Advertisement

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

11:35 PM Nov 25, 2024 | Team Udayavani |

ಕೋಟ: ಕರಾವಳಿಯ ಹಿರಿಯ ಸಾಂಪ್ರದಾಯಿಕ ಹರಕೆ ಕಂಬಳಗಳಲ್ಲಿ ಒಂದಾದ ಬ್ರಹ್ಮಾವರ ತಾಲೂಕಿನ ಯಡ್ತಾಡಿ ಕಂಬಳಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಈ ಕಂಬಳ ಗದ್ದೆ ಸುಮಾರು 3 ಎಕ್ರೆ ವಿಸ್ತೀರ್ಣ ಹೊಂದಿದ್ದು, ಯಡ್ತಾಡಿ ಹೆಗ್ಡೆಯವರ ಮನೆಯವರ ಯಜ ಮಾನಿಕೆಯಲ್ಲಿ ನಡೆಯುತ್ತದೆ.

Advertisement

ಹಿಂದೆ ಜಾನುವಾರುಗಳಿಗೆ ಏನಾದರೂ ಸಮಸ್ಯೆಯಾದರೆ ಈ ಕಂಬಳದಲ್ಲಿ ಹರಕೆ ಸಲ್ಲಿಸುತ್ತೇನೆ ಎಂದು ಕೋರಿಕೆ ಸಲ್ಲಿಸುತ್ತಿದ್ದರು. ಇದರಿಂದ ಜಾನುವಾರುಗಳ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ಎಂಬ ವಿಶ್ವಾಸವಿತ್ತು. ಅವುಗಳನ್ನು ಕಂಬಳದ ದಿನ ಗದ್ದೆಗೆ ಪ್ರದಕ್ಷಿಣೆ ಹಾಕಿಸಲಾಗುತ್ತಿತ್ತು. ಕೋಣಗಳಾದರೆ ಓಡಿಸಿ ಹರಕೆ ತೀರಿಸುತ್ತಿದ್ದರು.

ಅರಸೊತ್ತಿಗೆ ರೀತಿಯಲ್ಲಿ ಪಟ್ಟ
ಹೆಗ್ಡೆಯವರ ಮನೆಯಲ್ಲಿ ಹಿರಿಯ ರೋರ್ವರಿಗೆ ಪಟ್ಟ ಕಟ್ಟಲಾಗುತ್ತದೆ. ಪಟ್ಟದ ಹೆಗ್ಡೆಯವರು ಕಂಬಳದ ಸಂದರ್ಭ ಒಂದಷ್ಟು ನಿಯಮ ಪಾಲಿಸಬೇಕು. ಕಂಬಳದ ದಿನ ಮೈಸೂರು ಪೇಟೆ, ರೇಷ್ಮೆ ಪಂಚೆತೊಟ್ಟು ಮನೆಯ ಹೆಬ್ಟಾಗಿಲಿನಲ್ಲಿ ಪಾರಂಪರಿಕವಾಗಿ ಬಂದ ಪೀಠದಲ್ಲಿ ಕುಳಿತುಕೊಳ್ಳುತ್ತಾರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಪ್ರಧಾನ ದೈವವಾದ ನಂದಿಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕಂಬಳಕ್ಕೆ ಚಾಲನೆ ನೀಡ ಲಾಗುತ್ತದೆ. ದೇವರ ಪ್ರಸಾದವನ್ನು ಜಾನುವಾರುಗಳಿಗೆ ಹಾಕುವುದರಿಂದ ಒಂದು ವರ್ಷ ಯಾವುದೇ ಸಮಸ್ಯೆ ಬಾರದೆಂಬುದು ನಂಬಿಕೆ.

ಎಲ್ಲ ಕಂಬಳಗಳಲ್ಲಿ ಮನೆಯ ಕೋಣಗಳನ್ನು ಗದ್ದೆಗಿಳಿಸಿ ಕಂಬಳಕ್ಕೆ ಚಾಲನೆ ನೀಡುವುದು ಪದ್ಧತಿ. ಆದರೆ ಇಲ್ಲಿ ಗಾಣಿಗರ ಎತ್ತನ್ನು ಗದ್ದೆಗಿಳಿಸಿ ಕಂಬಳಕ್ಕೆ ಚಾಲನೆ ನೀಡುವುದು ಇಲ್ಲಿನ ಸಂಪ್ರದಾಯ. ಬಳಿಕ ಬಿಲ್ಲವರ ಕೋಣವನ್ನು, ಮತ್ತೆ ಮನೆಯ ಕೋಣವನ್ನು ಇಳಿಸ ಲಾಗುತ್ತದೆ. ಇಂದು ಎತ್ತುಗಳು ಅಪ ರೂಪವಾದರೂ ಕಂಬಳದ ದಿನ ಎಲ್ಲಿಂ ದಾದರೂ ಎತ್ತನ್ನು ಹುಡುಕಿ ತಂದು ಈ ಭಾಗದ ಗಾಣಿಗ ಸಮಾಜದವರು ಗದ್ದೆಗಿಳಿಸುತ್ತಾರೆ. ಹಂದೆ ಮನೆತನದ ಕೋಣಗಳು ಭಾಗವಹಿಸುವಿಕೆಗೂ ವಿಶೇಷ ಗೌರವ ಇಲ್ಲಿದೆ.

