರಾರು ಅರ್ಜಿ ಸಲ್ಲಿಸಿದ್ದು, 202466/22 ತಕರಾರು ಅರ್ಜಿ ಕುರಿತು ಎರಡು ಬಾರಿ ವಿಚಾರಣೆಯೂ ನಡೆದಿದ್ದು, ಬೆಂಗಳೂರಿನ ಹಿರಿಯ ನ್ಯಾಯವಾದಿ ಕೆ.ದಿವಾಕರ ಎಂ.ಎ. ದಖನಿ ಹಾಗೂ ಎಸ್.ಎಸ್. ಮಮದಾಪೂರ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದು, ವಿಚಾರಣೆ ವೇಳೆ ತಕರಾರು ಅರ್ಜಿಗೆ ಅಗತ್ಯ ಇರುವ ದಾಖಲೆ ಸಮೇತ ವಾದ ಮಂಡಿಸಿದ್ದಾರೆ.
ಚುನಾವಣಾ ಆಯೋಗ ಹಾಗೂ ವಿಜಯಪುರ ಮಹಾನಗರ ಪಾಲಿಕೆಯ ಪರವಾಗಿ ನ್ಯಾಯವಾಗಿ ಅಮರೇಶ ರೋಝಾ ವಾದ ಮಂಡಿಸಿದ್ದು, ಈಗಾಗಲೇ ಎರಡು ಬಾರಿ ನಡೆದಿರುವ ವಿಚಾರಣೆ ನಡೆದಿದೆ.
ಇಂದಿನ ವಿಚಾರಣೆಗೆ ಸರ್ಕಾರದ ಪರವಾಗಿ ರಾಜ್ಯ ಅಡ್ವೋಕೇಟ್ ಜನರಲ್ ಹಾಜರಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರದ ಪರವಾಗಿ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ವಾದ ಮಂಡಿಸು ಸಾಧ್ಯತೆ ಇದೆ.
ಇಂದು ಮಧ್ಯಾಹ್ನದ ವೇಳೆಗೆ ಅಂತಿಮ ವಿಚಾರಣೆ ನಡೆದು, ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಇದ್ದು, ಎಲ್ಲರ ಚಿತ್ರ ಕಲಬುರಗಿ ಹೈಕೋರ್ಟ್ ನತ್ತ ನೆಡುವಂತೆ ಮಾಡಿದೆ.
ಇದನ್ನೂ ಓದಿ : ಬಿ.ಜಿ.ಕೆರೆಯಿಂದ ಪಾದಯಾತ್ರೆ ಆರಂಭ: ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೆವಾಲಾ ಸಾಥ್