ವಿಜಯಪುರ: ಮಕ್ಕಳು ಧನಾತ್ಮಕ ರೀತಿಯಲ್ಲಿ ಪ್ರೇರಣೆ ಪಡೆದು ಉತ್ತಮ ಸಾಧನೆ ಮಾಡಿದ್ದಲ್ಲಿ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಜಿಪಂ ಸಿಇಒ ಗೋವಿಂದರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಸರಕಾರಿ ಬಾಲಕರ ಬಾಲಮಂದಿರದಲ್ಲಿ ಹಮ್ಮಿಕೊಂಡಿದ್ದ ಶಾಶ್ವತ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಮಾತನಾಡಿ, ಸರಕಾರದಿಂದ ನಡೆಯುವ ವಿವಿಧ ವಸತಿ ನಿಲಯಕ್ಕಿಂತ ವಿಭಿನ್ನವಾಗಿ ಬಾಲಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಯ ಮಕ್ಕಳು ಸಹ ವಿಭಿನ್ನವಾಗಿ ಸಾಧನೆ ಮಾಡಿ ಸಮಾಜಕ್ಕೆ ಪ್ರೇರಣಾದಾಯಕ ಪ್ರಜೆಗಳಾಗಿ ಬದುಕಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾ ಧಿಕಾರಿ ನಿರ್ಮಲಾ ಸುರಪುರ, ಜಿಲ್ಲೆಯ 3 ಬಾಲಮಂದಿರಗಳು ಮಕ್ಕಳ ಸಂರಕ್ಷಣೆ ಹಾಗೂ ವಿಕಾಸಕ್ಕೆ ಅಗತ್ಯ ಇರುವ ವಿವಿಧ ಚಟುವಟಿಕೆ ಹಮ್ಮಿಕೊಳ್ಳುತ್ತ ಬರುತ್ತಿವೆ. ಇದಲ್ಲದೇ ಬಾಲಮಂದಿರಕ್ಕೆ ಶಾಶ್ವತ ಚಿತ್ರಕಲಾ ಪ್ರದರ್ಶನದ ಮೂಲಕ 35ಕ್ಕೂ ಹೆಚ್ಚು ಕಲಾಕೃತಿ ದಾನವಾಗಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿ ಸದಸ್ಯ ರಮೇಶ ಚವ್ಹಾಣ, ಹಿರಿಯ ಕಲಾವಿದ ಪಿ.ಎಸ್. ಕಡೇಮನಿ ಇತರರು ವೇದಿಕೆ ಮೇಲಿದ್ದರು. ಇದೇ ಸಂದರ್ಭದಲ್ಲಿ ಬಾಲಮಂದಿರದ ನಿವಾಸಿ ಮಗುವಿನ ಹುಟ್ಟುಹಬ್ಬ ಆಚರಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಎಲ್ಲ 40 ಕಲಾವಿದರಿಗೆ ಅಬಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ವೀಕ್ಷಣಾಲಯದ ಪರಿವೀಕ್ಷಣಾಧಿಕಾರಿ
ಇಂದುಮತಿ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗುರುರಾಜ ಇಟಗಿ ನಿರೂಪಿಸಿದರು. ಸರಕಾರಿ ಬಾಲಮಂದಿರ ಅಧೀಕ್ಷಕ ಬಸವರಾಜಜಿಗಳೂರ ಸ್ವಾಗತಿಸಿದರು. ಮೌನೇಶ
ಪೋತದಾರ ವಂದಿಸಿದರು.