ಪಾರಂಪರಿಕ ಆಚರಣೆ ಯನ್ನು ಮುಂದುವರಿಸಿದ್ದೇವೆ. ಭಕ್ತರು ಭಕ್ತಿ, ಪ್ರೀತಿಯಿಂದ ಭಾಗವಹಿಸುತ್ತಾರೆ.
ವಿಟ್ಠಲ ಹೆಗ್ಡೆ, ಪಟ್ಟದ ಹೆಗ್ಡೆಯವರು, ಯಡ್ತಾಡಿ ಕಂಬಳ

Advertisement

ಪಿಲಿಕುಳ: ಇಂದು ತಜ್ಞರ ಭೇಟಿ?
ಮಂಗಳೂರು: “ಪಿಲಿಕುಳ ಕಂಬಳ’ದ ಆಯೋಜನೆಗೆ ಕಾನೂನಾತ್ಮಕ ಅಡ್ಡಿಗಳು ಎದುರಾದ ಹಿನ್ನೆಲೆಯಲ್ಲಿ ವಸ್ತು ಸ್ಥಿತಿ ಅಧ್ಯ ಯನಕ್ಕಾಗಿ ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ರಚಿಸಿರುವ ತಜ್ಞರ ಸಮಿತಿ ನ.26ರಂದು ಪಿಲಿಕುಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಸಮಿತಿಯಲ್ಲಿ ಮೈಸೂರಿನಶ್ರೀ ಚಾಮರಾಜೇಂದ್ರಮೃಗಾಲಯದ ಉಪನಿರ್ದೇಶಕಿ ಸಿ.ವಿ. ದೀಪಾ, ಜಿಲ್ಲಾ ಪಶು ವೈದ್ಯಕೀಯ ಸೇವೆಗಳ ಇಲಾಖೆಯ ಉಪನಿರ್ದೇಶಕ ಡಾ| ಅರುಣ್‌ ಕುಮಾರ್‌ ಶೆಟ್ಟಿ, ಸುರ ತ್ಕಲ್‌ ಎನ್‌ಐಟಿಕೆ ಪ್ರಾಧ್ಯಾಪಕ ಪ್ರೊ| ಶ್ರೀ ನಿಕೇತನ್‌, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್‌ ಕೆ. ಇದ್ದಾರೆ.

ಕಂಬಳ ಆಯೋಜನೆಯಿಂದ ಮೃಗಾಲಯದ ಮೇಲೆ ಏನಾದರೂ ಪರಿಣಾಮ ಬೀರಿತೇ? ಶಬ್ದಮಾಲಿನ್ಯ ಸಹಿತ ವಿವಿಧ ರೀತಿಯ ಮಾಲಿನ್ಯಗಳು, ಜಾನುವಾರುಗಳ ಆರೋಗ್ಯದ ಸುರಕ್ಷೆ ಮೊದಲಾದ ವಿಷಯಗಳ ಕುರಿತಂತೆ ಅಧ್ಯಯನ ನಡೆಸಿ ಸಮಿತಿಯು ವಾರದೊಳಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದೆ. ಬಳಿಕ ಪಿಲಿಕುಳ ಕಂಬಳ ಆಯೋಜನೆ ಕುರಿತಂತೆ ಜಿಲ್ಲಾಡಳಿತ ತೀರ್ಮಾನಿಸಲಿದೆ.

ಪಿಲಿಕುಳದಲ್ಲಿನ ಕಂಬಳದಿಂದ ಮೃಗಾಲಯದ ಪ್ರಾಣಿಗಳಿಗೆ ಸಮಸ್ಯೆಯಾಗಲಿದೆ ಎಂದು ಪ್ರಾಣಿದಯಾ ಸಂಘ (ಪೆಟಾ) ಹೈಕೋರ್ಟ್‌ನಲ್ಲಿ ವಾದ ಮಂಡಿಸಿದೆ.

ಇಂದು ಕಂಬಳ ಸಮಿತಿ ಸಭೆ
ಜಿಲ್ಲಾ ಕಂಬಳ ಸಮಿತಿಯ ಸಭೆ ನ.26ರಂದು ಸಂಜೆ 3.45ಕ್ಕೆ ಮೂಡುಬಿದಿರೆಯ ಕಡಲಕರೆ ಸೃಷ್ಟಿ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ. ಸಭೆಯಲ್ಲಿ ಕೊಡಂಗೆ ಕಂಬಳದ ಸಾಧಕ – ಬಾಧಕಗಳ ವಿಚಾರ ವಿನಿಮಯ, 16ರ ಸಾಲಿನ ಚೀಟಿ ಹಾಕುವುದರ ಬಗ್ಗೆ ಹಾಗೂ ಗಂತಿನ ಸೆನ್ಸಾರ್‌ ಅಳವಡಿಕೆ ವಿಚಾರದ ಕುರಿತು ಚರ್ಚೆ ನಡೆಯುವ ಸಂಭವವಿದೆ.

ಶತಮಾನ ಹಿನ್ನೆಲೆಯ ಎಲ್ಲೂರು, ನಡಿಬೆಟ್ಟು ಕಂಬಳ

ಕುಂದಾಪುರ/ಶಿರ್ವ: ಸಾಂಪ್ರದಾಯಿಕ ಕಂಬಳಗಳು ಶಿಸ್ತುಬದ್ಧವಾಗಿ ನಡೆಯುತ್ತಿದ್ದು, ನ.27ರಂದು ಯಡ್ತಾಡಿ, ಗೋಳಿಹೊಳೆ ಗ್ರಾಮದ ಎಲ್ಲೂರು ಹಾಗೂ ಶಿರ್ವದ ನಡಿಬೆಟ್ಟಿನಲ್ಲಿ ಕಂಬಳ ನಡೆಯಲಿದೆ. ಈ ಮೂರು ಕಂಬಳಗಳಿಗೂ ಶತಮಾನಗಳ ಇತಿಹಾಸವಿದೆ.

ಎಲ್ಲೂರು ಕಂಬಳ
ಗೋಳಿಹೊಳೆ ಗ್ರಾಮದ ಎಲ್ಲೂರಿ ನಲ್ಲಿ ಪ್ರತಿವರ್ಷ ನಡೆಯುತ್ತಿರುವ ಕಂಬಳಕ್ಕೆ ಪುರಾತನ ಹಿನ್ನೆಲೆಯಿದೆ. 200 ವರ್ಷಗಳ ಇತಿಹಾಸದ ಕುಡೂರು ಮನೆತನದವರು ಈ ಕಂಬಳವನ್ನು ನಡೆಸುತ್ತಿದ್ದಾರೆ. ಕಳೆದ ಶತಮಾನದಲ್ಲಿ ದಿ| ಶಿವರಾಮ ಶೆಟ್ಟಿ, ಅವರ ಸಹೋದರ ಪಠೇಲರಾದ ದಿ| ಚಿಕ್ಕಯ್ಯ ಶೆಟ್ಟಿ ಅವರು 45-50 ವರ್ಷಗಳಿಗೂ ಹೆಚ್ಚು ಕಾಲ ಆಯೋಜಿಸುತ್ತಿದ್ದು, ಬಳಿಕ ಕೆಲವು ವರ್ಷ ಸದಾಶಿವ ಶೆಟ್ಟಿ, 35 ವರ್ಷ ಗಳಿಂದ ಬಿ. ಅಪ್ಪಣ್ಣ ಹೆಗ್ಡೆ ಅವರ ಪುತ್ರ ರಾಮ್‌ಕಿಶನ್‌ ಹೆಗ್ಡೆ ನೇತೃತ್ವದಲ್ಲಿ ನಡೆಯುತ್ತಿದೆ. ಹಿಂದೆ ಇದು ಜೈನರ ಭೂಮಿಯಾಗಿದ್ದು, ಇಲ್ಲಿ ಸ್ವಾಮಿ ಹಾಗೂ ಜೈನಜ್ಜಿ ಮೂರ್ತಿಗಳಿವೆ. ಕಂಬಳ ನಡೆಯುವ ದಿನ ಈ ಮೂರ್ತಿಗಳಿಗೆ ಪೂಜೆ ನಡೆಯುತ್ತದೆ.
ಕುಡೂರು (ಎಲ್ಲೂರು) ಮನೆತ ನದ ಹಿರಿಯರಾದ ಬಸೂÅರು ಅಪ್ಪಣ್ಣ ಹೆಗ್ಡೆಯವರ 90ನೇ ವರ್ಷಾ ಚರಣೆ ಹಿನ್ನೆಲೆಯಲ್ಲಿ ಈ ಬಾರಿ ಕಂಬಳವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ. ಈವರೆಗೆ 25-30 ಜೋಡಿ ಕೋಣ ಗಳಿದ್ದರೆ, ಈ ವರ್ಷ 60-70 ಜೋಡಿ ಬರುವ ನಿರೀಕ್ಷೆಯಿದೆ. ಹಗ್ಗ ಕಿರಿಯ, ಹಿರಿಯ, ಹಲಗೆ ವಿಭಾಗದಲ್ಲಿ ಸ್ಪರ್ಧೆಗಳಿವೆ ಎನ್ನುತ್ತಾರೆ ಬಿ. ರಾಮಕಿಶನ್‌ ಹೆಗ್ಡೆ.

ಶಿರ್ವ ನಡಿಬೆಟ್ಟು ಕಂಬಳ
ಶಿರ್ವ: ಶಿರ್ವ ನಡಿಬೆಟ್ಟು ಕಂಬಳ ಮೊದಲಿಗೆ ಸಾಂಪ್ರದಾಯಿಕ ಕಂಬಳವಾಗಿ, 1996ರಿಂದ ಆಧುನಿಕ ಜೋಡುಕರೆ ಕಂಬಳ ವಾಗಿ, 2014ರಿಂದ ಮತ್ತೆ ಸಾಂಪ್ರದಾಯಿಕ ಕಂಬಳ ವಾಗಿದೆ. ಬಂಟ ಸಮುದಾಯದ ನಡಿಬೆಟ್ಟು ಚಾವಡಿ ಮನೆತನದವರು ಇದನ್ನು ನಡೆಸು ತ್ತಾರೆ. ಈ ಮನೆತನಕ್ಕೆ 500-600 ವರ್ಷಗಳ ಹಿನ್ನೆಲೆಯಿದೆ. ಇಲ್ಲಿ ಕಂಬಳಕ್ಕೂ ಮುನ್ನ ಕುದಿ ಕಂಬಳ ನಡೆಯುತ್ತದೆ. ಕಂಬಳದ ಮುನ್ನಾ ದಿನ ರಾತ್ರಿ ಕಂಬಳ ಗದ್ದೆಯ ಬಳಿ ಕೊರಗ ಸಮುದಾಯ ದವರು ಡೋಲು ಬಾರಿಸಿ, ಪನಿಕುಲ್ಲುನು ಆಚರಣೆ ನಡೆಸುತ್ತಾರೆ. ಚಾವಡಿ ಮನೆಯಿಂದ ಅಡಿಕೆ ವೀಳ್ಯದೆಲೆಯೊಂದಿಗೆ ಕಾಣಿಕೆ ಪಡೆದು, ಮರುದಿನ ಕಂಬಳ ಮುಗಿಯುವವರೆಗೆ ಡೋಲು ಸೇವೆ ನಡೆಸುವುದು ವಾಡಿಕೆ. ಕಂಬಳ ದಿನ ಶಿರ್ವ ಶ್ರೀ ವಿಷ್ಣುಮೂರ್ತಿ ದೇವರಿಗೆ ಹೂವಿನ ಪೂಜೆ, ಗೆಜ್ಜಾಲು, ಕಂಬಳದ ಮಂಜೊಟ್ಟಿಯ ನಾಗದೇವರಿಗೆ ಪೂಜೆ, ಚಾವಡಿಯ ದೈವ ಜುಮಾ ದಿಗೆ ಸೇವೆ ನಡೆಯುತ್ತದೆ. ಬಳಿಕ ಬಂಟ ಕೋಲ ನಡೆದು, ಕೊಂಬು, ವಾದ್ಯ ಘೋಷ ಗಳೊಂದಿಗೆ ಮೆರವಣಿ ಗೆಯಲ್ಲಿ ಕಂಬಳ ಕರೆಗೆ ಬಂದು ಪೂಜೆ ಸಲ್ಲಿಸಿ, ಕಾಯಿ ಒಡೆದು, ಕೋಣಗಳನ್ನು ಗದ್ದೆಗಿಳಿಸಲಾಗುತ್ತದೆ.

ನಡಿಬೆಟ್ಟು ಮನೆತನದವರ ಕೋಣಗಳ ಓಟದೊಂದಿಗೆ ಕಂಬಳ ಆರಂಭಗೊಂಡರೆ, ಕಂಬಳ ಆಯೋಜ ನೆಯ ಕಷ್ಟಕಾಲದಲ್ಲಿ ನೆರವಾದ ನಂಗೆಟ್ಟು ಮನೆಯ ಕೋಣಗಳ ಓಟದೊಂದಿಗೆ ಸಮಾಪನಗೊಳ್ಳುತ್ತದೆ. ಬಳಿಕ ಬಂಟ ದೈವವು ಕಂಬಳ ಕರೆಗೆ ಸುತ್ತು ಹಾಕಿ, ಮನೆಗೆ ಹಿಂದಿರುಗಿ ಬಂದು ಅಗೇಲು ಸೇವೆಯೊಂದಿಗೆ ಕಂಬಳ ಪ್ರಕ್ರಿಯೆ ಮುಗಿಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next